Wednesday, December 16, 2009

'ಆಪ್ತ' ಕಲಾವಿದ ಕುಂಬಳೆ ಶ್ರೀಧರ ರಾವ್

ಸಾಧನೆಯ ಗೆರೆಯನ್ನು ದಾಟಿರುವ ಕಲಾವಿದರನ್ನು ಜ್ಞಾಪಿಸಿಕೊಂಡರೆ ಸಾಕು, ಅವರ ಪಾತ್ರಗಳು ಕಣ್ಣೆದುರು ಧುತ್ತೆಂದು ನಿಂತುಬಿಡುತ್ತದೆ! ಪಾತ್ರಗಳ ಹೆಸರನ್ನು ನೆನಪಿಸಿಕೊಂಡರೆ, ನಿರ್ವಹಿಸುತ್ತಿದ್ದ ಕಲಾವಿದರು ಮಿಂಚಿ ಮರೆಯಾಗುತ್ತಾರೆ!

ಒಂದು ಕಾಲಘಟ್ಟದ 'ಅಮ್ಮುಬಲ್ಲಾಳ್ತಿ, ದಾಕ್ಷಾಯಿಣಿ, ಲಕ್ಷ್ಮೀ, ಸುಭದ್ರೆ' ಪಾತ್ರಗಳನ್ನು ಜ್ಞಾಪಿಸಿಕೊಂಡರೆ ಕುಂಬ್ಳೆ ಶ್ರೀಧರ ರಾವ್ ಕಣ್ಣೆದುರು ಬರುತ್ತಾರೆ. ಕೊರಗ ಶೆಟ್ರ ಇರಾ ಮೇಳದಿಂದ ಶ್ರೀಧರ ರಾಯರ ವೃತ್ತಿ. ಮುಂದೆ ಕೂಡ್ಲು, ಪುನಃ ವಿಠಲ ಶೆಟ್ರ ಇರಾ (ಕುಂಡಾವು), ಮೂಲ್ಕಿ, ಕರ್ನಾಟಕ ಮೇಳಗಳ ತಿರುಗಾಟ. ಅಸ್ಥಿರ ನೆಲೆ ಸ್ಥಿರವಾದದು ಶ್ರೀ ಧರ್ಮಸ್ಥಳ ಮೇಳದಲ್ಲಿ - ನಿರಂತರ ನಾಲ್ಕು ದಶಕಗಳ ವ್ಯವಸಾಯ.

ಆರಂಭದಲ್ಲಿ ಶೇಣಿಯಂತಹ ಹಿರಿಯರ ಜತೆಗಾರಿಕೆ. ಪಾತ್ರ ನಿರ್ವಹಿಸುತ್ತಾ ಕಲಿಕೆ. ಆಗಲೇ ಶೇಣಿಯವರ ರಾವಣ, ವಾಲಿ ಪಾತ್ರಗಳಿಗೆ 'ಮಂಡೋದರಿ, ತಾರೆ'ಯ ಸಾಥಿ. ಅವರ ನಿತ್ಯನೂತನ ಹೊಳಹುಗಳಿಗೆ ನಿತ್ಯ ಸ್ಪಂದಿಸುತ್ತಾ ಬೆಳೆದ ಕುಂಬ್ಳೆಯವರ ಪಾತ್ರಗಳನ್ನು ನೋಡಿದಾಗ 'ಮೂರನೇ ತರಗತಿ' ಕಲಿತವರೆಂದು ಹೇಳಲು ಮುಜುಗರವಾಗುತ್ತದೆ.

ಶ್ರೀ ಎಡನೀರು ಮಠದಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲೂ ಹಿರಿಯರೊಂದಿಗೆ ಆರ್ಥಧಾರಿಯಾಗಿರುವುದು ಅವರ 'ಅಕ್ಷರಕೊರತೆ'ನ್ನು ನೀಗಿಸಿತು. ಹಾಗಾಗಿಯೇ ಇರಬಹುದೇನೋ - ಅವರ ಕೆಲವೊಂದು ಪಾತ್ರಗಳಲ್ಲಿ ಕಾಣುತ್ತದೆ - 'ಎದುರೇಟು, ಸಿಲುಕಿಸುವ ಕೊಕ್ಕೆ, ಪ್ರತ್ಯುತ್ಪನ್ನಮತಿ!

