Friday, November 23, 2012

'ಬೊಳ್ಳಿಂಬಳ ಪ್ರಶಸ್ತಿ' ಪುರಸ್ಕೃತ ಭಾಗವತ ಕೊರಗಪ್ಪ ನಾಯ್ಕ

ಚಿಕ್ಕ ಹಳ್ಳಿ ಮನೆ. ಜಗಲಿನಲ್ಲಿ ಭಾಗವತ ಕೊರಗಪ್ಪ ನಾಯ್ಕರು ಕುಳಿತು ಯೋಚಿಸಿದಂತೆ ಭಾಸವಾಗುತ್ತದೆ. ನೆನಪಿನ ಗೆರೆಗಳು ಮಸುಕಾಗಿವೆ. ಅಪರೂಪಕ್ಕೆ ಗೆರೆಯು ಮಿಂಚಿ ಮರೆಯಾದಾಗ ವಿಷಣ್ಣ ಮುಖ ಅರಳುತ್ತದೆ. ನೆನಪುಗಳು ರಾಚಿ ಬರುತ್ತವೆ. ಅದನ್ನು ಹಂಚಿಕೊಳ್ಳಲು ಸಾಧ್ಯವಾಗದೆ ಚಡಪಡಿಸುತ್ತಾರೆ. ನಿಮಿಷದ ಬಳಿಕ ಮತ್ತದೇ ಪೂರ್ವಸ್ಥಿತಿ.

ಒಂದು ಕಾಲಘಟ್ಟದ ರಂಗ ಬದುಕಿನಲ್ಲಿ ರಾತ್ರಿಯಿಡೀ ಭಾಗವತಿಕೆ ಮಾಡಿದ ನಾಯ್ಕರು ಮಾತನಾಡಲು ಅಶಕ್ತರು. ಹತ್ತು ವರುಷಗಳಿಂದ ಬಾಧಿಸಿದ ಅಸೌಖ್ಯತೆ. ನಿತ್ಯ ಆಸ್ಪತ್ರೆ ಅಲೆದಾಟ. ಗುಣವಾಗುವ ನಿರೀಕ್ಷೆಯಲ್ಲಿ ವೈದ್ಯರುಗಳ ಭೇಟಿ. ಶುಶ್ರೂಷೆ. ಈಗ ಅತ್ತಿತ್ತ ನಡೆಯುವಷ್ಟು, ಗ್ರಹಿಸುವಷ್ಟು ಶಕ್ತ. ನೆನಪು ಮಾತ್ರ ದೂರ, ಬಹುದೂರ.

ಅವರ ಸಮಕಾಲೀನ ಕಲಾವಿದರನ್ನು ನೆನಪಿಸಿಕೊಟ್ಟರೆ, ಕಳೆದ ದಿನಗಳು ಒಂದು ಕ್ಷಣ ನೆನಪಿನಂಗಳದಲ್ಲಿ ಕುಣಿಯುತ್ತವೆ. ಪ್ರಸಂಗವನ್ನು, ಪದ್ಯವನ್ನು ಜ್ಞಾಪಿಸಿದರೆ ಪದ್ಯದ ಸೊಲ್ಲನ್ನು ತಕ್ಷಣ ಹೇಳಿಬಿಡುತ್ತಾರೆ. ಸುತ್ತೆಲ್ಲಾ ಜರಗುತ್ತಿದ್ದ ತಾಳಮದ್ದಳೆಗಳ ಸ್ವಾರಸ್ಯ ಹೇಳಿದರೆ ಸ್ಪಂದಿಸುತ್ತಾರೆ. ಎಲ್ಲವೂ ನಿಮಿಷಾರ್ಧ. ಅಸ್ಪಷ್ಟ.

ನಿವೃತ್ತ ಅಧ್ಯಾಪಕ, ಅರ್ಥಧಾರಿ ಬಿ.ಎಸ್.ಓಕುಣ್ಣಾಯರು ನಾಯ್ಕರ ಒಡನಾಡಿ. ಪಾಣಾಜೆ ಸುತ್ತಮುತ್ತ ನಡೆಯುತ್ತಿದ್ದ ಬಹುತೇಕ ತಾಳಮದ್ದಳೆಗಳಲ್ಲಿ ಕೊರಗಪ್ಪ ನಾಯ್ಕರದ್ದೇ ಭಾಗವತಿಕೆ. ಇವರಿಗೆ ನಿಕಟ ಸಂಪರ್ಕ. ಈಚೆಗೆ ಓಕುಣ್ಣಾಯರ ಜತೆ ಅವರ ಮನೆಗೆ ಭೇಟಿ ನೀಡಿದಾಗ ಇವರನ್ನು ಗುರುತಿಸುವಲ್ಲಿ ನಾಯ್ಕರು ಕಷ್ಟಪಟ್ಟಿದ್ದರು. ಗೊತ್ತಾದ ಬಳಿಕ ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದಿದ್ದರು.

ಕಾಸರಗೋಡು ಜಿಲ್ಲೆಯ ಕಾಟುಕುಕ್ಕೆ ಸನಿಹದ ಖಂಡೇರಿಯು ಕೊರಗಪ್ಪ ನಾಯ್ಕರ ಹುಟ್ಟೂರು. ಪ್ರಸ್ತುತ ಸನಿಹದ ಅರೆಕ್ಕಾಡಿಯಲ್ಲಿ ಹಲವು ಸಮಯದಿಂದ ವಾಸ. ಈಗವರಿಗೆ ಅರುವತ್ತೆಂಟು ವರುಷ ಪ್ರಾಯ.

ತಂದೆ ಐತು ನಾಯ್ಕ. ತಾಯಿ ಅಮ್ಮು. ಮೂರರ ತನಕ ವಿದ್ಯಾಭ್ಯಾಸ. ಬಾಲ್ಯದಿಂದಲೇ ಯಕ್ಷಗಾನದತ್ತ ಒಲವು. ಅದರಲ್ಲೂ ಭಾಗವತನಾಗಬೇಕೆಂಬ ಹಂಬಲ. ಕೇಳಿ ಕಲಿತುದೇ ಹೆಚ್ಚು. ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆಯ ಪಾಠ. ಬಣ್ಣದ ಕುಂಞಿರಾಮರಿಂದ ನಾಟ್ಯಾಭ್ಯಾಸ. ಲಕ್ಷ್ಮಣ ಆಚಾರ್ಯರಿಂದ ಮದ್ದಳೆಯ ಕಲಿಕೆ. ಮುಂದೆ ನಿಡ್ಲೆ ನರಸಿಂಹ ಭಟ್ಟರು ಚೆಂಡೆಗೆ ಗುರುವಾದರು.

ಯಕ್ಷ ಪ್ರಚಂಡರ ಜತೆಗಿದ್ದ ಅನುಭವವು ಕೊರಗಪ್ಪ ನಾಯ್ಕರ ಮೇಳ ಜೀವನದ ಸುಭಗತನಕ್ಕೆ ಹೊಸ ದಿಕ್ಕು ತೋರಿತು. ಮೂವತ್ತೇಳು ವರುಷ ಶ್ರೀ ಕಟೀಲು ಮೇಳವೊಂದರಲ್ಲೇ ತಿರುಗಾಟ. ಸಂಗೀತಗಾರನಾಗಿ ಪಡಿಮಂಚವೇರಿದ ಭಾಗವತ ಮುಂದೆ ಇಡೀ ರಾತ್ರಿ ಆಟವನ್ನು ಆಡಿಸುವ ತನಕ ನಿಷ್ಣಾತರಾದರು.

ಕಟೀಲು ಮೇಳ ಸೇರುವ ಪೂರ್ವದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಒಂದು ವರುಷ, ಕುಂಡಾವಿನಲ್ಲಿ ಒಂದು ವರುಷ ಮತ್ತು ಪುತ್ತೂರು ಮೇಳಗಳಲ್ಲಿ ವ್ಯವಸಾಯ. ಮಳೆಗಾಲದಲ್ಲಿ ಸ್ಥಳೀಯವಾಗಿ ತಾಳಮದ್ದಳೆಗಳಲ್ಲಿ ಭಾಗಿ.

ತಾಳಮದ್ದಳೆಯ ಬಿರುಬಿನ ಕಾಲ. ಮನೆಗಳಲ್ಲಿ ಶುಭ ಸಮಾರಂಭಗಳು ನಡೆದಾಗ ಅಲ್ಲೆಲ್ಲಾ ತಾಳಮದ್ದಳೆಗೆ ಮೊದಲ ಮಣೆ. ಉದ್ಧಾಮರ ಕೂಟಗಳು. ಆ ದಿನಗಳಲ್ಲಿ ನಾಯ್ಕರಿಗೆ ಬಿಡುವಿರದ ದುಡಿಮೆ. ಸಮಯ ಸಿಕ್ಕಾಗ ಆಸಕ್ತರಿಗೆ ಭಾಗವತಿಕೆ ಕಲಿಸಿಕೊಟ್ಟುದೂ ಇದೆ.
'
ಕರ್ನಾಟಕ ಮೇಳದಲ್ಲಿ ತುಳು ಪ್ರಸಂಗಗಳನ್ನು ಆಡುವ ಸಂದರ್ಭದಲ್ಲಿ ಇವರನ್ನು ವಿಶೇಷವಾಗಿ ಭಾಗವತಿಕೆಗೆ ಮೇಳದ ಯಜಮಾನರು ಆಹ್ವಾನಿಸುತ್ತಿದ್ದರು. ತುಳು ಭಾಷೆಯ ಕುರಿತು ಇವರಿಗಿದ್ದ ಅನುಭವವೇ ಇದಕ್ಕೆ ಕಾರಣ,' ಎಂದು ಗಂಡನಿಗೆ ಸಾಥ್ ಆಗುತ್ತಾರೆ ಮಡದಿ ಲಕ್ಷ್ಮೀ.

ಅವರು ಇನ್ನು ಹಾಡುವುದಿಲ್ಲ! ಅವರು ಹಾಡಿದ ಒಂದು ಕ್ಯಾಸೆಟ್ ಎಲ್ಲಾದರೂ ಸಿಕ್ಕರೆ ಅದು ದಾಖಲೆಯಾಗುತ್ತಿತ್ತು, ಎನ್ನುವ ಆಶಯ ಲಕ್ಷ್ಮೀಯವರಿಗಿದೆ. ಗಂಡನ ಆಸಕ್ತಿಯನ್ನು ಗೌರವದಿಂದ ಕಾಣುವ, ಹೆಮ್ಮೆ ಪಟ್ಟುಕೊಳ್ಳುವ ಲಕ್ಷ್ಮೀಯವರ ಆಸೆ ಹುಸಿಯಾಗದು.
 
ಪ್ರಸ್ತುತ ಲಕ್ಷ್ಮೀ ಗಂಡನಿಗೆ ಆಸರೆ. ನಾಯ್ಕರಿಗೆ ದನಿ. ಅಸ್ಪಷ್ಟ ಮಾತುಗಳಿಗೆ ಸ್ಪಷ್ಟತೆಯ ಸ್ಪರ್ಶ ನೀಡುವ ಮಾರ್ಗದರ್ಶಕಿ. ಸರಕಾರದ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಅಲ್ಪಕಾಲ ಕೆಲಸ. ಮಗ ದೇವಿಪ್ರಸಾದ್ ಸ್ವ-ಉದ್ಯೋಗದ ದುಡಿಮೆ. ನಾಯ್ಕರ ಅಸೌಖ್ಯತೆಗೆ ಇವರೆಲ್ಲರ ದುಡಿಮೆಯಲ್ಲಿ ಏನಿಲ್ಲವೆಂದರೂ ತಿಂಗಳಿಗೆ ಒಂದು ಸಾವಿರ ರೂಪಾಯಿ ಔಷಧಿಗೆ ಮೀಸಲಿಡುವಂತಹ ಸ್ಥಿತಿ.
 
ಮಾಸಾಶನಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಎರಡು ವರುಷಗಳು ಸಂದುಹೋದುವು. ಇಂತಹ ಅಶಕ್ತ ಸ್ತಿತಿಯಲ್ಲಿ ಕಲಾವಿದನಿದ್ದಾಗ ಸಿಗುವ ಕಿಂಚಿತ್ ಮೊತ್ತವು ಕೊನೇ ಪಕ್ಷ ಔಷಧಿವೆಚ್ಚವನ್ನಾದರೂ ಸರಿದೂಗಿಸಿತಲ್ವಾ.
ಕಾಟುಕುಕ್ಕೆ ಕೊರಗಪ್ಪ ನಾಯ್ಕರ ಸೇವಾತತ್ಪರತೆಗೆ ಲಭ್ಯವಾದ ಪ್ರಶಸ್ತಿಗಳು ಹಲವು. ಕುಂಬಳೆಯ ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನ, ಬೊಂಡಾಳ ಪ್ರಶಸ್ತಿ, ಅಳಿಕೆ ರಾಮಯ್ಯ ರೈ ಸ್ಮಾರಕ ಪ್ರಶಸ್ತಿಗಳ ಜತೆಗೆ; ವಿವಿಧ ಸಂಮಾನ, ಪುರಸ್ಕಾರಗಳು ಪ್ರಾಪ್ತವಾಗಿವೆ. (ಅಶಕ್ತರಿಗೆ ಶಕ್ತಿ ಕೊಡಲು ಮಿಡಿಯುವ ಮನಸ್ಸುಗಳಿಗಾಗಿ ಕೊರಗಪ್ಪರ ಚಿರಂಜೀವಿ ದೇವಿಪ್ರಸಾದರ ಸಂಪರ್ಕ ಸಂಖ್ಯೆ 09496560392)
 
ಪಾಣಾಜೆಯ 'ಬೊಳ್ಳಿಂಬಳ ಶಂಕರನಾರಾಯಣ ಓಕುಣ್ಣಾಯ ಪ್ರತಿಷ್ಠಾನ'ವು ನೀಡುವ ಈ ಬಾರಿಯ 'ಬೊಳ್ಳಿಂಬಳ ಪ್ರಶಸ್ತಿ'ಗೆ ಕಾಟುಕುಕ್ಕೆ ಕೊರಗಪ್ಪ ನಾಯ್ಕರಿಗೆ ಪ್ರಾಪ್ತಿ. ನವೆಂಬರ್ 25ರಂದು ಪುತ್ತೂರಿನ ನಟರಾಜ ವೇದಿಕೆಯಲ್ಲಿ ಜರುಗಿದ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ವಾರ್ಶಿಕೋತ್ಸವದ ಸಂದರ್ಭದಲ್ಲಿ ನಾಯ್ಕರಿಗೆ ಪ್ರಶಸ್ತಿ ಪ್ರದಾನ.

Saturday, November 10, 2012

ಉಡುಪಿ ಕಲಾರಂಗ ಪ್ರಶಸ್ತಿ ಪ್ರಕಟ

               ಕಲಾರಂಗ ಉಡುಪಿ ಇದರ 2012ರ ಪ್ರಶಸ್ತಿ ಪ್ರಕಟವಾಗಿದೆ. ಈ ಸಾಲಿನ ವಿಶ್ವೇಶತೀರ್ಥ ಪ್ರಶಸ್ತಿಯು ಕಾಸರಗೋಡು ಜಿಲ್ಲೆಯ ಪೆರ್ಲದ ಪಡ್ರೆ ಚಂದು ಯಕ್ಷಗಾನ ನಾಟ್ಯ ತರಬೇತಿ ಕೇಂದ್ರಕ್ಕೆ ಪ್ರಾಪ್ತವಾಗಿದೆ.