ಇರಾ ಮೇಳದಲ್ಲಿದ್ದಾಗ 'ಕನಕಮಾಲಿನಿ ಪರಿಣಯ' ಪ್ರಸಂಗದಲ್ಲಿ ಅರುವ ಕೊರಗಪ್ಪ ಶೆಟ್ರ 'ಪುಷ್ಪಧ್ವಜ'ನೊಂದಿಗೆ ಇವರ 'ಕನಕಮಾಲಿನಿ' ಪಾತ್ರವು ಮೆರೆದ ದಿನಗಳು ಆಗಿನ 'ದೊಡ್ಡ ಸುದ್ದಿ'.

ಶ್ರೀಧರರು ಧರ್ಮಸ್ಥಳ ಮೇಳಕ್ಕೆ ಸೇರುವ ಹೊತ್ತಿಗೆ ಪಾತಾಳ ವೆಂಕಟ್ರಮಣ ಭಟ್ಟರು 'ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ' ಪ್ರಸಂಗದಲ್ಲಿ 'ಅಮ್ಮುಬಲ್ಲಾಳ್ತಿ' ಪಾತ್ರವನ್ನು ಕಡೆದಿದ್ದರು. ಅದೇ ನಡೆಯಲ್ಲಿ ಸಾಗಿದ ಶ್ರೀಧರ್, ಅದನ್ನು ಎಟುಕದಷ್ಟು ಎತ್ತರದಲ್ಲಿ ನಿಲ್ಲಿಸಿದ್ದಾರೆ.

ಕಡತೋಕರ ಸಾರಥ್ಯದಲ್ಲಿ 'ಸುದರ್ಶನ ವಿಜಯ' ಪ್ರಸಂಗ ಮನೆಮಾತು. ಕುಂಬಳೆ ಸುಂದರ ರಾಯರ 'ವಿಷ್ಣು', ಶ್ರೀಧರರ 'ಲಕ್ಷ್ಮೀ', ಕರ್ಗಲ್ಲು ವಿಶ್ವೇಶ್ವರ ಭಟ್ಟರ 'ಸುದರ್ಶನ' - ಈ ತ್ರಿವೇಣಿ ಸಂಗಮದ ಮಾತಿನ ಲೋಕದಲ್ಲಿ 'ಸರಸ್ವತಿ' ಪ್ರತ್ಯಕ್ಷ! ಇಹ ಮರೆಯುವಷ್ಟು ಪ್ರೇಕ್ಷಕರ ತಲ್ಲೀನತೆ.

ಪುತ್ತೂರು ನಾರಾಯಣ ಹೆಗಡೆಯವರ 'ಹಿರಣ್ಯಕಶಿಪು' ಪಾತ್ರಕ್ಕೆ ಶ್ರೀಧರರ 'ಕಯಾದು' ಪಾತ್ರ. ಹೆಗಡೆಯವರ 'ಋತುಪರ್ಣ', ವಿಟ್ಲ ಜೋಯಿಸರ 'ಬಾಹುಕ', ಇವರ 'ದಮಯಂತಿ' ಪಾತ್ರಗಳು; ಮುಂದೆ ಗೋವಿಂದ ಭಟ್ಟರ 'ಋತುಪರ್ಣ', ನಯನಕುಮಾರ್ರ 'ಬಾಹುಕ' ಪಾತ್ರಗಳಿಗೆ ಗಟ್ಟಿಜತೆ. ಸುಂದರ ರಾಯರ 'ಈಶ್ವರ' ಮತ್ತು ಇವರ 'ದಾಕ್ಷಾಯಿಣಿ'; ಪುತ್ತೂರು ಶ್ರೀಧರ ಭಂಡಾರಿಗಳ 'ಬಬ್ರುವಾಹನ', ಆಭಿಮನ್ಯು'ಗೆ ಇವರ 'ಚಿತ್ರಾಂಗದೆ, ಸುಭದ್ರೆ' - ದೀರ್ಘಕಾಲದ ಜತೆಗಾರಿಕೆ - ಇವೆಲ್ಲಾ 'ಮರೆಯಲಾಗದ' ಯಕ್ಷರಾತ್ರಿಗಳು.