                 ಶ್ರೀಗಳಾದ - ಬೋಳಾರ ಸುಬ್ಬಯ್ಯ ಶೆಟ್ಟಿ (ಡಾ.ಬಿ.ಬಿ.ಶೆಟ್ಟಿ ಪ್ರಶಸ್ತಿ), ಭಟ್ಕಳದ ಕೊಪ್ಪದಮಕ್ಕಿ ಈರಪ್ಪ ಜಟ್ಟಿ ಭಾಗವತ (ನಿಟ್ಟೂರು ಸುಂದರ ಶೆಟ್ಟಿ-ಮಹೇಶ್ ಡಿ.ಶೆಟ್ಟಿ ಪ್ರಶಸ್ತಿ), ಪಡುಕೋಣೆಯ ಸುರೇಶ್ ಗಾಣಿಗ (ಪ್ರೊ:ಬಿ.ವಿ.ಆಚಾರ್ಯ ಪ್ರಶಸ್ತಿ), ಕುಂಬಳೆ ಶ್ರೀಧರ ರಾವ್ (ಬಿ.ಜಗಜ್ಜೀವನದಾಸ್ ಶೆಟ್ಟಿ ಪ್ರಶಸ್ತಿ), ಜನ್ನಾಲೆ ವಿಶ್ವೇಶ್ವರ ಸೋಮಯಾಜಿ (ಭಾಗವತ ನಾರಣಪ್ಪ ಉಪ್ಪೂರ ಪ್ರಶಸ್ತಿ), ಹೆಮ್ಮಾಡಿ ರಾಮಚಂದನ್ (ಭಾಗವತ ವಾದಿರಾಜ ಹೆಬ್ಬಾರ್ ಪ್ರಶಸ್ತಿ), ಎಂ.ಕೆ.ರಮೇಶ್ ಆಚಾರ್ಯ (ಕೋಟ ವೈಕುಂಠ ಪ್ರಶಸ್ತಿ), ಬೆಲ್ತೂರು ರಮೇಶ್ ನಾಯ್ಕ್ (ಶಿರಿಯಾರ ನಾಯ್ಕ್ ಪ್ರಶಸ್ತಿ), ಕುಡಾನ ಗೋಪಾಲಕೃಷ್ಣ ಭಟ್ (ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿ), ಉದ್ಯಾವರ ಜಯಕುಮಾರ್ (ವಿಶ್ವಜ್ಞ ಶೆಟ್ಟಿ ಪ್ರಶಸ್ತಿ), ಬಿರ್ತಿ ಬಾಲಕೃಷ್ಣ ಗಾಣಿಗ (ಐರೋಡಿ ರಾಮ ಗಾಣಿಗ ಪ್ರಶಸ್ತಿ), ಕರ್ಕಿ ಕೃಷ್ಣ ಹಾಸ್ಯಗಾರ (ಪಡಾರು ನರಸಿಂಹ ಶಾಸ್ತ್ರಿ ಪ್ರಶಸ್ತಿ), ಎಂ.ಟಿ.ಎಸ್.ಕುಲಾಲ (ಶ್ರೀಮತಿ ಪ್ರಭಾವತಿ ವಿ.ಶೆಣೈ, ಯು.ವಿಶ್ವನಾಥ ಶೆಣೈ ಪ್ರಶಸ್ತಿ) ಮತ್ತು ಯಕ್ಷಚೇತನ ಪ್ರಶಸ್ತಿಗೆ ಯು.ಉಪೇಂದ್ರ - ಆಯ್ಕೆಯಾಗಿದ್ದಾರೆ.

                ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 18, ಭಾನುವಾರ, ಅಪರಾಹ್ನ ಗಂಟೆ 3 ರಿಂದ ರಾತ್ರಿ 9 ರ ತನಕ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರುಗಲಿದೆ. ಪರ್ಯಾಯ ಶ್ರೀ ಸೋದೆ ವಾದಿರಾಜ ಮಠದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶ್ರೀಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ.

                ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರ ಅಧ್ಯಕ್ಷತೆ. ಉಡುಪಿ ಶಾಸಕ ಕೆ.ರಘುಪತಿ ಭಟ್ ಶುಭಾಶಂಸನೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಕೆ.ಆರ್.ರಾಮಕೃಷ್ಣ ಇವರು ವಾರ್ಶಿಕ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ:ಎಂ.ಎಲ್.ಸಾಮಗ ಮತ್ತು ಕಾಪು ಬಂಟರ ಯಾನೆ ನಾಡವರ ಸಂಘದ ಬಿ.ಸಚ್ಚಿದಾನಂದ ಶೆಟ್ಟಿ ಆಗಮಿಸಲಿದ್ದಾರೆ. ಯಕ್ಷಗಾನ ವಿದ್ವಾಂಸ, ಉಪನ್ಯಾಸಕ ಡಾ.ಶ್ರೀಧರ ಉಪ್ಪೂರ ಅವರು ಡಾ.ಬಿ.ಬಿ.ಶೆಟ್ಟಿ ಸಂಸ್ಮರಣೆ ಮಾಡಲಿದ್ದಾರೆ.
             
             ಅಪರಾಹ್ನ ಗಂಟೆ 3 ರಿಂದ 5ರ ತನಕ 'ಸಂಗೀತ ಸಮನ್ವಯ' ಎಂಬ ವಿಶಿಷ್ಟ ಸಂಗೀತಾರಾಧನೆ. ಬಲಿಪ ನಾರಾಯಣ ಭಾಗವತ, ನೆಬ್ಬೂರು ನಾರಾಯಣ ಭಾಗವತ, ಕುರಿಯ ಗಣಪತಿ ಶಾಸ್ತ್ರಿ, ತೋನ್ಸೆ ಜಯಂತ ಕುಮಾರ್ (ಯಕ್ಷಗಾನ), ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ (ಸಂಗೀತ). ಸಂಜೆ ಆರೂವರೆ ಬಳಿಕ 'ದಕ್ಷಯಕ್ಷ' ಪ್ರಸಂಗದ ಬಯಲಾಟ.

Wednesday, October 17, 2012

ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ


          ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಎರಡು ವರುಷಗಳ ಗೌರವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಣೆಯಾಗಿದೆ.
          2011-12: ಉಪ್ಪಿನಕುದ್ರು ವಾಮನ ಪೈ (ಯಕ್ಷಗಾನ ಗೊಂಬೆಯಾಟ), ಕುಡಾಣ ಗೋಪಾಲಕೃಷ್ಣ ಭಟ್ (ಯಕ್ಷಗಾನ), ಪೆರುವಾಯಿ ನಾರಾಯಣ ಶೆಟ್ಟಿ (ಯಕ್ಷಗಾನ), ಪೇತ್ರಿ ಮಾಧವ ನಾಯಕ್ (ಯಕ್ಷಗಾನ), ಹಳ್ಳದಾಚೆ ವೆಂಕಟ್ರಮಣಯ್ಯ ಮೂಡಿಗೆರೆ (ಯಕ್ಷಗಾನ), ಬಸವಣ್ಣಯ್ಯ ಮಠಪತಿ (ಶ್ರೀಕೃಷ್ಣ ಪಾರಿಜಾತ), ಅಡಿವಯ್ಯ ಎಸ್.ಹಿರೇಮಠ (ದೊಡ್ಡಾಟ), ರಾಮಚಂದ್ರಪ್ಪ ಅರ್ಕಸಾಲಿ (ಮೂಡಲಪಾಯ), ಡಾ.ರಮಾನಂದ ಬನಾರಿ (ತಾಳಮದ್ದಳೆ), ದೇವಕಾನ ಕೃಷ್ಣ ಭಟ್ (ಪ್ರಸಾಧನ)

             2012-13: ಇಡಗುಂಜಿ ಕೃಷ್ಣಯಾಜಿ (ಯಕ್ಷಗಾನ), ಕೆ.ಎಚ್.ದಾಸಪ್ಪ ರೈ (ಯಕ್ಷಗಾನ), ಪದ್ಯಾಣ ಶಂಕರನಾರಾಯಣ ಭಟ್ (ಯಕ್ಷಗಾನ), ದಯಾನಂದ ನಾಗೂರು (ಯಕ್ಷಗಾನ), ಹೊಳ ಬಸಯ್ಯ ಸಂಬಾಳದ (ಶ್ರೀಕೃಷ್ಣ ಪಾರಿಜಾತ), ಈರಮಾಳಪ್ಪ ಮಧುಗಿರಿ (ಮೂಡಲಪಾಯ), ವಿರೂಪಾಕ್ಷ ಅಂಗಡಿ (ಸಣ್ಣಾಟ), ಮುಕಾಂಬಿಕಾ ವಾರಂಬಳ್ಳಿ (ಮಹಿಳಾ ಯಕ್ಷಗಾನ), ವಿಶ್ವನಾಥ ಶೇಟ್ ಹಾರ್ಸಿಕಟ್ಟಾ (ಪ್ರಸಾಧನ), ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿ, ಅಂಬಲಪಾಡಿ (ಸಂಘಟನೆ).

            ಪ್ರಶಸ್ತಿ ಪ್ರದಾನ ಸಮಾರಂಭವು ದಶಂಬರ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಅಕಾಡೆಮಿಯ ಅಧ್ಯಕ್ಷ ಪ್ರೊ: ಎಂ.ಎಲ್.ಸಾಮಗ ತಿಳಿಸಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ. ದಿನಾಂಕ 16-10-2012ರಂದು ಉಡುಪಿಯ ಎಂಜಿಎಂ ಯಕ್ಷಗಾನ ಕೇಂದ್ರದಲ್ಲಿ ಜರುಗಿದ ಸರ್ವಸದಸ್ಯರ ಸಭೆಯಲ್ಲಿ ಪ್ರಶಸ್ತಿಯ ಆಯ್ಕೆ ನಡೆಯಿತು.

             ಅಕಾಡೆಮಿಯ ರಿಜಿಸ್ಟ್ರಾರ್ ಮೈಥಿಲಿ, ಸದಸ್ಯರಾದ - ಸರಪಾಡಿ ಅಶೋಕ ಶೆಟ್ಟಿ, ರಮೇಶ್ ಬೇಗಾರು, ಭಾಸ್ಕರ ಬಾರ್ಯ, ಉಜಿರೆ ಆಶೋಕ ಭಟ್, ಗೌರಿ ಸಾಸ್ತಾನ, ದುಗ್ಗಪ್ಪ ಯು, ಶ್ರೀಶೈಲ ಉದ್ದಾರ್, ಆಶೋಕ್ ಮೋದಿ, ಯಕ್ಷಗಾನ ಕೇಂದ್ರದ ನಿರ್ದೇಶಕ ಹೆರಂಜೆ ಕೃಷ್ಣ ಭಟ್ ಉಪಸ್ಥಿತಿ.

Monday, October 15, 2012

ಮಾಧವ ಪೇತ್ರಿಯವರಿಗೆ ಡಾ. ಕಾರಂತ 'ಬಾಲವನ ಪ್ರಶಸ್ತಿ'


                   ಹಿರಿಯ ಕಲಾವಿದ ಉಡುಪಿ ಜಿಲ್ಲೆಯ ಎಚ್.ಮಾಧವ ಪೇತ್ರಿ(73)ಯವರಿಗೆ ಅಕ್ಟೋಬರ್ 10ರಂದು 'ಬಾಲವನ ಪ್ರಶಸ್ತಿ' ಪ್ರಾಪ್ತಿ. ಪುತ್ತೂರಿನ ಬಾಲವನದಲ್ಲಿ ಕಾರಂತ ಜನ್ಮದಿನಾಚರಣೆ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ. ಪ್ರಶಸ್ತಿ ಮೊತ್ತ ಹತ್ತು ಸಾವಿರ ರೂಪಾಯಿ.

          ಪೇತ್ರಿಯವರು ಹದಿನಾಲ್ಕನೇ ವಯಸ್ಸಿನಿಂದಲೇ ಬಣ್ಣ ಹಚ್ಚಿದವರು. ಐವತ್ತೈದು ವರುಷಗಳ ತಿರುಗಾಟ. ಅದರಲ್ಲಿ ಮೂರು ದಶಕ ಕಾಲ ಡಾ. ಕಾರಂತರ ಒಡನಾಟ. ಅವರೊಂದಿಗೆ ದೇಶ ವಿದೇಶಗಳಿಗೆ ಹಾರಾಟ. ಬಣ್ಣದ ವೇಷಧಾರಿಯಾಗಿ ಖ್ಯಾತಿ.

          ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಬಾಲವನ ಸಮಿತಿ, ಪುತ್ತೂರಿನ ಸಹಾಯಕ ಆಯುಕ್ತರ ಕಚೇರಿ ಇವರ ಜಂಟಿ ಹೆಗಲೆಣೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲು ಪೇತ್ರಿಯವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಸದಸ್ಯ ಭಾಸ್ಕರ ಬಾರ್ಯ ಅಭಿನಂದನ ಭಾಷಣ ಮಾಡಿದರು. 

Sunday, September 30, 2012

'ಪಾಪಣ್ಣ ಭಟ್ಟ'ರಿಗೆ 'ಕುರಿಯ' ಗೌರವದ ಬಾಗಿನ


                'ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜಯ್ಯ ಹೆಗ್ಗಡೆಯವರು ಧರ್ಮಾಧಿಕಾರಿಗಳಾಗಿದ್ದ ಸಮಯ. ಧರ್ಮಸ್ಥಳ ಮೇಳದ ಪ್ರದರ್ಶನವೊಂದರಲ್ಲಿ ಡಾ. ಶಿವರಾಮ ಕಾರಂತರ ಉಪಸ್ಥಿತಿ. ಪ್ರಸಂಗ 'ಚೂಡಾಮಣಿ'. ಕುರಿಯ ವಿಠಲ ಶಾಸ್ತ್ರಿಗಳ ಹನುಮಂತನ ಪಾತ್ರ. ಖುಷಿಯಾದ ಕಾರಂತರು 'ಆಟವನ್ನು ಸಿನೆಮಾ ಮಾಡೋಣ' ಎಂದರಂತೆ. ಹೆಗ್ಗಡೆಯವರ ಸಮ್ಮತಿ. ಶೂಟಿಂಗಿಗೆ ಹಗಲು ಸೂಕ್ತ ಸಮಯ. ಕಲಾವಿದರು ಒಲ್ಲದ ಮನಸ್ಸಿನಿಂದ ಒಪ್ಪಿ ಸಹಕರಿಸಿದರು. ಮೊದಲ ದಿನ ಆರ್ಧ ಚಿತ್ರೀಕರಣ. ಮುಂದಿನದು ಮೂಡುಬಿದಿರೆಯಲ್ಲಿ ಎಂದು ನಿಗದಿಯಾಯಿತು. ಹಗಲು ವೇಷ ನಿರ್ವಹಿಸಲು ಕಲಾವಿದರ ಅಸಮ್ಮತಿ. ಹಾಗಾಗಿ ಶೂಟಿಂಗ್ ಅರ್ಧದಲ್ಲಿ ನಿಂತುಬಿಟ್ಟಿತು. ಆ ಪ್ರಸಂಗದಲ್ಲಿ ನಾನೂ ಪಾತ್ರ ವಹಿಸಿದ್ದೆ. ಕಾರಂತರು ಚೆನ್ನಾಗಿ ನೋಡಿಕೊಂಡಿದ್ದರು', ಎಂದು ನೆನಪಿನ ಸುರುಳಿಯನ್ನು ಬಿಚ್ಚಿದರು, ಹಾಸ್ಯಗಾರ ಪೆರುವಡಿ (ಪೆರ್ವಡಿ, ಪೆರುವೋಡಿ) ನಾರಾಯಣ ಭಟ್ಟರು. (Hasyagar Peruvody Narayana Bhat)

                ಉಭಯತಿಟ್ಟುಗಳಲ್ಲಿ 'ರಾಜಾಹಾಸ್ಯ' ಎಂಬ ನೆಗಳ್ತೆಯನ್ನು ಪಡೆದ ಪೆರುವಡಿ ನಾರಾಯಣ ಭಟ್ಟರು ಮಾತಿಗಿಳಿದರೆ ಒಂದು ಕಾಲಘಟ್ಟದ ಯಕ್ಷಗಾನದ ಬದುಕು, ಸಾಮಾಜಿಕ ಜವಾಬ್ದಾರಿ, ಕಲಾವಿದನ ಹೊಣೆ.. ಹೀಗೆ ಮಿಂಚುತ್ತದೆ. 'ಹಾಸ್ಯವೆಂದರೆ ವಿಕಾರವಲ್ಲ. ಅದೊಂದು ರಸ. ಅದನ್ನು ಕಲಾವಿದ ಅನುಭವಿಸಬೇಕು. ಕಲಾವಿದನ ಅಭಿವ್ಯಕ್ತಿಯಂತೆ ಪ್ರೇಕ್ಷಕನೂ ಅನುಭವಿಸಬೇಕು. ಯಕ್ಷಗಾನದ ಹಾಸ್ಯವೆಂದರೆ ನಕ್ಕು ನಲಿವ ಹಾಸ್ಯವಲ್ಲ. ಸಮಾಜದ ವಿಕಾರಗಳನ್ನು ಎತ್ತಿ ತೋರಿಸಿ, ಅದನ್ನು ತಿದ್ದುವ ಕೆಲಸವನ್ನೂ ಹಾಸ್ಯಗಾರ ಮಾಡಬೇಕಾಗುತ್ತದೆ' ಎನ್ನುತ್ತಾರೆ.

               ಪೆರುವಡಿಯವರ ತಿರುಗಾಟದ ಕಾಲದ ಸಾಮಾಜಿಕ ವ್ಯವಸ್ಥೆಗಳು ತಪ್ಪನ್ನು ಎತ್ತಿ ತೋರಿದಾಗ ಒಪ್ಪಿಕೊಳ್ಳುವ, ರಂಗದ ಅಭಿವ್ಯಕ್ತಿಯನ್ನು 'ಕಲೆ' ಎಂದು ಸ್ವೀಕರಿಸುವ ಮನಃಸ್ಥಿತಿಯಿತ್ತು. ಈಗ ಕಾಲ ಬದಲಾದುದೋ, 'ಬೌದ್ಧಿಕವಾಗಿ ಮುಂದುವರಿದ' ಫಲವೋ ಗೊತ್ತಿಲ್ಲ, ರಂಗದ ಅಭವ್ಯಕ್ತಿಗೆ ಜಾತಿಯನ್ನೋ, ಅಂತಸ್ತನ್ನೋ ಪೋಣಿಸುವ ವಿಪರೀತ ಸ್ಥಿತಿಯನ್ನು ಕಾಣಬಹುದು. ಪಾತ್ರವೊಂದು ಪ್ರೇಕ್ಷಕರ ಅಭಿರುಚಿಯಂತೆ, ಆಸಕ್ತಿಯಂತೆ ರಂಗದಲ್ಲಿ ಓಡಾಡುವಂತಹ ಪರೋಕ್ಷ ನಿಯಂತ್ರಣ.
ಪೆರುವಡಿಯವರು ಹಾಸ್ಯಕ್ಕೆ ಗೌರವವನ್ನು ತಂದು ಕೊಟ್ಟ ಹಾಸ್ಯಗಾರ. ದಕ್ಷಾಧ್ವರ ಪ್ರಸಂಗದಲ್ಲಿ ಬರುವ 'ಬ್ರಾಹ್ಮಣ'ನ ಅಭಿವ್ಯಕ್ತಿಯಲ್ಲಿ ಗೇಲಿಯಿಲ್ಲ, ಶ್ರೀ ರಾಮ ವನಗಮನ ಪ್ರಸಂಗದ 'ಗುಹ' ಪಾತ್ರವು ಜಾತಿಯನ್ನು ಲೇವಡಿ ಮಾಡುವುದಿಲ್ಲ. ಜರಾಸಂಧ ಪ್ರಸಂಗದ 'ಶೇಂದಿ ಮಾರಾಟಗಾರ' ಪಾತ್ರವು ಯಾವುದೇ ವರ್ಗವನ್ನು ನೋಯಿಸುವುದಿಲ್ಲ. ಆದರೆ ಆ ಪಾತ್ರದ ಸುತ್ತ ಮುತ್ತ ಇರುವ ವಿಕಾರಗಳನ್ನು ಎತ್ತಿ ತೋರಿಸುತ್ತಿದ್ದರು. ಹೀಗೆ ಮಾಡುತ್ತಿದ್ದಾಗಲೆಲ್ಲಾ ವಿಪರೀತದ ಸೋಂಕಿಲ್ಲ. ನಕ್ಕು ನಲಿಯುವುದಿಲ್ಲ!

                 'ಪಾಪಣ್ಣ ವಿಜಯ' ಪ್ರಸಂಗದ 'ಪಾಪಣ್ಣ' ಪಾತ್ರವು ಪೆರುವಡಿಯವರ ರಂಗಛಾಪನ್ನು ಎತ್ತರಕ್ಕೇರಿಸಿತು. ಹೆಸರಿನೊಂದಿಗೆ 'ಪಾಪಣ್ಣ ಭಟ್ರು' ಹೊಸೆಯಿತು. ಒಂದು ವರ್ಷವಲ್ಲ, ಹಲವು ಕಾಲ ಈ ಪ್ರಸಂಗವು ವಿಜೃಂಭಿಸಿತು. 'ಇದನ್ನು ಮೊದಲು ಆಡುವಾಗ ಹೆದರಿಕೆಯಿತ್ತು. ಪೌರಾಣಿಕ ಪ್ರಸಂಗವನ್ನು ಒಪ್ಪಿಕೊಂಡ ಕಲಾಭಿಮಾನಿಗಳು ಸಾಮಾಜಿಕ ಕಥೆಯನ್ನು ರಂಗದಲ್ಲಿ ಸ್ವೀಕರಿಸಬಹುದೇ? ಇದಕ್ಕಾಗಿ ಕಾಫಿ ಎಸ್ಟೇಟ್ನಲ್ಲಿ ಮೊದಲ ಪ್ರಯೋಗವನ್ನು ಮಾಡಿದೆವು. ಹತ್ತಾರು ಪ್ರದರ್ಶನವಾದ ಬಳಿಕ ಧೈರ್ಯ ಬಂತು' ಎಂದು ಪಾಪಣ್ಣನ ಬದುಕನ್ನು ಮುಂದಿಡುತ್ತಾರೆ.

                 ಪೆರುವಡಿಯವರದು ಸಹಜ ಹಾಸ್ಯ. ಕೃಷ್ಣಲೀಲೆ ಪ್ರಸಂಗದ 'ವಿಜಯ', ಕೃಷ್ಣಾರ್ಜುನ ಕಾಳಗದ 'ಮಕರಂದ', ದೇವ ದೂತ, ರಾಕ್ಷಸದೂತ.. ಹೀಗೆ ಪ್ರತೀ ಪಾತ್ರಗಳಿಗೂ ಪ್ರತ್ಯಪ್ರತ್ಯೇಕವಾದ ಅಭಿವ್ಯಕ್ತಿ. ರಂಗದಲ್ಲಿ ದೊರೆಯನ್ನೋ, ರಾಜನನ್ನೋ ಮೀರಿಸುವ ಆಳಲ್ಲ. ದೇವೇಂದ್ರನ ಸ್ಥಾನಗೌರವವನ್ನು ಅರಿತ ದೇವದೂತ. ನಾರದನಂತಹ ಭಕ್ತಿ ಹಿನ್ನೆಲೆಯ ಪಾತ್ರಗಳಲ್ಲಿ ಹಾಸ್ಯದ ಸೋಂಕಿಲ್ಲ. ಶ್ರೀದೇವಿಯಲ್ಲಿ ಸಂಧಾನಕ್ಕೆ ಬರುವ ಶುಂಭನ ಸಚಿವ 'ಸುಗ್ರೀವ' ಹಾಸ್ಯಗಾರನಾಗುವುದಿಲ್ಲ! ಹೀಗೆ ಒಂದಲ್ಲ ಒಂದು ಪಾತ್ರಗಳನ್ನು ಹಿಡಿದು ಮಾತನಾಡಿದರೆ ಪೆರುವಡಿಯವರ ಪಾತ್ರವೈಶಿಷ್ಟ್ಯದ ಪಾರಮ್ಯ ಅರ್ಥವಾಗುತ್ತದೆ.
ಪೆರುವಡಿಯವರಿಗೆ ಈಗ ಎಂಭತ್ತೈದು ವರುಷ. ಪಾತ್ರದ, ಕಲಾವ್ಯವಸಾಯದ ದಿವಸಗಳನ್ನು ಮೆಲುಕು ಹಾಕುವಾಗ ಅವರ ವಯಸ್ಸು ಹಿಂದೋಡುತ್ತದೆ. 

               'ಔಚಿತ್ಯ ಪ್ರಜ್ಞೆಯ ಸುಳಿವಿಲ್ಲದ ಹಾಸ್ಯ ನಗೆಗೀಡು. ರಂಗಕ್ಕೆ ಅನ್ಯಾಯ. ಪರೋಕ್ಷವಾಗಿ ತನಗೆ ತಾನು ಮಾಡಿಕೊಂಡ ಅಪಮಾನ. ಪ್ರೇಕ್ಷಕರು ನಗುತ್ತಾರೆ ಎಂದು ತೋಚಿದ್ದನ್ನು ಗೀಚುವುದಲ್ಲ. ಹಾಸ್ಯಗಾರನ ಪ್ರವೇಶ ಯಾವಾಗ ಆಗುತ್ತೆ ಎಂದು ಸಭಿಕರು ಕಾಯುವಂತಹ ಸ್ಥಿತಿಯನ್ನು ಹಾಸ್ಯಗಾರ ನಿರ್ಮಾಣ ಮಾಡಬೇಕು' ಎನ್ನುತ್ತಾರೆ.

              ಪ್ರಸಿದ್ಧ ಪದ್ಯಾಣ ಮನೆತನ. 1927ರಲ್ಲಿ ಜನನ. ಆರರ ತನಕ ವಿದ್ಯಾಭ್ಯಾಸ. ಸಂಕಯ್ಯ ಭಾಗವತರು ಮತ್ತು ಈಶ್ವರ ಭಾಗವತರು ಇವರ ಅಜ್ಜ. ಎಂಟನೇ ವರುಷದಿಂದ ತಾಳಮದ್ದಳೆಯಲ್ಲಿ ಭಾಗಿ. ಸ್ವಲ್ಪ ಸಂಸ್ಕೃತ ಅಭ್ಯಾಸ. ಕುರಿಯ ವಿಠಲ ಶಾಸ್ತ್ರಿಗಳ 'ಕೃಷ್ಣ'ನ ಪಾತ್ರದಿಂದ ಪ್ರಭಾವಿ. ಪಾತ್ರದ ಗುಂಗು ಅಂಟಿತು. ಅದು ಬಿಡಿಸಲಾರದ ಅಂಟು. ಬಣ್ಣದ ಗೀಳು ಹೆಚ್ಚಾಯಿತು. ಮೇಳ ಕೈಬೀಸಿ ಕರೆಯಿತು. ಪಾರಂಪರಿಕವಾದ ಆರಂಭಿಕ ಕಲಿಕೆ. ಮುಂದೆ ದೇಹ, ಭಾಷೆ, ಶಾರೀರಗಳು ಹಾಸ್ಯ ರಸದ ಒತ್ತಿಗಿದ್ದುದರಿಂದ 'ಹಾಸ್ಯಗಾರ'ರಾದುದು ಇತಿಹಾಸ.

               ಶ್ರೀ ಧರ್ಮಸ್ಥಳ ಮೇಳದಿಂದ ವ್ಯವಸಾಯ. ಬದುಕಿಗಾಗಿ ಹಲವು ಮೇಳಗಳಿಗೆ 'ಜಂಪಿಂಗ್'. ಮುಂದೆ ಮೂಲ್ಕಿ ಮೇಳದ ಯಜಮಾನಿಕೆ. ಹಾಸ್ಯಗಾರ ಮಾತ್ರವಲ್ಲ, 'ಮೇಳದ ಯಜಮಾನ'ನೆಂಬ ಹೆಗ್ಗಳಿಕೆ. ಮನೆತನಕ್ಕೂ, ಕಲಾಭಿಮಾನಿಗಳಿಗೂ ಮಾನ. ಡಾ.ಶೇಣಿಯವರಿಗೆ ಸಾಥ್ ಆಗಿದ್ದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗವನ್ನು ಹಿರಿಯರು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. 'ಇವರ ಯಜಮಾನಿಕೆಯ ಮೂಲ್ಕಿ ಮೇಳದ ಅಂದಿನ ಆಟಗಳ ಸ್ವಾರಸ್ಯಗಳು, ಯಶಸ್ಸು, ಸಂಪಾದನೆ, ಕಲಾವಿದರನ್ನು ಗುರುತಿಸುವ ಪರಿಯನ್ನು ಕಂಡಾಗ ಯಕ್ಷಗಾನಕ್ಕಾಗ ಸಂಭ್ರಮದ ದಿನಗಳು. ಆರ್ಥಿಕವಾಗಿ ಅಲ್ಲದಿದ್ದರೂ ಮಾನಸಿಕವಾಗಿ ಖುಷಿ ಕೊಟ್ಟ ದಿನಮಾನಗಳು' ಎನ್ನುತ್ತಾರೆ ಒಡನಾಡಿ ಹಿರಿಯರಾದ ಪಾತಾಳ ವೆಂಕಟ್ರಮಣ ಭಟ್.

                 ದೇಹ ಮಾಗಿದೆ. ಕೌಟುಂಬಿಕ ಹೊಣೆ ಹೆಗಲೇರಿದೆ. ರಂಗದಲ್ಲಿ ಭಾಗವಹಿಸಲು ವಯಸ್ಸು ಅಡ್ಡಿಯಾಗಿದೆ. ದೇಹ ಓಕೆ ಅಂದರೂ, ಮನಸ್ಸು ಮುಷ್ಕರ ಹೂಡುತ್ತದೆ. ಹಾಗಾಗಿ ಪೆರುವಡಿಯವರು ಸ್ವಲ್ಪ ಮಟ್ಟಿಗೆ ರಂಗದಿಂದ ದೂರ. ಆದರೆ ಸುತ್ತೆಲ್ಲಾ ನಡೆಯುವ ಪ್ರದರ್ಶನಗಳಿಗೆ ಈಗಲೂ ಭೇಟಿ ನೀಡುವುದು, ಪ್ರದರ್ಶನವನ್ನು ಆಸ್ವಾದಿಸುವುದು, ಬಣ್ಣದ ಮನೆಗೆ ಹೋಗಿ ನೆನಪಿನ ಬುತ್ತಿಯನ್ನು 'ಅಗತ್ಯ ಬಿದ್ದರೆ' ಬಿಚ್ಚುವುದು, ತಾನು ನಿರ್ವಹಿಸುತ್ತಿದ್ದ ಪಾತ್ರಗಳು ರಂಗದಲ್ಲಿ ಇತರರಿಂದ ಕಳಪೆಯಾಗಿ ನಿರ್ವಹಿಸಲ್ಪಟ್ಟಾಗ ಮಮ್ಮಲ ಮರುಗುವುದು, ಆಪ್ತರಲ್ಲಿ ಮನಬಿಚ್ಚಿ ಮಾತನಾಡುವುದು.. ಈ ಹಿರಿಯರ ಇಳಿ ವಯಸ್ಸಿನ ಚಟುವಟಿಕೆ.