ಗಜಗೌರಿ ವ್ರತದ 'ಕುಂತಿ', ಕೃಷ್ಣಲೀಲೆಯ 'ಯಶೋದೆ, ಚಂದ್ರಮತಿ, ವಿಶ್ವಾಮಿತ್ರ, ಜಮದಗ್ನಿ - ಅನುಕರಣೆಯಿಲ್ಲದ ಪಾತ್ರಶಿಲ್ಪಗಳು. ತನ್ನೆಲ್ಲಾ ಪಾತ್ರ ನಿರ್ವಹಣೆಯ ಹಿಂದಿನ 'ಮೋಡೆಲ್' ಯಾರು ಅಂತ ಅವರನ್ನು ಕೆಣಕಿದಾಗ ಕೋಳ್ಯೂರು ರಾಮಚಂದ್ರ ರಾಯರನ್ನು ತೋರಿಸುತ್ತಾರೆ.

ಶ್ರೀಧರ ರಾಯರು ಗರತಿ ಪಾತ್ರಗಳಲ್ಲಿ ಇಷ್ಟವಾಗುತ್ತಾರೆ. ಭಕ್ತಿ ಮತ್ತು ಕರುಣ ರಸಗಳಿಗೆ ಹೊಂದುವ ಶಾರೀರ. ಹಿತ-ಮಿತ ನಾಟ್ಯ. ಪ್ರಿಯವಾಗುವ ರಂಗನಡೆ. ಶುಚಿ-ರುಚಿಯ ಮಾತುಗಾರಿಕೆ. ಲಹರಿ ಬಂದಾಗ 'ಸ್ವಲ್ಪ ಹೆಚ್ಚೇ' ಅನ್ನುವಷ್ಟು ಮಾತು. ಇಂತಹ ಸಂದರ್ಭದಲ್ಲಿ ಕೆಲವು ಸಲ ಪ್ರೇಕ್ಷಕರೊಂದಿಗೆ ಮಾತನಾಡುವಂತೆ ಭಾಸವಾಗುತ್ತದೆ.

ಮುಖದಲ್ಲಿ ನೆರಿಗೆ ಬಂದ ನಂತರವೂ 'ಸ್ತ್ರೀಪಾತ್ರ'ದಲ್ಲಿ ಕಾಣಿಸಿಕೊಳ್ಳುವುದು ಅಷ್ಟೊಂದು ಚಂದವಲ್ಲ. 'ಅದು ಸ್ತ್ರೀ ಅಲ್ಲವಲ್ಲ. ಸ್ತ್ರೀ ಪಾತ್ರ ತಾನೆ. ಅದಕ್ಕೆ ವಯಸ್ಸನ್ನು ಥಳಕು ಹಾಕಬಾರದು' ಎಂಬುದೊಂದು ವಾದವಿದೆ. ಇರಲಿ. ಶ್ರೀಧರ ರಾಯರು ಸ್ತ್ರೀಪಾತ್ರ ನಿರ್ವಹಣೆಯಲ್ಲಿ ಉತ್ತುಂಗದಲ್ಲಿದ್ದಾಗಲೇ, ಪುರುಷ ಪಾತ್ರಕ್ಕೆ 'ಟರ್ನ್’ ತೆಕ್ಕೊಂಡು ಯಶಸ್ಸಾದವರು. 'ನನ್ನ ವಯಸ್ಸು ಪಾತ್ರದ ಮೇಲೆ ಪರಿಣಾಮ ಬೀರಿತು ಅನ್ನುವಾಗಲೇ ಈ ನಿರ್ಧಾರಕ್ಕೆ ಬಂದೆ' ಅನ್ನುತ್ತಾರೆ.

ಸ್ತ್ರೀಪಾತ್ರದ ಲಾಲಿತ್ಯ, ಮಾಧುರ್ಯಗಳು ಒಮ್ಮೆ ಒಗ್ಗಿ ಹೋದರೆ, ಅದರಿಂದ ಹೊರಬರಲು ಒಂದಷ್ಟು ಕಾಲ ಬೇಕು. ಪುರುಷ ಪಾತ್ರ ಮಾಡಿದಾಗ 'ಈತ ಸ್ತ್ರೀವೇಷಧಾರಿ' ಎಂದು ಫಕ್ಕನೆ ಗುರುತಿಸುವಷ್ಟು ಲಾಲಿತ್ಯ ಅಂಟಿಕೊಂಡಿರುತ್ತದೆ. ನಡೆಯಲ್ಲಿ, ನುಡಿಯಲ್ಲಿ ಕೂಡಾ.