                 ಹಾಸ್ಯಬ್ರಹ್ಮ ಪೆರುವಡಿ ನಾರಾಯಣ ಭಟ್ಟರಿಗೆ ಸಂದ ಪುರಸ್ಕಾರಗಳು ಹಲವು. ಸರಕಾರಿ ಮುದ್ರೆಯ ಪುರಸ್ಕಾರಗಳನ್ನು ಎತ್ತಿ ಹೇಳುವಷ್ಟಿಲ್ಲ! ಇತರ ಪ್ರಶಸ್ತಿಗಳು, ಸಂಮಾನಗಳು, ಗೌರವಗಳು ಸಾಲು ಸಾಲು. 'ನನ್ನನ್ನು. ನನ್ನ ಹಾಸ್ಯವನ್ನು ಕಲಾಭಿಮಾನಿಗಳು ಸ್ವೀಕರಿಸಿದ್ದಾರಲ್ಲಾ, ಅದೇ ದೊಡ್ಡ ಪ್ರಶಸ್ತಿ. ಹಳಬರು ಸಿಕ್ಕಾಗಲೆಲ್ಲಾ ಅಂದಿನ ಅಭಿವ್ಯಕ್ತಿಯನ್ನು ನೆನಪಿಸಿ ಗಂಟೆಗಟ್ಟಲೆ ಮಾತನಾಡುತ್ತಾರಲ್ಲಾ.. ಇದಕ್ಕಿಂತ ಹಿರಿದಾದ ಗೌರವ ಇನ್ನೇನು ಬೇಕು ಹೇಳಿ' ಎನ್ನುತ್ತಾರೆ.

                   ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿ ಶತಮಾನೋತ್ಸವ ಸರಣಿ ಕಾರ್ಯಕ್ರಮ ನಡೆಯುತ್ತಿದೆ. ಒಂದೊಂದು ಸಮಾರಂಭದಲ್ಲಿ ಕುರಿಯ ಶಾಸ್ತ್ರಿಗಳ ಒಡನಾಡಿಗಳನ್ನು ಗೌರವಿಸುವ ಪರಿಪಾಠ. ಅಕ್ಟೋಬರ್ 2ರಂದು ಅಪರಾಹ್ನ ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ 'ಕುರಿಯ ವಿಠಲ ಶಾಸ್ತ್ರಿ ಸಂಸ್ಮರಣಾ ಪ್ರತಿಷ್ಠಾನ'ವು ಪೆರುವಡಿ ನಾರಾಯಣ ಭಟ್ಟರನ್ನು ಗೌರವಿಸಲಿದೆ.


ಹಿರಿಯ ಕಲಾವಿದ ಅರುವ ನಾರಾಯಣ ಶೆಟ್ಟಿ ನಿಧನ



ತೆಂಕುತಿಟ್ಟು ಯಕ್ಷಗಾನದ ಹಿರಿಯ ಪಾತ್ರಧಾರಿ ಅರುವ ನಾರಾಯಣ ಶೆಟ್ಟಿ (Aruva narayana shetty) ಯವರು 19 ಸೆಪ್ಟೆಂಬರ್ 2012ರಂದು ರಂಗದಲ್ಲಿ ಶಿರ್ಲಾಲಿನಲ್ಲಿ 'ಶ್ರೀಕೃಷ್ಣ' ಪಾತ್ರದ ನಿರ್ವಹಣೆಯಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ದೈವಾಧೀನರಾದರು. ನಾರಾಯಣ ಶೆಟ್ಟಿಯವರು ಉತ್ತಮ ಕಲಾವಿದ, ಸಂಘಟಕ, ಪ್ರಸಂಗಕರ್ತ, ಅರ್ಥಧಾರಿ.

12 ಜೂನ್ 1954ರಲ್ಲಿ ಜನನ. ಬೆಳ್ತಂಗಡಿ ತಾಲೂಕು ಅಳದಂಗಡಿ ಮುತ್ತಣ್ಣ ಶೆಟ್ಟಿ, ಚೆಲುವಮ್ಮ ಹೆತ್ತವರು. ಪ್ರೌಢಶಾಲಾ ಕಲಿಕೆ. ಕೆ.ಗೋವಿಂದ ಭಟ್ ಮತ್ತು ಅರುವ ಕೊರಗಪ್ಪ ಶೆಟ್ಟರಿಂದ ಪ್ರೇರಣೆ-ಮಾರ್ಗದರ್ಶನ. ಕೌರವ, ರಾಮ, ಕೃಷ್ಣ, ಹರಿಶ್ಚಂದ್ರ, ಈಶ್ವರ, ಕೋಟಿ.. ಮೊದಲಾದ ಪಾತ್ರಗಳಲ್ಲಿ ಉತ್ತಮ ನಿರ್ವಹಣೆ.

ನಲವತ್ತೈದು ವರುಷಗಳ ಸೇವೆ. ಕಟೀಲು, ಪುತ್ತೂರು, ಬಪ್ಪನಾಡು, ಕದ್ರಿ ಮೇಳಗಳಲ್ಲಿ ತಿರುಗಾಟ. ಎಂಟು ವರುಷಗಳ ಕಾಲ 'ಅಳದಂಗಡಿ ಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿ'ಯ ಯಜಮಾನ.

ಬದುಕಿನ ಕೊನೆಯ ವರುಷಗಳಲ್ಲಿ ಶ್ರವಣ ಶಕ್ತಿ ಕೈಕೊಟ್ಟಿತ್ತು. ಆದರೂ ಎದುರಾಳಿಯ, ಭಾಗವತರ ತುಟಿ ಸಂಚಲನಕ್ಕೆ ಭಾಷೆಯನ್ನು ಕೊಟ್ಟ ಅಪರೂಪದ ಕಲಾವಿದ.

Monday, September 17, 2012

ಹಿರಿಯ ಸ್ನೇಹಿತ, ಕಲಾವಿದ ಮಧೂರು ಗಣಪತಿ ರಾವ್



          ಹಿರಿಯ ಯಕ್ಷಗಾನ ಕಲಾವಿದ ಮಧೂರು ಗಣಪತಿ ರಾವ್ 16 ಸೆಪ್ಟೆಂಬರ್ 2012ರಂದು ವಿಧಿವಶರಾದರು. ಅವರಿಗೆ 88 ವರುಷ ಪ್ರಾಯ.
           ತಂದೆ ಸುಬ್ಬರಾವ್. ತಾಯಿ ರುಕ್ಮಿಣಿ. 1924ರಲ್ಲಿ ಜನನ. ಸಹೋದರ ನಾರಾಯಣ ಹಾಸ್ಯಗಾರರ ಪೂರ್ಣ ಬೆಂಬಲ, ಪ್ರೇರಣೆ. ನಿತ್ಯ ವೇಷಧಾರಿಯಾಗಿ ಶ್ರೀ ಧರ್ಮಸ್ಥಳ ಮೇಳದಿಂದ ಬಣ್ಣದ ಬದುಕು ಆರಂಭ. 
              ಕೂಡ್ಲು, ಕುದ್ರೋಳಿ, ಮೂಲ್ಕಿ, ಕುಂಡಾವು, ಸುರತ್ಕಲ್, ಉಪ್ಪಳ ಮೇಳಗಳಲ್ಲಿ ಐದು ದಶಕದ ಕಲಾ ಸೇವೆ. ಬಬ್ರುವಾಹನ, ಧರ್ಮಾಂಗದ, ಚಂದ್ರಸೇನ, ಸುದರ್ಶನ, ಅರ್ಜುನ, ಕರ್ಣ, ತಾಮ್ರಧ್ವಜ, ಇಂದ್ರಜಿತು, ರಕ್ತಬೀಜ.. ಹೀಗೆ ವಿವಿಧ ಸ್ವಭಾವದ ಪಾತ್ರಗಳಲ್ಲಿ ಮಿಂಚಿದವರು. ತಾಳಮದ್ದಳೆಯಲ್ಲೂ ಪ್ರತ್ಯೇಕ ಛಾಪು.
              ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘದಲ್ಲಿ ಸಕ್ರಿಯರಾಗಿದ್ದರು. ಸ್ಥಳೀಯವಾಗಿ ಕೂಟಾಟಗಳನ್ನು ನಡೆಸಿದ್ದಾರೆ. ಆಕಾಶವಾಣಿ, ದೂರದರ್ಶನ ಮತ್ತು ವಿವಿಧ ವಾಹಿನಿಗಳಲ್ಲಿ ತೊಡಗಿಸಿಕೊಂಡವರು.
                ಕೇರಳ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪ್ರಶಸ್ತಿಗೆ ಭಾಜನರಾಗಿದ್ದರು. ತಾನು ಸಂಯೋಜಿಸುವ ಎಲ್ಲಾ ಕೂಟಾಟಗಳಲ್ಲಿ ಅಚ್ಚುಕಟ್ಟುತದತ್ತ ಅವರ ಒಲವು ಹೆಚ್ಚು. ಕಾರ್ಯಕ್ರಮ ಶುರುವಾಗುವ ತನಕ ಚಡಪಡಿಕೆ. 'ಆಹ್ವಾನಿತ ಕಲಾವಿದರು ಬರ್ತಾರೋ, ಇಲ್ವೋ' ಎಂಬ ಒತ್ತಡ. 'ಕಾರ್ಯಕ್ರಮ ಒಳ್ಳೆಯದಾಗಬೇಕು' ಎನ್ನುವುದು ಹಿಂದಿರುವ ಕಾಳಜಿ. ಅವರೊಂದಿಗೆ ವೇಷ ಮಾಡುವ ಅನುಭವ ಇದೆಯಲ್ಲಾ, ಅದೊಂದು ರೋಚಕ! ಅನುಭವಿಸಿದವರಿಗೆ ಗೊತ್ತು.
               ಪಾಪಣ್ಣ ವಿಜಯ ಪ್ರಸಂಗದದಲ್ಲಿ ಅವರದು 'ಚಂದ್ರಸೇನ', ನನ್ನ ಪಾತ್ರ 'ಗುಣಸುಂದರಿ'. ಪ್ರಸಂಗದ ಆರಂಭಕ್ಕೆ 'ತಂದೆ ಮೇಲೋ, ಗಂಡ ಮೇಲೋ' ಎಂಬ ವಾದ ಶುರುವಾಗುತ್ತದೆ. ಅವರ ಅನುಭವದ ಮಾತಿನ ಪರಿಪಕ್ವತೆಯ ಮುಂದೆ ನಾನು ಮೂಕನಾದಾಗ, ಪ್ರಶ್ನೆಗಳ ಮೂಲಕ ಮಾತನಾಡಿಸುತ್ತಿದ್ದರು. ಧೈರ್ಯ ತುಂಬುತ್ತಿದ್ದರು. ಆ ಬಳಿಕದ ಅವರ ಒಡನಾಟಗಳೆಲ್ಲಾ ಇನ್ನು ನೆನಪು ಮಾತ್ರ.
             ಒಂದು ಕ್ಷಣಕ್ಕೆ ಸಿಟ್ಟಾಗುವ, ಮತ್ತೊಂದು ಕ್ಷಣದಲ್ಲಿ ರಾಜಿ ಮಾಡಿಕೊಳ್ಳುವ ಮಗುವಿನ ಮನಸ್ಸು. ಹೇಳುವ ವಿಚಾರವನ್ನು ನೇರವಾಗಿ ಹೇಳುತ್ತಾರೆ. ಹೀಗಾಗಿ ಕೆಲವೊಮ್ಮೆ ಒರಟಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರ ಒಡನಾಟವಿರುವ, ಅವನ ಮನಸ್ಸನ್ನು ಅರಿತ ಮಂದಿಗೆ ಅವರು ಒರಟಲ್ಲ. ಮೃದು.
               ಒಮ್ಮೆ ಅವರ ಪರಿಚಯವಾದರೆ ಸಾಕು, ಮತ್ತೆಂದೂ ನಿಮ್ಮನ್ನು ಬಿಡರು. ಅಷ್ಟೊಂದು ಸ್ನೇಹಬಂಧ. ಕಳೆದ ಮೂರು ವರುಷದಿಂದ ಶಾರೀರಿಕವಾಗಿ ಸೊರಗಿದ್ದ ಗಣಪತಿ ರಾಯರು, ಮೂಡ್ ಬಂದಾಗ ತಾಳಮದ್ದಳೆಗಳಲ್ಲಿ ಭಾಗವಹಿಸಿದುದನ್ನು ಅವರ ಒಡನಾಡಿ ವಿಷ್ಣು ಭಟ್, ಬಾಲಚಂದ್ರ ಕಲ್ಲೂರಾಯ, ವೆಂಕಟಕೃಷ್ಣರು ಜ್ಞಾಪಿಸಿಕೊಳ್ಳುತ್ತಾರೆ.
ಹಿರಿಯ ಸ್ನೇಹಿತ, ಕಲಾವಿದ ಗಣಪತಿ ರಾಯರಿಗೆ ಅಕ್ಷರ ನಮನ.  

ಚಿತ್ರ : ಪ್ರದೀಪ್ ಕುಮಾರ್ ಬೇಕಲ್


Tuesday, August 21, 2012

ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ರಂಗದ ಮಹಾನ್ ಗುರು


          ಕೀರ್ತಿಶೇಷ ಕುರಿಯ ವಿಠಲ ಶಾಸ್ತ್ರಿಗಳು ಯಕ್ಷಗಾನದ ಮಹಾನ್ ಗುರು. ಅವರ ಗರಡಿಯಲ್ಲಿ ಪಳಗಿದ ಕಲಾವಿದರು ಗುರುವಿನ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ರಂಗದಲ್ಲಿ ವಿಜೃಂಭಿಸುತ್ತಿದ್ದಾರೆ. ಶಾಸ್ತ್ರಿಗಳು ಅಳಿದು ಮೂರು ದಶಕ ಮೀರಿದರೂ ಅವರ ಹೆಸರು ಯಕ್ಷಗಾನ ರಂಗದಲ್ಲಿ ಈಗಲೂ ಸ್ಥಾಯಿಯಾಗಿದೆ,' ಎಂದು ಪತ್ರಕರ್ತ, ಕಲಾವಿದ, ಅಂಕಣಕಾರ ನಾ. ಕಾರಂತ ಪೆರಾಜೆ ಹೇಳಿದರು.

         ಅವರು ಈಚೆಗೆ ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚ್ಯಾರಿಟೇಬಲ್ ಟ್ರಸ್ಟ್ (ರಿ) ಕುರುಡಪದವು ಇದರ ಆಶ್ರಯದಲ್ಲಿ ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವದ ಆರನೇ ಸರಣಿ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ 'ದೇವಿ ಭಟ್ರು' ಎಂದೇ ಪರಿಚಿತರಾದ ಮುಳಿಯಾಲ ಭೀಮಭಟ್ಟರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.

        ನಿವೃತ್ತ ಪ್ರಾಧ್ಯಾಪಕ, ಹಿರಿಯ ಪತ್ರಕರ್ತ ಪ್ರೊ: ವಿ.ಬಿ.ಅರ್ತಿಕಜೆಯವರು ವಿಠಲ ಶಾಸ್ತ್ರಿಗಳ ಕಲಾ ಕೊಡುಗೆಗಳನ್ನು ನೆನಪಿಸುತ್ತಾ, 'ಶಾಸ್ತ್ರಿಗಳು ಯಕ್ಷಗಾನ ರಂಗದ ಸಮಗ್ರ ಕಲಾವಿದ. ನಿರಂತರ ಪ್ರಯೋಗ ಪ್ರಕ್ರಿಯೆಗಳಿಂದ ಪಾತ್ರಗಳಿಗೆ ಹೊಸ ಆಯಾಮವನ್ನು ನೀಡಿದವರು. ಉಭಯತಿಟ್ಟುಗಳಲ್ಲೂ ಕೀರ್ತಿಯನ್ನು ಗಳಿಸಿದವರು. ದೇಶದುದ್ದಗಲಕ್ಕೂ ತೆಂಕುತಿಟ್ಟು ಯಕ್ಷಗಾನದ ಕಂಪನ್ನು ಬೀರಿದವರು,' ಎಂದರು.    
          ಪುಣಚ ದೇವಿನಗರದ ಶ್ರೀ ದೇವಿ ವಿದ್ಯಾಕೇಂದ್ರದಲ್ಲಿ ಜರುಗಿದ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ವಹಿಸಿ, ಶಾಸ್ತ್ರಿಗಳ ಕಲಾದಿನಗಳನ್ನು ನೆನಪಿಸಿಕೊಂಡರು. ಸಂಮಾನಿತರಾದ ಮುಳಿಯಾಲ ಭೀಮಭಟ್ಟರನ್ನು ಶಾಲು, ಹಾರ, ಹಣ್ಣುಹಂಪಲು, ಸ್ಮರಣಿಕೆ ಮತ್ತು ನಿಧಿಯೊಂದಿಗೆ ಸಂಮಾನಿಸಲಾಯಿತು.      

          ಶ್ರೀದೇವಿ ವಿದ್ಯಾಕೇಂದ್ರದ ಕಾರ್ಯದರ್ಶಿ ಜಯಶ್ಯಾಮ ನೀರ್ಕಜೆ, ಮುಖ್ಯೋಪಾಧ್ಯಾಯ ರಾಮಚಂದ್ರ ಭಟ್ ಶುಭಾಶಂಸನೆ ಮಾಡಿದರು. ಕುರಿಯ ವಿಠಲ ಶಾಸ್ತ್ರಿ ಮೆಮೋರಿಯಲ್ ಚ್ಯಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಕುರಿಯ ವೆಂಕಟ್ರಮಣ ಶಾಸ್ತ್ರಿ ಉಪಸ್ಥಿತರಿದ್ದರು.

          ಪ್ರಾಧ್ಯಾಪಕ ಜಿ.ಕೆ. ಭಟ್ ಸೇರಾಜೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ಚ್ಯಾರಿಟೇಬಲ್ ಟ್ರಸ್ಟಿನ ಕುರಿಯ ಗೋಪಾಲಕೃಷ್ಣ ಶಾಸ್ತ್ರಿ ವಂದಿಸಿದರು. ಅಧ್ಯಾಪಕಿ ಗಂಗಾ ಹರಿಕೃಷ್ಣ ಶಾಸ್ತ್ರಿ ನಿರೂಪಿಸಿದರು. ಟ್ರಸ್ಟಿನ ವತಿಯಿಂದ ಶ್ರೀ ದೇವಿ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಮದ್ದಳೆಯನ್ನು ಕೊಡುಗೆಯಾಗಿ ನೀಡಲಾಯಿತು.

          ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರಿ ನಿರ್ದೇಶನದಲ್ಲಿ 'ವೀರಮಣಿ ಕಾಳಗ' ಯಕ್ಷಗಾನ ಪ್ರದರ್ಶನ ನಡೆಯಿತು. ಸೂರಿಕುಮೇರು ಗೋವಿಂದ ಭಟ್, ಶಿವರಾಮ ಜೋಗಿ, ಜಗದಾಭಿರಾಮ ಪಡುಬಿದ್ರಿ. ಸರವು ರಮೇಶ ಭಟ್.. ಮೊದಲಾದ ಖ್ಯಾತ ಕಲಾವಿದರು ಭಾಗವಹಿಸಿದ್ದರು.

ಕುರಿಯ ಸಂಮಾನಕ್ಕೆ ಭಾಜನರಾದ 'ದೇವಿ ಭಟ್ರು'

          "ಐದನೇ ತರಗತಿ ಫೈಲ್ ಆಗಿ, ಮೈಸೂರಿನಲ್ಲಿ ಹೊಟ್ಟೆಪಾಡಿಗಾಗಿ ಹೋಟೆಲ್ ಸೇರಿದ್ದೆ. ಅಕಸ್ಮಾತ್ತಾಗಿ ಹೋಟೆಲಿಗೆ ಆಗಮಿಸಿದ ಕುರಿಯ ವಿಠಲ ಶಾಸ್ತ್ರಿಗಳು ನೋಡಿ ಅಲ್ಲಿಂದ ತನ್ನ ಮನೆಗೆ ಕರೆದುಕೊಂಡು ಹೋಗಿ ಅನ್ನ, ವಸತಿ, ವಿದ್ಯೆ ನೀಡಿ ಬೆಳೆಸಿದರು, ಎನ್ನುವಾಗ ಕಳೆದ ಕಾಲ ನೆನಪಾಗಿ ಮುಳಿಯಾಲ ಭೀಮ ಭಟ್ಟರ ಕಣ್ಣು ಆದ್ರ್ರವಾಯಿತು.  

          'ದೇವಿ ಭಟ್ರು' ಎಂದೇ ಖ್ಯಾತರಾಗಿದ್ದ ಭೀಮ ಭಟ್ಟರಿಗೆ ಶತಾಯುಷ್ಯ ಪೂರೈಸಲು ಇನ್ನು ಕಾಲೇ ಶತಮಾನ. 'ಯಕ್ಷಗಾನವನ್ನು ಭಕ್ತಿಯಿಂದ ನೋಡುವ, ಆಡುವ ದಿನಮಾನಗಳು ಮರೆಯಾಗಿವೆ. ಭಕ್ತಿಯ ಜಾಗದಲ್ಲಿ ಆಡಂಬರ ಮೇಳೈಸಿವೆ' ಎನ್ನುತ್ತಾ ಮಾತಿಗಿಳಿದರು.

          ಒಂದು ಸ್ವಾರಸ್ಯವನ್ನು ರೋಚಕವಾಗಿ ಹೇಳುತ್ತಾರೆ, ನಾನು ಅಂಬೆಗಾಲಿಕ್ಕುತ್ತಿದ್ದಾಗ ಹಿರಿಯ (ಅಜ್ಜ) ಬಲಿಪ ನಾರಾಯಣ ಭಾಗವತರು ಎತ್ತಿ, ಮುದ್ದಾಡಿ 'ಇವನಿಗೆ ಭೀಮನ ಪಾತ್ರವನ್ನು ತೊಡಿಸಿ, ರಂಗಸ್ಥಳದಲ್ಲಿ ಆಡಿಸದೆ ನಾನು ದೂರವಾಗಲಾರೆ' ಎಂದಿದ್ದರಂತೆ. ಒಂದಷ್ಟು ಸಮಯದ ಬಳಿಕ ಇವರು ಭೀಮನ ಪಾತ್ರ ಮಾಡಿದ ಮರುದಿವಸ ಇವರ ತಂದೆ ಶಿವೈಕ್ಯರಾದರಂತೆ!

          ಮುಳಿಯಾಲ ಭೀಮ ಭಟ್ಟರ ತಂದೆ ಕೇಚಣ್ಣ (ಕೇಶವ) ಭಟ್ಟರು ವೇಷಧಾರಿ. ಅಜ್ಜ, ಪಿಜ್ಜ .. ಹೀಗೆ  ಕಲಾವಿದ ವಂಶ.  ತಂದೆಯೊಂದಿಗೆ ಆಟ ನೋಡುವುದು ಬಾಲ್ಯಾಸಕ್ತಿ. ಕಲಾವಿದನಾಗಬೇಕೆಂಬ ಹಂಬಲವಿರಲಿಲ್ಲ. ಯಾವಾಗ ಕುರಿಯ ಶಾಸ್ತ್ರಿಗಳು ಮೈಸೂರಿನಿಂದ ಕರೆದುಕೊಂಡು ಬಂದು ಮಿತ್ತನಡ್ಕದ (ಕನ್ಯಾನ ಸನಿಹ) ತನ್ನ ಗರಡಿಗೆ ಸೇರಿಸಿದರೋ, ಅಂದಿನಿಂದ ಶಾಸ್ತ್ರಿಗಳ ನೆಚ್ಚಿನ ಶಿಷ್ಯರಲ್ಲೊಬ್ಬರಾದರು.

          1951ರಲ್ಲಿ ಕುರಿಯ ಶಾಸ್ತ್ರಿಗಳ ಸಂಚಾಲಕತ್ವದ ಶ್ರೀ ಧರ್ಮಸ್ಥಳ ಮೇಳದಿಂದ 'ಕಲಾವಿದ'ನ ಪಟ್ಟ. ಕೋಡಂಗಿ, ಬಾಲಗೋಪಾಲ, ಮುಖ್ಯಸ್ತ್ರೀವೇಷ, ಪೀಠಿಕೆ ವೇಷ.. ಹೀಗೆ ಹಂತಹಂತ ಕಲಿಕೆ. ತನ್ನ ವೇಷದ ಬಳಿಕ ರಂಗಸ್ಥಳದ ಹತ್ತಿರ ಕುಳಿತು ಬಣ್ಣದ ಮಾಲಿಂಗನವರ, ಕರ್ಗಲ್ಲು ಸುಬ್ಬಣ್ಣ ಭಟ್ಟರ, ಕುರಿಯದವರ ವೇಷಗಳ ಅಭಿವ್ಯಕ್ತಿ, ನಾಟ್ಯಗಾರಿಕೆ, ಆರ್ಥಗಾರಿಕೆಗಳನ್ನು ನೋಡಿ-ಕೇಳಿ ಅಭ್ಯಾಸ.  'ನನಗೆ ಓದಿದ ಅನುಭವ ಕಡಿಮೆ, ನೋಡಿದ ಅನುಭವ ಜಾಸ್ತಿ' ಎನ್ನಲು ಅವರಿಗೆ ಮುಜುಗರವಿಲ್ಲ.

          ಏಳು ವರುಷ ಧರ್ಮಸ್ಥಳ ಮೇಳದ ತಿರುಗಾಟ. 1958ರಿಂದ ಕಟೀಲು ಮೇಳ. ಶ್ರೀ ದೇವಿ ಮಹಾತ್ಮೆ ಪ್ರಸಂಗದ 'ಶ್ರೀದೇವಿ'ಯ ಪಾತ್ರವನ್ನು 'ಒಲಿಸಿಕೊಂಡ' ಮುಳಿಯಾಲದವರು ಕಲಾಭಿಮಾನಿಗಳಿಗೆ 'ದೇವಿ ಭಟ್ರು' ಎಂದೇ ಪರಿಚಿತ. ನನ್ನ ದೇವಿ ಪಾತ್ರದ ಯಶಸ್ಸಿಗೆ ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳ ಕೊಡುಗೆಯನ್ನು ಮರೆಯುವಂತಿಲ್ಲ. ಆ ಪಾತ್ರಕ್ಕೆ ಬೇಕಾದ ಚಿಕ್ಕ-ಚೊಕ್ಕ-ಅರ್ಥಗರ್ಭಿತ ಅರ್ಥಗಳನ್ನು ಪೊಳಲಿಯವರಿಂದ ಕಲಿತೆ. ಹಾಗಾಗಿ ಗೌರವಗಳು ಅವರಿಗೆ ಸಲ್ಲಬೇಕು' ಎಂದು ವಿನೀತರಾಗಿ ಹೇಳುತ್ತಾರೆ.

          ಒಂದು ಕಾಲಘಟ್ಟದಲ್ಲಿ ಪ್ರಮೀಳೆ, ಶಶಿಪ್ರಭೆ, ಮೀನಾಕ್ಷಿಯಂತಹ ಗಂಡುಗತ್ತಿನ ಪಾತ್ರಗಳಲ್ಲಿ ಮೆರೆದ ಭೀಮ ಭಟ್ಟರು; 'ಅತಿಕಾಯ, ತಾಮ್ರಧ್ವಜ, ಕರ್ಣ, ದ್ರುಪದ, ಕೃಷ್ಣ, ಹನುಮಂತ' ಹೀಗೆ ರಂಗದ ಬಹುತೇಕ ಪಾತ್ರಗಳಿಗೆ ಸ್ವ-ನಿರ್ಮಿತ ಮಿರುಗು ನೀಡಿದ್ದಾರೆ. ಸೀತೆ, ದಮಯಂತಿ, ಚಂದ್ರಮತಿ, ದ್ರೌಪದಿ..ಯಂತಹ ಗರತಿ ಪಾತ್ರಗಳನ್ನು ಸಲೀಸಾಗಿ ನಿರ್ವಹಿಸುತ್ತಿದ್ದರು.

'       ಶ್ರೀದೇವಿ' ಪಾತ್ರ ಈಗಲೂ ನೆನಪಿಸುವಂತಹುದು. ಶರೀರ, ಶಾರೀರ ಮತ್ತು ಪಾತ್ರದ ಕುರಿತಾದ ಶೃದ್ಧೆ, ಭಕ್ತಿ. ಇವೆಲ್ಲವೂ ಕ್ರೋಢೀಕರಿಸಿದ ಸಿಹಿಪಾಕ. ಅದರಲ್ಲಿ ಒಗರಿಲ್ಲ, ಹೆಚ್ಚು ಸಿಹಿಯೂ ಇಲ್ಲ! ಹಿತ-ಮಿತ. ಹಾಗಾಗಿ ಪಾತ್ರಾಭಿವ್ಯಕ್ತಿಯಲ್ಲಿ ಪೂರ್ಣ ಹಿಡಿತ. 'ಪ್ರಸಂಗ ಉತ್ತರಾರ್ಧದಲ್ಲಿ ದೇವಿಯು ಒಮ್ಮೆ ಉಯ್ಯಾಲೆಯಲ್ಲಿ ಕುಳಿತರೆ ಮತ್ತೆ ಏಳುವುದು ಶುಂಭ-ನಿಶುಂಭರ ವಧೆಯ ಸಮಯಕ್ಕೆ ಮಾತ್ರ. ಮಧ್ಯೆ ಎದ್ದು ಆಚೀಚೆ ಹೋಗುವ ಕ್ರಮವಿಲ್ಲ' ಎಂದು ಪಾತ್ರವನ್ನು ಜ್ಞಾಪಿಸಿಕೊಳ್ಳುತ್ತಾರೆ.

         ಕುಂಡಾವು ಮೇಳದ ಒಂದು ವರುಷದ ತಿರುಗಾಟದ ಬಳಿಕ ಪುನಃ ಐದು ವರುಷ ಧರ್ಮಸ್ಥಳ ಮೇಳ. 1979ರಿಂದ 1990ರ ತನಕ 'ಸುಂಕದಕಟ್ಟೆ ಮೇಳ'ದಲ್ಲಿ ವ್ಯವಸಾಯ. ಈ ಮೇಳವನ್ನು ಹುಟ್ಟುಹಾಕುವುದರಲ್ಲಿ ಭೀಮ ಭಟ್ಟರ ಶ್ರಮವಿದೆ. ಮಳೆಗಾಲದಲ್ಲಿ ಕಲಾವಿದರನ್ನು ಒಟ್ಟು ಸೇರಿಸಿ ದೇಶಾದ್ಯಂತ ಸಂಚರಿಸಿ, ಅನ್ಯ ಭಾಷಿಗರಿಗೂ ಯಕ್ಷಗಾನದ ಸವಿಯನ್ನು ಉಣಿಸಿದ್ದಾರೆ, ಭೀಮ ಭಟ್ಟರು. ಯಕ್ಷಗಾನ ಕುರಿತ ಒಂದೆರಡು ಚಿಕ್ಕ ಪುಸ್ತಿಕೆಯನ್ನು ಅಚ್ಚುಹಾಕಿಸಿದ್ದಾರೆ.   

           ಸುಮಾರು ನಾಲ್ಕು ದಶಕ ಯಕ್ಷಗಾನದಲ್ಲಿ ದುಡಿದ ಭೀಮ ಭಟ್ಟರು 1991ರಲ್ಲಿ ಅಪಘಾತಕ್ಕೀಡಾಗಿ ಚೇತರಿಸಿದರು. ಈಚೆಗೆ ಒಂಭತ್ತು ವರುಷಗಳಿಂದ ಕಾಂತಾವರ ಶ್ರೀ ಕಾಂತೇಶ್ವರ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿ ದುಡಿತ. 'ಡಾ.ಜೀವಂಧರ ಬಲ್ಲಾಳರು ನನಗೆ ಮರುಜೀವ ನೀಡಿದರು. ಇಳಿ ವಯಸ್ಸಿನಲ್ಲಿ ಅನ್ನ, ಸೂರು ನೀಡಿ ಆಶ್ರಯ ಕಲ್ಪಿಸಿದ್ದಾರೆ' ಎನ್ನುತ್ತಾರೆ.