ಶ್ರೀಧರರ ಪುರುಷ ಪಾತ್ರಗಳಲ್ಲಿ 'ಎತ್ತಿ ಹೇಳು'ವ ಇಂತಹ ದೋಷಗಳು ಕಾಣಿಸುವುದಿಲ್ಲ. ಪಕಡಿ ವೇಷದಿಂದ ಕಿರೀಟದ ತನಕ ನಿರಾಳ, ನಿರುಮ್ಮಳ. ಒಂದು ದೃಷ್ಟಿಯಿಂದ 'ಒಂದು ಮೇಳಕ್ಕೆ ಅತೀ ಅವಶ್ಯ' ಕಲಾವಿದ. ಕಾರಣ, ಎಲ್ಲಾ ಪಾತ್ರಗಳನ್ನು ನಿರ್ವಹಿಸುವ ಕಲಾವಂತಿಕೆ.

ಉದಾ:. ಕೃಷ್ಣಾರ್ಜುನ ಕಾಳಗ ಪ್ರಸಂಗವನ್ನು ತೆಕ್ಕೊಂಡರೆ, ಅದರಲ್ಲಿ 'ಕೃಷ್ಣ' ಪಾತ್ರಕ್ಕೂ ಸೈ, 'ಅರ್ಜುನ’ನಿಗೂ ಓಕೆ. ಜತೆಗೆ ಬಲರಾಮ, ಸುಭದ್ರೆ. 'ನನ್ನ ಪಾತ್ರವಷ್ಟಕ್ಕ್ರೇ ತಯಾರಾಗುತ್ತಿರಲಿಲ್ಲ. ಇದಿರು ಪಾತ್ರಗಳ ಸಂಭಾಷಣೆ, ನಡೆಗಳು, ವಾದ-ವಿವಾದ, ಮಟ್ಟು-ಪೆಟ್ಟುಗಳೆಲ್ಲವನ್ನೂ ಮಾನಸಿಕವಾಗಿ ಅಭ್ಯಾಸ ಮಾಡುವುದು ನನ್ನ ಅಭ್ಯಾಸ. ಅದೀಗ ಪ್ರಯೋಜನಕ್ಕೆ ಬಂತು' ಎನ್ನುತ್ತಾರೆ.
ಅಂತೆಯೇ ದೇವಿ ಮಹಾತ್ಮೆ ಪ್ರಸಂಗದಲ್ಲಿ - ವಿಷ್ಣು, ಬ್ರಹ್ಮ, ವಿದ್ಯುನ್ಮಾಲಿ, ದೇವಿ; ಅಗತ್ಯಬಿದ್ದರೆ 'ರಕ್ತಬೀಜ'! ಬೆಳಗ್ಗಿನ ಜಾವದ ಬೀಸುನಡೆಯ ಪಾತ್ರಗಳು ಸಹ. ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯಲ್ಲಿ 'ಈಶ್ವರ' ಪಾತ್ರದ ಇವರ ಜಾಗದಲ್ಲಿ ಬೇರೊಬ್ಬ ಕಲಾವಿದರನ್ನು ಕಲ್ಪಿಸಲಾರದಷ್ಟು ಪೋಷಣೆ.


ಕುಂಬಳೆ ಕಮಲಾಕ್ಷ ನಾಯಕ್ ಮತ್ತು ಚಂದು ಅವರಲ್ಲಿ ನಾಟ್ಯಾಭ್ಯಾಸ, ಉಡುಪಿ ಕಲಾ ಕೇಂದ್ರದಲ್ಲಿ ಒಂದು ಮಳೆಗಾಲ ಬಡಗು ನೃತ್ಯಭ್ಯಾಸ. ಮತ್ತೆಲ್ಲಾ ಕಲಿಕೆಗಳು ರಂಗದಲ್ಲಿ. ಯಾರದ್ದೇ ಪಡಿಯಚ್ಚಾಗಾದ ಅಭಿವ್ಯಕ್ತಿ. 'ದೈನಂದಿನ ಸವಾಲುಗಳು ನನ್ನ ಬದುಕನ್ನು ರೂಪಿಸಿವೆ'-ಶ್ರೀಧರರ ಮಾತಿನ ಹಿಂದೆ ನೋವಿದೆ-ನಲಿವಿದೆ.