         ತನ್ನ ತಿರುಗಾಟದ ಕ್ಷಣಗಳನ್ನು ಭಟ್ಟರು ಹೇಳುವಾಗ ವಿಷಾದವಿಲ್ಲ. ಸಂಕಟವಿಲ್ಲ. ನೋವಿಲ್ಲ. ಒಂದೊಂದು ಘಟನೆಯನ್ನು ಮೆಲುಕು ಹಾಕುತ್ತಿದ್ದಂತೆ ವಯೋಮಾನ ಹಿಂದಕ್ಕೆ ಹೋಗುತ್ತಿತ್ತು. 'ನೋಡಿ, ಶಾಸ್ತ್ರಿಗಳು ಕಲಿಸಿದ ಭರತನಾಟ್ಯದ ಭಂಗಿ' ಎನ್ನುತ್ತಾ ಶಿವ ತಾಂಡವ ಒಂದು ಭಂಗಿಗೆ ಸಿದ್ಧರಾದರು. ಮನಸ್ಸೇನೋ ಸಿದ್ಧವಾಯಿತು, ಆದರೆ ದೇಹ ಕೇಳಲಿಲ್ಲ!

         ಮಡದಿ ಲೀಲಾವತಿ. ಒಬ್ಬಳೇ ಮಗಳು. ವಿವಾಹಿತೆ. 'ಆರ್ಥಿಕವಾಗಿ ನಾನು ಶ್ರೀಮಂತನಲ್ಲ. ಆದರೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ ನಾನು ಯಕ್ಷ ಶ್ರೀಮಂತ' ಎನ್ನುತ್ತಾರೆ. 'ತನಗೆ ವಯಸ್ಸಾಯಿತು. ಇನ್ನು ಹೇಗೋ. ಯಕ್ಷಗಾನದ ಸುದ್ದಿಯೇ ಬೇಡವಪ್ಪಾ..' ಮುಂತಾದ ಋಣಾತ್ಮಕ ಭಾವ-ಮಾತುಗಳನ್ನು ನಾನು ಭೀಮ ಭಟ್ಟರೊಂದಿಗಿನ ಮಾತುಕತೆಯಲ್ಲಿ ಕಂಡಿಲ್ಲ.

          ಕುರಿಯ ಶಾಸ್ತ್ರಿಗಳ ಗರಡಿಯಲ್ಲಿ ಪಳಗಿದ ಮುಳಿಯಾಲ ಭೀಮ ಭಟ್ಟರ ಕಲಾ ಸೇವೆಗೆ, ಆಗಸ್ಟ್ 18ರಂದು ಪುಣಚ ಶ್ರೀ ದೇವಿ ವಿದ್ಯಾ ಕೇಂದ್ರದಲ್ಲಿ ಅಪರಾಹ್ನ 'ಕುರಿಯ ವಿಠಲ ಶಾಸ್ತ್ರಿ ಜನ್ಮಶತಮಾನೋತ್ಸವ' ಸಂದರ್ಭದ 'ಗೌರವ ಸಂಮಾನ'.

Monday, July 30, 2012

ಯಕ್ಷಸುದ್ದಿ

* ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ಈ ಸಾಲಿನ 'ಸಾಮಗ ಪ್ರಶಸ್ತಿ'ಗೆ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು ಆಯ್ಕೆಯಾಗಿದ್ದಾರೆ. ಕುಡ್ಲದ ಡಾನ್ ಬಾಸ್ಕೋ ಸಭಾಭವನದಲ್ಲಿ ಆಗಸ್ಟ್ 1 ರಂದು ಸಂಜೆ 5.30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ತೆಂಕುತಿಟ್ಟಿನ ಪೂರ್ವರಂಗ (ಸಭಾಲಕ್ಷಣ ಸಹಿತ) ಪಾರಂಪರಿಕ ಪ್ರದರ್ಶನ ಮತ್ತು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ 'ಹಿಡಿಂಬಾ ವಿವಾಹ-ಗರುಡ ಗರ್ವಭಂಗ' ಪ್ರದರ್ಶನ ನಡೆಯಲಿದೆ.

* ಹಿರಿಯ ಕಲಾವಿದ ಬೇತಕುಂಞ್ಞ ಕುಲಾಲರಿಗೆ ಈ ಸಾಲಿನ ದೋಗ್ರಪೂಜಾರಿ ಪ್ರಶಸ್ತಿ. ನಾಲ್ಕು ದಶಕಗಳ ಕಾಲ ಮೂಲ್ಕಿ, ಕುತ್ಯಾಳ, ಸೌಕೂರು, ಕುಂಡಾವು, ಕೊಲ್ಲೂರು, ಆದಿಸುಬ್ರಹ್ಮಣ್ಯ, ಸುಂಕದಕಟ್ಟೆ.. ಮೊದಲಾದ ಮೇಳಗಳಲ್ಲಿ ವ್ಯವಸಾಯ ಮಾಡಿದ ಕುಲಾಲರಿಗೆ ಆಗಸ್ಟ್ 1 ರಂದು ಸಂಜೆ ಪುರಭವದಲ್ಲಿ ಪ್ರಶಸ್ತಿ ಪ್ರದಾನ.

ವರದಿ

* ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿಯ ಹದಿನೈದನೇ ವರುಷದ 'ಯಕ್ಷಾಂತರಂಗ' ಕಾರ್ಯಕ್ರಮದ ಸಮಾರೋಪ ಸಮಾರಂಭವು ನಿನ್ನೆ (ಜುಲೈ 29) ಮೂಡಬಿದಿರೆ ಸಮಾಜ ಮಂದಿರದಲ್ಲಿ ಜರುಗಿತು. ಈ ಸಂದರ್ಭದಲ್ಲಿ ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತ ಮತ್ತು ವೇಷಧಾರಿ ಸಂಪಾಜೆ ಶೀನಪ್ಪ ರೈಯವರನ್ನು ಸಂಮಾನಿಸಲಾಯಿತು.

* ಕುಂಬಳೆಯ ಕಣಿಪುರ ಸಾಂಸ್ಕೃತಿಕ ಪ್ರತಿಷ್ಠಾನ ವೇದಿಕೆ ಮತ್ತು ಕಣಿಪುರ ಮಾಸಪತ್ರಿಕೆಯ ಆಶ್ರಯದಲ್ಲಿ ಆರನೇ ವರುಷದ 'ಶೇಣಿ ಸಮ್ಮಾನ್' ಸಮಾರಂಭವರು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಜುಲೈ 29ರಂದು ಜರುಗಿತು. ಹಿರಿಯ ಭಾಗವತ ಕಾಟುಕುಕ್ಕೆ ಕೊರಗಪ್ಪ ನಾಯ್ಕ ಇವರಿಗೆ ಸಾಲಿನ ಶೇಣಿ ಸಮ್ಮಾನ್ ಪ್ರಶಸ್ತಿ' ನೀಡಿ ಗೌರವಿಸಲಾಯಿತು.

Monday, June 25, 2012

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯರಾಗಿ ಭಾಸ್ಕರ ಬಾರ್ಯ

           ಕಲಾವಿದ, ಸಂಘಟಕ, ಪ್ರವಚನಕಾರ ಹಾಗೂ ಸಾಮಾಜಿಕ ಕಾರ್ಯಕರ್ತ ಶ್ರೀ ಭಾಸ್ಕರ ಬಾರ್ಯ ಇವರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಸದಸ್ಯರನ್ನಾಗಿ ಆಯ್ಕೆ ಮಾಡಿ ಘನ ಕರ್ನಾಟಕ ಸರಕಾರವು ಆದೇಶ ಹೊರಡಿಸಿದೆ. ಹತ್ತು ಮಂದಿ ಸದಸ್ಯರನ್ನೊಳಗೊಂಡ ಅಕಾಡೆಮಿಗೆ ಪ್ರೊ.ಎಂ.ಎಲ್.ಸಾಮಗರು ಅಧ್ಯಕ್ಷರಾಗಿದ್ದಾರೆ.
          ಭಾಸ್ಕರ ಬಾರ್ಯರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರು. ಕರ್ನಾಟಕ ಸಂಸ್ಕೃತಿ ಸಂರಕ್ಷಣಾ ಸೊಸೈಟಿ (ರಿ) ಇದರ ಸದಸ್ಯರಾಗಿ ಈ ಹಿಂದೆ ಆಯ್ಕೆಯಾಗಿರುತ್ತಾರೆ.  ಬೊಳ್ವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ. ಪುತ್ತೂರು ಶಿವಳ್ಳಿ ಸಂಪದದ ಅಧ್ಯಕ್ಷರಾಗಿ ಈಚೆಗಷ್ಟೇ ನಿಯುಕ್ತಿಯಾಗಿರುತ್ತಾರೆ. ಅಲ್ಲದೆ - ಪುತ್ತೂರು ದ್ರಾವಿಡ ಬ್ರಾಹ್ಮಣರ ಹಾಸ್ಟೆಲ್ ಸಮಿತಿಯ ಉಪಾಧ್ಯಕ್ಷ, ಪುತ್ತೂರಿನ ನಾಡಹಬ್ಬ ಸಮಿತಿಯ ಉಪಾಧ್ಯಕ್ಷ, ಮಾಜಿ ಹಾಸ್ಯ ಪ್ರಿಯ ಸಂಘದ ಆಧ್ಯಕ್ಷ.
          ಎಡನೀರು ಯಕ್ಷಗಾನ ಸಮಿತಿ, ಮೂಡಂಬೈಲು 75 ಸಮಾರಂಭ, ಶೇಣಿ ನೆನಪು, ಸಾಮಗದ್ವಯ ಸಂಸ್ಮರಣೆ, 'ಆಂಜನೇಯ 40'ರ ಮಾಣಿಕ್ಯ ಸಂಭ್ರಮ, ಸರಣಿ ತಾಳಮದ್ದಳೆ ಮೊದಲಾದ ಗುರುತರ ಕಾರ್ಯಕ್ರಮಗಳ ಸಂಘಟನೆಯನ್ನು ಮಾಡಿರುತ್ತಾರೆ. ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಪರಂಪರೆಯ ಅರ್ಚಕ ಮನೆತನ ಇವರದು.  
          ಬಾರ್ಯರ ಸಂಘಟನಾ ಕೌಶಲಕ್ಕೆ ಸಾಕ್ಷಿಯಾಗಿ ಹಲವು ಸಂಮಾನಗಳು ಅರಸಿ ಬಂದಿವೆ. ಉಂಡೆಮನೆ ಕೃಷ್ಣ ಭಟ್, ಸ್ನೇಹ ಸಂಗಮ ರಿಕ್ಷಾ ಚಾಲಕರ ಸಂಘ, ದೇಂತಡ್ಕ ಶ್ರೀ ವನದುರ್ಗಾ ದೇವಸ್ಥಾನ, ಜೋಗಿ ಸುಧಾರಕರ ಸಂಘ ಹಾಗೂ ಇತರ ಸಂಸ್ಥೆಗಳು ಸಂಮಾನಿಸಿವೆ. ತನ್ನ ತೀರ್ಥರೂಪರ ನೆನಪಿಗಾಗಿ 'ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನ'ವನ್ನು ಸ್ಥಾಪಿಸಿ, ವರುಷಕ್ಕೊಮ್ಮೆ ವಿವಿಧ ಸಾಧಕರನ್ನು ಗೌರವಿಸುವ ಪರಿಪಾಠ ಇಟ್ಟುಕೊಂಡಿದ್ದಾರೆ.
          ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿರುತ್ತಾರೆ. ಮೂರು ದಶಕದ ಹಿಂದೆ ಬಾರ್ಯದಲ್ಲಿ ವಯಸ್ಕರ ಶಿಕ್ಷಣ ತರಗತಿಯ ಅಧ್ಯಾಪಕನಾಗಿ 'ಅತ್ಯುತ್ತಮ ಶಿಕ್ಷಕ' ನೆಗಳ್ತೆಗೆ ಪಾತ್ರರಾಗಿದ್ದರು. ಅಲ್ಲದೆ ಯುವಕ ಮತ್ತು ಯುವತಿ ಮಂಡಲಗಳ ಕಾರ್ಯಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದರು. ಈಚೆಗೆ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಜಾತ್ರಾ ಉಸ್ತುವಾರಿ ಸಮಿತಿಯ ಸದಸ್ಯರಾಗಿದ್ದರು. ಪುತ್ತೂರಿನ ಬೊಳುವಾರಿನ ಶ್ರೀ ದುರ್ಗಾಶಕ್ತಿ ಫೈನಾನ್ಸ್ (ರಿ) ಇದನ್ನು ಬಾರ್ಯರು ನಡೆಸುತ್ತಿದ್ದಾರೆ.

Friday, June 8, 2012

ಹಿರಿಯ 'ಚೌಕಿ' ಕಲಾವಿದ - ಕೂಡ್ಲು ಶಂಭು ಬಲ್ಯಾಯ

ಹವ್ಯಾಸಿ ತಂಡಗಳ ಪ್ರದರ್ಶನಗಳ ಹಿಂದೆ ನೇಪಥ್ಯ ಕಲಾವಿದರ ದುಡಿಮೆ ಅಜ್ಞಾತ. ತೆರೆಮರೆಯಲ್ಲಿದ್ದು ದೇವತೆಗಳನ್ನು, ದಾನವರನ್ನು ಸೃಷ್ಟಿಸುವ ಸುಭಲಿಗರು. ಪ್ರದರ್ಶನದ ಯಶಸ್ಸಿನ ಹಿಂದೆ 'ಚೌಕಿ ಕೆಲಸ'ದ ಸಾರಥ್ಯ ಹೊತ್ತ ಕರ್ಮಿಗಳ ಜವಾಬ್ದಾರಿ ಹಿರಿದು. ಒಮ್ಮೆ ಚೌಕಿ ಪ್ರವೇಶಿಸಿದರೆ ಸಾಕು, ಮತ್ತೆಲ್ಲವೂ ಅಲೌಕಿಕ ಸಂಬಂಧ!

ಕೂಡ್ಲು ಶಂಭು ಬಲ್ಯಾಯರು (ಶಂಭಣ್ಣ) ಹಿರಿಯ ನೇಪಥ್ಯ ಕಲಾವಿದ. ಮೇ 16 ರಂದು ಅವರ ಮರಣ ವಾರ್ತೆ ಕೇಳಿದಾಗ ಒಡನಾಟದ ಕ್ಷಣಗಳು ಮಿಂಚಿ ಮರೆಯಾದುವು. ಕಾಸರಗೋಡು ಪರಿಸರದ ಒಂದು ಕಾಲಘಟ್ಟದ ಯಕ್ಷಗಾನ ಆಟಗಳ ಸುದ್ದಿ ಮಾತನಾಡುವಾಗ ಬಲ್ಯಾಯರನ್ನು ಮರೆಯುವಂತಿಲ್ಲ.