'ಧರ್ಮಸ್ಥಳ ಮೇಳ ಮತ್ತು ಪೂಜ್ಯ ಖಾವಂದರ ಪ್ರೋತ್ಸಾಹಗಳೇ ನನ್ನ ಯಶಸ್ಸಿನ ಗುಟ್ಟು' ಎನ್ನಲು ಮರೆಯಲಿಲ್ಲ. ಸಾರ್ವಜನಿಕ ಜೀವನದಲ್ಲಿ ಎಲ್ಲರಂತಲ್ಲ! ವಿನಯ - ಬದುಕು ಕಲಿಸಿದ ಪಾಠ. ರಂಗದಲ್ಲಾಗಲೀ, ನಿತ್ಯ ಜೀವನದಲ್ಲಾಗಲೀ 'ತನ್ನ ಮಿತಿಯರಿತು' ವ್ಯವಹಾರ. ಇದು ಎಲ್ಲರಲ್ಲೂ ಸುಲಭವಾಗಿ ಕಾಣದು. ಇನ್ನೊಬ್ಬರ ಸಮಸ್ಯೆಯನ್ನೋ, ಜವಾಬ್ದಾರಿಯನ್ನು ತನ್ನದೆಂದು 'ಹೊತ್ತುಕೊಳ್ಳುವ' ಪರೋಪಕಾರಿ! ಇದರಿಂದ ಒಂದಷ್ಟು ಕಷ್ಟ-ನಷ್ಟಗಳು. ಅವೆಲ್ಲವನ್ನೂ 'ಸಮತೂಕ'ದಿಂದ ನೋಡುವ ಜಾಯಮಾನ.

ಕೆಲವೊಂದು ಸಲ ನಮ್ಮ ಆಪ್ತರಾಗಿದ್ದರೂ, ಬಣ್ಣದ ಮನೆಗೆ (ಚೌಕಿ) ಹೋದಾಗ ಅಪರಿಚಿತರಂತೆ ವರ್ತಿಸುವ ಕಲಾವಿದರನ್ನು ಹತ್ತಿರದಿಂದ ಬಲ್ಲೆ. ಈ ಸಾಲಿಗೆ ಶ್ರೀಧರ ರಾಯರು ಸೇರುವುದಿಲ್ಲ. ವಿನಯವು ಅವರಿಗೆ 'ಮುಖವಾಡ'ವಲ್ಲ. ಸಜ್ಜನಿಕೆಯು 'ಸ್ಟಂಟ್' ಅಲ್ಲ. ಒಂದು ರೀತಿಯ ಅಪರೂಪದ ವ್ಯಕ್ತಿತ್ವ.

ತಂದೆ ಮಹಾಲಿಂಗ. ತಾಯಿ ಕಾವೇರಿ. ಪತ್ನಿ ಸುಲೋಚನಾ. ಅಧ್ಯಾಪಿಕೆ. ಮೂವರು ಮಕ್ಕಳು. ಉಪ್ಪಿನಂಗಡಿ ಸನಿಹದ ಕೃಷ್ಣನಗರದಲ್ಲಿ ವಾಸ. ಶ್ರೀಕ್ಷೇತ್ರ ಧರ್ಮಸ್ಥಳ, ಶ್ರೀ ಎಡನೀರು ಮಠ, ಮಂಗಳೂರಿನ ಕೃಷ್ಣಸಭಾ, ಪುತ್ತೂರಿನಲ್ಲಿ ಯಕ್ಷ ಸುಹೃತ್ ಸಂಮಾನ ..ಗಳಲ್ಲಿ ಸಂಮಾನಿತರು.

'ನನ್ನ ಯಕ್ಷಗಾನದ ಆರಂಭದಲ್ಲಿ ಶೇಣಿಯಂತಹ ಹಿರಿಯರ ಮಾರ್ಗದರ್ಶನವು ನನಗೆ ಯಕ್ಷಾಕ್ಷರ ಕಲಿಸಿದೆ. ಇವರ ಸಾಂಗತ್ಯ ಮಾತುಗಾರಿಕೆಗೆ ತುಂಬಾ ಪ್ರಯೋಜನವಾಗಿದೆ. ಅರುವತ್ತು ದಾಟಿದ ಈ ಸಂದರ್ಭದಲ್ಲಿ (ಮಾರ್ಚ್ ೨೦೦೯) ಶೇಣಿಯವರ ಹೆಸರಿನ ಸಂಮಾನ ಪ್ರಾಪ್ತವಾಗಿರುವುದು ಧನ್ಯತೆಯನ್ನು ತಂದಿದೆ' ಕೃತಜ್ಞತೆಯಿಂದ ಭಾವುಕರಾಗುತ್ತಾರೆ.

No comments:

Post a Comment