ಚೌಕಿಯ ದುಡಿಮೆಗಾರರೂ ಕಲಾವಿದರು. 'ಡ್ರೆಸ್ ಕಟ್ಟುವವರು, ಚೌಕಿಯವರು' ಎಂಬುದು ಅಡ್ಡ ಹೆಸರು. ಯಾರೋ ಬಂದು ಚೌಕಿಯ ಕೆಲಸವನ್ನು ಮಾಡಲಾಗುವುದಿಲ್ಲ. ವೇಷಗಳಿಗೆ ಡ್ರೆಸ್ ಕಟ್ಟುವವನಿಗೆ ಯಾವ ವೇಷ ಎಷ್ಟು ಹೊತ್ತಿಗೆ ರಂಗಪ್ರವೇಶಿಸಬೇಕು ಎನ್ನುವ ಅರಿವು ಬೇಕು. ಇದಕ್ಕಾಗಿ ಪುರಾಣ ಜ್ಞಾನ ಬೇಕು. ರಂಗದ ಪರಿಕಲ್ಪನೆ ಬೇಕು. ವೇಷಧಾರಿಯಾದರೆ ಕೆಲಸ ಸುಲಭವಾಗುತ್ತದೆ, ಹಿಂದೊಮ್ಮೆ ಮಾತಿಗೆ ಸಿಕ್ಕಾಗ ಆಡಿದ್ದ ಶಂಭಣ್ಣನ ಮಾತು ಮರೆತು ಬಿಡುವಂತಹುದಲ್ಲ. ನಡೆಯುತ್ತಿದ್ದ ಆಟಗಳ ಚೌಕಿಯಲ್ಲಿ ಈ ಕಾರಣದಿಂದಾಗಿ 'ಶಂಭಣ್ಣ'ನಿಗೆ ಬೇಡಿಕೆ.

ವೃತ್ತಿ ಕಲಾವಿದರಿಗೆ ವೇಷಭೂಷಣಗಳನ್ನು ವ್ಯವಸ್ಥೆ ಮಾಡಿಟ್ಟರಾಯಿತು, ಸ್ವತಃ ತೊಟ್ಟುಕೊಳ್ಳುತ್ತಾರೆ. ಹವ್ಯಾಸಿಗಳಿಗೆ ಅಸಾಧ್ಯ. ಬಣ್ಣ ಹಾಕುವಲ್ಲಿಂದ ಡ್ರೆಸ್ ಕಟ್ಟುವ ವರೆಗೆ ಅವಲಂಬನೆ ಬೇಕು. ಇಂತಹ ಹೊತ್ತಲ್ಲಿ ವೈಯಕ್ತಿಕವಾದ ವಿಕಾರಗಳಿಗೆ ಬಲಿಯಾಗುವುದು ನೇಪಥ್ಯ ಕರ್ಮಿಗಳು. 'ಡ್ರೆಸ್ ಸರಿಯಿಲ್ಲ, ಕಿರೀಟ ಮಸುಕಾಗಿದೆ. ಗೆಜ್ಜೆಯ ಹಗ್ಗಗಳು ಕಿರಿದಾಗಿದೆ..' ಮೊದಲಾದ ಗೊಣಗಾಟಗಳಿಗೆ ಮೌನದಿಂದಲೇ ಉತ್ತರ ಕೊಡಬೇಕಾದ ಸ್ಥಿತಿ. ಶಂಭಣ್ಣ 'ವೈವಿಧ್ಯಮಯ' ಗೊಣಗಾಟಗಳನ್ನು ನೋಡಿ, ಮೌನವಾಗಿದ್ದು, ಅನುಭವಿಸಿದ ಕಲಾವಿದ.

ತನ್ನ ಹದಿಮೂರನೆಯ ವಯಸ್ಸಿನಲ್ಲಿ ಬಣ್ಣ ಹಚ್ಚಿದ ಬಲ್ಯಾಯರು ಮಧೂರು ಮೇಳದಿಂದ ಅಲ್ಪ ಕಾಲದ ತಿರುಗಾಟ ಮಾಡಿದ್ದರು. ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಮಂಡಳಿಯ ಮೂಲಕ ಮುಂದಿನ ವ್ಯವಸಾಯ. ಮಾಳಂಗಾಯ ಕೃಷ್ಣ ಭಟ್, ವೇದಮೂರ್ತಿ ವೆಂಕಟ್ರಮಣ ಭಟ್.. ಇವರ ಒಡನಾಟದಿಂದ ಮಣ್ಣಿನ ಮುದ್ದೆ ಮೂರ್ತಿಯಾಯಿತು. ಡಾ.ಶೇಣಿಯವರ ವ್ಯವಸ್ಥಾಪಕತ್ವದ ಕೂಡ್ಲು ಮೇಳದಿಂದಾಗಿ ಶಿಲ್ಪಕ್ಕೆ ಚಲನೆ ಬಂತು. ಪೂರ್ವರಂಗದ ಅಭ್ಯಾಸ. ಸಣ್ಣಪುಟ್ಟ ಪಾತ್ರಗಳ ನಿರ್ವಹಣೆ. ಡಾ.ಶೇಣಿಯವರ 'ಬಪ್ಪಬ್ಯಾರಿ' ಪಾತ್ರದ ಜತೆ ಶಂಭು ಬಲ್ಯಾಯರದ್ದು 'ಉಸ್ಮಾನ್' ಹಲವಾಗಿವೆ. ಮೂರರ ತನಕ ಶಾಲಾಭ್ಯಾಸದ ಶಂಭಣ್ಣ ಮೇಳದಲ್ಲಿ ಕಲಿತುದೇ ಹೆಚ್ಚು. ವೈಯಕ್ತಿಕ ಅನನುಕೂಲಗಳಿಂದ ಮೇಳ ತಿರುಗಾಟಕ್ಕೆ ನಿಲುಗಡೆ. ಬದುಕಿಗಾಗಿ ನೇಯ್ಗೆ ವೃತ್ತಿ. ರಾತ್ರಿ ಹಾಸ್ಯ ಕಲಾವಿದನಾಗಿ ಭಾಗಿ. ಆದರೆ ಅವರನ್ನು ನೇಪಥ್ಯ ಕರ್ಮಿಯಾಗಿ ಯಕ್ಷಗಾನ ಸ್ವೀಕರಿಸಿದೆ. ಮೇಳ ಅನುಭವಗಳ ನೇರ ಅನುಭವ ಹವ್ಯಾಸಿ ಕ್ಷೇತ್ರಕ್ಕೆ ಪ್ರಾಪ್ತವಾಗಿದೆ.

ಶಂಭಣ್ಣ ಚೌಕಿಯ ನಿರ್ವಹಣೆಯಲ್ಲಿದ್ದರೆ ಚೌಕಿ ಪ್ರವೇಶದಲ್ಲಿಯೇ ಗೋಚರವಾಗುತ್ತದೆ. ಅಷ್ಟೊಂದು ಒಪ್ಪ-ಓರಣ. ಚಿಟ್ಟೆಪಟ್ಟಿ, ಗೆಜ್ಜೆ, ಇಜಾರು, ಸಾಕ್ಸ್, .. ಎಲ್ಲೆಲ್ಲಿರಬೇಕೋ ಅಲ್ಲಲ್ಲಿರುತ್ತಿತ್ತು. ಹುಡುಕುವ ಪ್ರಮೇಯ ಬರುತ್ತಿರಲಿಲ್ಲ. ಕಿರೀಟ ಶಿರದಲ್ಲಿ ಆಧರಿಸಿ ನಿಲ್ಲಲು 'ಚಿಟ್ಟೆಪಟ್ಟಿ' ಕಟ್ಟಬೇಕು. ಅದು ಹೆಚ್ಚು ಬಿಗಿಯಾದರೆ, ವೇಷವು ಚೌಕಿಯಲ್ಲೇ ಪ್ರದರ್ಶನ ಮುಗಿಸುತ್ತದೆ! ಸಡಿಲವಾದರೆ ರಂಗ ಪ್ರವೇಶಿಸುವಾಗಲೇ ಕಿರೀಟ ಕರದೊಳಗೆ! ಈ ಬಿಗಿಯ ಸಮನ್ವಯ ಶಂಭಣ್ಣನಿಗೆ ಕರತಲಾಮಲಕ. ಈ ಸೂಕ್ಷ್ಮ ಗೊತ್ತಿದ್ದ ಕಲಾವಿದರು ಶಂಭಣ್ಣನಲ್ಲಿಯೇ ಚಿಟ್ಟಿಪಟ್ಟಿ ಕಟ್ಟಿಸಲು ಕಾಯುತ್ತಿದ್ದ ದಿವಸಗಳಿದ್ದುವು.

ಮೇಳದಲ್ಲಿ ನಿರ್ವಹಿಸುತ್ತಿದ್ದ ಕೆಲವು ಪಾತ್ರಗಳು ಅವರಿಗೆ ನೆನಪಾದರೆ ಸಾಕು, ಸಂಘಟಕರಲ್ಲಿ ವಿನಂತಿಸಿ ಪಾತ್ರಗಳನ್ನೂ ಮಾಡುತ್ತಿದ್ದರು. ಗಿರಿಜಾ ಕಲ್ಯಾಣ ಪ್ರಸಂಗದ 'ಭೈರಾಗಿ', ಇಂದ್ರ್ರಜಿತು ಕಾಳಗದ 'ಜಾಂಬವ' ಪಾತ್ರಗಳು ಮಾಸ್ಟರ್ಪೀಸ್! ಈ ಪ್ರಸಂಗಗಳಿದ್ದರೆ ಪಾತ್ರಗಳು ಅವರಿಗೇ ಮೀಸಲು. ಒಂದು ವೇಳೆ ಪಾತ್ರ ನಿರ್ವಹಿಸಲು ಅವಕಾಶ ಕೊಟ್ಟಿಲ್ಲ ಅಂತಾದರೆ ಕೆರಳಿದ ಘಟನೆಗಳೂ ಇವೆ! ಚಿಕ್ಕಪುಟ್ಟ ಪಾತ್ರಗಳಿಗೆ ಕಲಾವಿದರು ಕೈಕೊಟ್ಟರೆ ಆ ಜಾಗವನ್ನು ಚೌಕಿಯ ಕೆಲಸದ ಜತೆಜತೆಗೆ ಶಂಭಣ್ಣ ಸರಿದೂಗಿಸಿದ್ದೂ ಉಂಟು.

ಶಂಭಣ್ಣ ಯಕ್ಷಗಾನದಿಂದ ಹೆಚ್ಚು ಪಡೆಯಲಿಲ್ಲ. ಆರ್ಥಿಕವಾಗಿ ಶ್ರೀಮಂತರಲ್ಲ. ಅಹಂಕಾರ ದರ್ಪಗಳಿರಲಿಲ್ಲ. ಬಡತನದ ಬದುಕು. ಬದುಕಿನಲ್ಲಿ ಭಯ - ಭಕ್ತಿಯ ಸಮನ್ವಯದ ಪಾಕ. ರಂಗವನ್ನು ಆರಾಧಿಸುವ ವ್ಯಕ್ತಿತ್ವ. ಚೌಕಿಯ ಯಾವ ಕೆಲಸವನ್ನು 'ಆಗದು' ಎಂದು ದೂರವಿರುತ್ತಿರಲಿಲ್ಲ. ಸಂಘಟಕರ ಎದುರು ತನಗೆ ನೀಡಿದ ಸಂಭಾವನೆಯ ಕವರನ್ನು ಶಂಭಣ್ಣ ಎಂದೂ ಒಡೆದು ನೋಡಿದವರಲ್ಲ! ಬದುಕಿನ ಉತ್ತರಾಪಥದಲ್ಲಿ ಅವರ ಶ್ರವಣಶಕ್ತಿ ಮೊಟಕಾಗಿತ್ತು. 'ತೊಂದರೆಯಿಲ್ಲ, ಯಾರು ಏನು ಹೇಳಿದರೂ ಕೇಳುವುದಿಲ್ಲ. ಚೌಕಿಯಲ್ಲಿ ಹಾಗಿರುವುದು ಒಳ್ಳೆಯದಲ್ವಾ' ವಿನೋದವಾಗಿ ಹೇಳಿದ ಅವರ ಮಾತಿನ ಹಿಂದೆ ಖೇದವಿದೆಯಲ್ವಾ.

ಕೂಡ್ಲು ಗೋಪಾಲಕೃಷ್ಣ ದೇವರ ಪರಮ ಭಕ್ತ. ವಾರ್ಶಿಕ ಮಹೋತ್ಸವದಂದು ದೇವರೆದುದು ಕೃಷ್ಣ ವೇಷತೊಟ್ಟು ಕುಣಿದರೆ ಇಹವನ್ನು ಮರೆಯುತ್ತಿದ್ದರು! ಕಾಸರಗೋಡು ಜಿಲ್ಲೆಯ ಕೂಡ್ಲು ಎಂಬಲ್ಲಿ ವಾಸ. ಪತ್ನಿ ಗಿರಿಜಾ. ಮೂವರು ಗಂಡು, ಮೂವರು ಹೆಣ್ಣುಮಕ್ಕಳು. ಮಧೂರು ಉಳಿಯ ಶ್ರೀ ಧನ್ವಂತರಿ ಯಕ್ಷಗಾನ ಕಲಾ ಸಂಘ, ಶ್ರೀ ಮಲ್ಲ ಮೇಳಗಳಿಗೆ ಶಂಭು ಬಲ್ಯಾಯರು ಖಾಯಂ ನೇಪಥ್ಯ ಕಲಾವಿದರಾಗಿದ್ದರು. ಬದುಕಿನ ಕೊನೆಯ ವರ್ಷಗಳಲ್ಲಿ ಶಾರೀರಿಕ ಅಸೌಖ್ಯತೆಯಿಂದಾಗಿ ಚೌಕಿಯಿಂದ ದೂರವಿದ್ದ ಶಂಭು ಬಲ್ಯಾಯರು 'ಯಕ್ಷಗಾನದ ಚೌಕಿಗೆ ಮಾನ' ತಂದ ಕಲಾವಿದ. ಅಗಲಿದ ಚೇತನಕ್ಕೆ ಅಕ್ಷರ ನಮನ.

Monday, May 14, 2012

ಮೂಡಂಬೈಲು-ಗಾಂಧಿ ದಾರಿಯ ಅತ್ಯುತ್ತಮ ಮಾದರಿ




"ಮೂಡಂಬೈಲು ಶಾಸ್ತ್ರಿಗಳು ಹಳ್ಳಿಯಲ್ಲಿ ಅಧ್ಯಾಪಕರಾಗಿದ್ದುಕೊಂಡು, ಮಾದರಿ ಶಾಲೆಯಾಗಿ ರೂಪಿಸುವುದರ ಜತೆಗೆ ಅಭಿವೃದ್ಧಿಗೆ ಬೇಕಾದಂತಹ ಸಂಪನ್ಮೂಲಗಳ ಕ್ರೋಢೀಕರಣಕ್ಕಾಗಿ ಅಹರ್ನಿಶಿ ದುಡಿದವರು. ಕೈತುಂಬಾ ಸಂಬಳ ಬರುವ ಅವಕಾಶಗಳಿದ್ದರೂ ಅದರತ್ತ ನೋಡದೆ ತನ್ನೂರಿನ ಏಳ್ಗೆಗಾಗಿ ಶ್ರಮಿಸಿದ್ದಾರೆ. ಗ್ರಾಮವನ್ನು ಕಟ್ಟುವ ಮಹಾತ್ಮ ಗಾಂಧೀಜಿಯವರ ಮಾದರಿಯನ್ನು ಇವರಲ್ಲಿ ಕಾಣಬಹುದು, ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು.

          ಅವರು ಮೇ.13ರಂದು ಪುತ್ತೂರಿನ 'ನಟರಾಜ ವೇದಿಕೆ'ಯಲ್ಲಿ ಜರುಗಿದ ಖ್ಯಾತ ಅರ್ಥದಾರಿ ಮೂಡಂಬೈಲು ಸಿ. ಗೋಪಾಲಕೃಷ್ಣ ಶಾಸ್ತ್ರಿಗಳ 'ಎಪ್ಪತ್ತೈದರ ಸಂಭ್ರಮ'ದ ಸಂಮಾನ  ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ, 'ಒಂದು ಕಾಲಘಟ್ಟದ ವಿದ್ವತ್ ಪರಂಪರೆ ಶಾಸ್ತ್ರಿಗಳಲ್ಲಿ ಕಾಣಬಹುದು' ಎಂದರು.

          ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಮತ್ತು ಮೂಡಂಬೈಲು 75 ಸಂಮಾನ ಸಮಿತಿ ಪುತ್ತೂರು ಇವರ ಜಂಟಿ ಆಶ್ರಯದಲ್ಲಿ ಮತ್ತು ಸಮಸ್ತ ಅಭಿಮಾನಿಗಳ ಪ್ರೋತ್ಸಾಹದಿಂದ ಶಾಸ್ತ್ರಿಗಳನ್ನು ಶಾಲು, ಹಾರ, ಹಣ್ಣುಹಂಪಲು, ಕನಕದುಂಗುರ, ಬೆಳ್ಳಿಯ ಸ್ಮರಣಿಕೆ, ಸಂಮಾನ ಪತ್ರದೊಂದಿಗೆ ಭಾವಪೂರ್ಣವಾಗಿ, ಗೌರವದಿಂದ ಸಂಮಾನಿಸಲಾಯಿತು. ಶಾಸ್ತ್ರಿಗಳ ಗುರು ವಿದ್ವಾನ್ ಪೆರ್ಲ ಕೃಷ್ಣ ಭಟ್ಟರು ಆಶೀರ್ವಾದ ಪೂರ್ವಕ ಶಿಷ್ಯನನ್ನು ಹರಿಸಿ, ಸಂಮಾನಿಸಿದರು. ಸಂಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಶಾಸ್ತ್ರಿಗಳು, 'ಕಲಾವಿದ ಸಕ್ರಿಯವಾಗಿರುವಾಗಲೇ ಗೌರವ, ಪುರಸ್ಕಾರಗಳು ಸಲ್ಲಬೇಕು' ಎಂದರು. ಶ್ರೀಮತಿ ಪದ್ಮಾ ಕೆ.ಆಚಾರ್ಯ ಸಂಮಾನ ಪತ್ರವನ್ನು ವಾಚಿಸಿದರು. ಬಳಿಕೆ ಶಾಸ್ತ್ರಿ ಅಭಿಮಾನಿಗಳಿಂದ ಹಾರಾರ್ಪಣೆ ನಡೆಯಿತು.

          ಹಿರಿಯ ವಿದ್ವಾಂಸ, ಅರ್ಥದಾರಿ ಡಾ.ಎಂ.ಪ್ರಭಾಕರ ಜೋಶಿಯವರು, ಶಾಸ್ತ್ರಿಯವರೊಂದಿಗಿನ ನಾಲ್ಕು ದಶಕದ ತಮ್ಮ ಒಡನಾಟವನ್ನು ಸೋದಾಹರಣ ಮೂಲಕ ಪ್ರಸ್ತುತಪಡಿಸಿ ಅಭಿನಂದಿಸಿದರು. ಹೊಸನಗರ ಮೇಳದ ವ್ಯವಸ್ಥಾಪಕ, ಅರ್ಥದಾರಿ, ಸಂಘಟಕ ಉಜಿರೆ ಅಶೋಕ ಭಟ್ಟರು ಮೂಡಂಬೈಲು ಅವರ ಅರ್ಥಗಾರಿಕೆಯ ಸೊಗಸನ್ನು ವಿವರಿಸಿದರು. 

          ಅಭ್ಯಾಗತರಾಗಿ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಎಸ್.ಆರ್.ರಂಗಮೂರ್ತಿ ಉಪಸ್ಥಿತರಿದ್ದು ಎಪ್ಪತ್ತೈದರ ಶಾಸ್ತ್ರಿಗಳಿಗೆ ಶುಭಹಾರೈಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕೇಂದ್ರಾಧ್ಯಕ್ಷ ಹರಿಕೃಷ್ಣ ಪುನರೂರು, ಜಿಲ್ಲಾ ಕಚೇರಿ ತಹಶೀಲ್ದಾರ್ ಕೆ.ಮೋಹನ್ ರಾವ್ ಮತ್ತು ಸಾಹಿತಿ ಡಾ.ರಮಾನಂದ ಬನಾರಿಯವರು ಶುಭಾಶಂಸನೆ ಮಾಡಿದರು.

          ಸಂಮಾನ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಇವರಿಂದ ಸ್ವಾಗತ. ಪ್ರತಿಷ್ಠಾನದ ಅಧ್ಯಕ್ಷ ಸಿ.ರಾಮಕೃಷ್ಣ ಶಾಸ್ತ್ರಿಯವರಿಂದ ಪ್ರಸ್ತಾವನೆ. ಸಂಮಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಾರ್ಯರಿಂದ ವಂದನಾರ್ಪಣೆ. ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ. ಕಾರಂತ ಪೆರಾಜೆ ಮತ್ತು ಸಂಮಾನ ಸಮಿತಿಯ ಕಾರ್ಯದರ್ಶಿ ದಿವಾಕರ ಗೇರುಕಟ್ಟೆಯವರು ಸಮಾರಂಭವನ್ನು ನಿರ್ವಹಿಸಿದರು.

ಗೌರವ ಗ್ರಂಥ ಅನಾವರಣ

          'ಮೂಡಂಬೈಲು ಶಾಸ್ತ್ರಿ 75' ಗೌರವ ಗ್ರಂಥವನ್ನು ಕರ್ನಾಟಕ ಸಾರಿಗೆ ಆಯಕ್ತ ಟಿ.ಶ್ಯಾಮ ಭಟ್ ಅನಾವರಣಗೊಳಿಸಿ, ಶಾಸ್ತ್ರಿಯವರ ಅರ್ಥಗಾರಿಕೆಯ ಗಟ್ಟಿತನವನ್ನು ನೆನಪಿಸಿಕೊಳ್ಳುತ್ತಾ, 'ಶಾಸ್ತ್ರಿಯವರು ಬದುಕಿನಲ್ಲಿ ಕಲೆಯನ್ನು ಅಂಟಿಸಿಕೊಂಡು ಸ್ವ-ಪ್ರಯತ್ನದಿಂದ ಎತ್ತರಕ್ಕೇರಿದವರು. ಆರ್ಥಗಾರಿಕೆಯಲ್ಲಿ ಅವರಾಗಿ ಆಕ್ರಮಣಕ್ಕೆ ಹೋಗುವವರಲ್ಲ. ಚುಚ್ಚಿದರೆ ಬಿಡರು. ಅವರ ಏಕಮುಖ ಅರ್ಥಗಳಲ್ಲಿ ಸಾಹಿತ್ಯದ ಪಕ್ವತೆ ಎದ್ದುಕಾಣುತ್ತದೆ' ಎಂದರು.  ಗ್ರಂಥ ರಚನೆಯ ಹಿಂದಿನ ಶ್ರಮ, ಹೂರಣವನ್ನು ಪ್ರಧಾನ ಸಂಪಾದಕರಾದ ಸಿ.ಎಚ್.ಕೃಷ್ಣ ಶಾಸ್ತ್ರಿ ಬಾಳಿಲ ಮತ್ತು ಡಾ.ಎಂ.ಪ್ರಭಾಕರ ಜೋಶಿಯವರು ವಿವರಿಸಿದರು. 508 ಪುಟಗಳ ಗ್ರಂಥದ ಮುಖ ಬೆಲೆ ಮುನ್ನೂರು ರೂಪಾಯಿ.

ಉದ್ಘಾಟನೆ

          ಪೂರ್ವಾಹ್ನ ಜರುಗಿದ ಸಮಾರಂಭದಲ್ಲಿ ಉಪ್ಪಿನಂಗಡಿ ಕನ್ನಡ ಸಂಗಮದ ಅಧ್ಯಕ್ಷ ಕಜೆ ಈಶ್ವರ ಭಟ್ಟರು ದೀಪಜ್ವಲನದ ಮೂಲಕ 'ಮೂಡಂಬೈಲು 75' ಕಲಾಪಕ್ಕೆ ಚಾಲನೆ ಕೊಟ್ಟು, 'ಕಲಾವಿದನ ಜೀವಿತ ಕಾಲದಲ್ಲೇ ಇಂತಹ ಗ್ರಂಥಗಳು ಹೊರಬರುವುದು ಉತ್ತಮ ಕೆಲಸ' ಎಂದರು. ಕರ್ನಾಟಕ ಯಕ್ಷಗಾನ ಮತ್ತು ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ:ಎಂ.ಎಲ್.ಸಾಮಗರು ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬೇರೆ ಕಲೆಗಳಿಂದ ಯಕ್ಷಗಾನವು ಸಾತ್ವಿಕ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಬದುಕಿನಲ್ಲಿ ಯಕ್ಷಗಾನ ಏಕೆ ಬೇಕು ಎಂಬುದನ್ನು ಯುವ ಜನರಿಗೆ, ಹೆತ್ತವರಿಗೆ, ಪಾಲಕರಿಗೆ ತಿಳಿಹೇಳುವ ಪ್ರತ್ಯೇಕ ಕೆಲಸಗಳಾಗಬೇಕಾಗಿದೆ' ಎಂದರು.

          ಅಭ್ಯಾಗತರಾಗಿ ಪುತ್ತೂರಿನ ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಪುತ್ತೂರು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯರು ಶುಭ ಹಾರೈಸಿದರು.  ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥ ಡಾ.ತಾಳ್ತಜೆ ವಸಂತ ಕುಮಾರ್, ದ.ಕ.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕರ್ನಾಟಕ ಧಾರ್ಮಿಕ ಪರಿಷತ್ತಿನ ಸದಸ್ಯ ಪಂಜ ಭಾಸ್ಕರ ಭಟ್ ಶುಭಾಶಂಸನೆ ಮಾಡಿದರು.

          ಈ ಸಂದರ್ಭದಲ್ಲಿ ಕಲ್ಕೂರ ಪ್ರತಿಷ್ಠಾನದ ವತಿಯಿಂದ ಮೂಡಂಬೈಲು ಅವರನ್ನು ಗೌರವಿಸಲಾಯಿತು. ಸಂಮಾನ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಇವರಿಂದ ಸ್ವಾಗತ. ಶಾಸ್ತ್ರಿ ಪ್ರತಿಷ್ಟಾನದ ಗೌರವಾಧ್ಯಕ್ಷ ಡಾ.ಸಿ.ಕೃಷ್ಣ ಶಾಸ್ತ್ರಿ ಕಡಬ, ಪ್ರತಿಷ್ಠಾನದ ಕಾರ್ಯದರ್ಶಿ ಸಿ.ಮುರಲೀಧರ ಶಾಸ್ತ್ರಿ ಮೂಡಂಬೈಲು ಇವರಿಂದ ಧನ್ಯವಾದ. ಆರಂಭದಲ್ಲಿ ಕು.ಅನನ್ಯ ಬೊಳಂತಿಮೊಗರು, ಕೃಷ್ಣರಾಜ ದೇಲಂತಮಜಲು ಇವರಿಂದ ಪ್ರಾರ್ಥನೆ. ಅರ್ಥದಾರಿ ವಾಸುದೇವ ರಂಗಾಭಟ್ಟ ಮತ್ತು ಹರೀಶ್ ಬೊಳಂತಿಮೊಗರು ಇವರಿಂದ ನಿರ್ವಹಣೆ.

ತಾಳಮದ್ದಳೆ

          ಯಕ್ಷಗಾನ ಬಯಲಾಟ ಅಕಾಡೆಮಿ ಬೆಂಗಳೂರು ಇವರ ಸಹಕಾರದೊಂದಿಗೆ 'ಅರ್ಥಗಾರಿಕೆಯಲ್ಲಿ ಕನ್ನಡ ಸೊಗಸು' ಎಂಬ ಆಶಯದಲ್ಲಿ 'ಭೀಷ್ಮ ಸೇನಾಧಿಪತ್ಯ' ಮತ್ತು 'ಚಕ್ರಗ್ರಹಣ' ಎಂಬ ತಾಳಮದ್ದಳೆ. ಭಾಗವತರಾಗಿ ಪದ್ಯಾಣ ಗಣಪತಿ ಭಟ್ ಮತ್ತು ಕುರಿಯ ಗಣಪತಿ ಶಾಸ್ತ್ರಿ, ಚೆಂಡೆ ಮದ್ದಳೆಯಲ್ಲಿ - ಪದ್ಯಾಣ ಶಂಕರನಾರಾಯಣ ಭಟ್, ದಂಬೆ ಈಶ್ವರ ಶಾಸ್ತ್ರಿ, ವದ್ವ ರಾಮಪ್ರಸಾದ್; ಅರ್ಥದಾರಿಗಳಾಗಿ - ಕುಂಬಳೆ ಸುಂದರ ರಾವ್ (ಭೀಷ್ಮ 1), ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ಭೀಷ್ಮ 2), ಉಡುವೆಕೋಡಿ ಸುಬ್ಬಪ್ಪಯ್ಯ (ಕೌರವ), ಸುಣ್ಣಂಬಳ ವಿಶ್ವೇಶ್ವರ ಭಟ್ (ದ್ರೋಣ), ಶಂಭು ಶರ್ಮ (ಕರ್ಣ), ರಾಧಾಕೃಷ್ಣ ಕಲ್ಚಾರ್ (ಕೃಷ್ಣ), ಜಬ್ಬರ್ ಸಮೋ (ಅಭಿಮನ್ಯು), ವಾದಿರಾಜ ಕಲ್ಲೂರಾಯ (ಅರ್ಜುನ) - ಭಾಗವಹಿಸಿದ್ದರು.
          ಪ್ರತಿಷ್ಠಾನ ಮತ್ತು ಸಂಮಾನ ಸಮಿತಿಯ - ಸಿ.ಈಶ್ವರ ಶಾಸ್ತ್ರಿ, ಬಿ.ರವಿಚಂದ್ರ, ಸಿ.ರಾಮಚಂದ್ರ ಶಾಸ್ತ್ರಿ, ಬಿ.ಈಶ್ವರ ನಾಯ್ಕ, ಪ್ರೇಮಲತಾ ಟಿ.ರಾವ್, ಶುಭಾ ಗಣೇಶ್, ಉಮಾ ಡಿ.ಪ್ರಸನ್ನ, ರಮೇಶ ಬಾಬು, ವಾಟೆಡ್ಕ ಕೃಷ್ಣ ಭಟ್, ಕಾಡೂರು ಸೀತಾರಾಮ ಶಾಸ್ತ್ರಿ.. ಮೊದಲಾದವರು ಸಂದರ್ಭೋಚಿತವಾಗಿ ಕಲಾಪಗಳ ವಿವಿಧ ಅಂಗಗಳನ್ನು ನಿರ್ವಹಿಸಿದ್ದರು.
(ಚಿತ್ರ : ಕ್ರಷ್ನಾ ಸ್ಟುಡಿಯೋ, ಪುತ್ತೂರು)

Thursday, April 26, 2012

ಶ್ರೀ ಕಟೀಲು ಮೇಳದವರಿಂದ ’ದೇವೀ ಮಹಾತ್ಮೆ’



ಬಂಟ್ವಾಳ ತಾಲೂಕು ವೀರಕಂಭ ಸನಿಹದ ಸಿಂಗೇರಿತೋಟ ’ದೇವಿಕಾ’ ಮನೆಯಲ್ಲಿ ಶ್ರೀಮತಿ ಸಂಗೀತಾ-ಗಣೇಶ ಮಯ್ಯರ ಪುತ್ರ ಚಿ.ಆದಿತ್ಯಾ ಜಿ.ಯಸ್. ಇವನಿಗೆ ಉಪನಯನ. ಅಪರಾಹ್ನ ಖ್ಯಾತ ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳ ಭಾಗವತಿಕೆಯಲ್ಲಿ ’ಭೀಷ್ಮ ಪರ್ವ’ ಪ್ರಸಂಗದ ತಾಳಮದ್ದಳೆ. ರಾತ್ರಿ ಶ್ರೀ ಕಟೀಲು ಮೇಳದವರಿಂದ ’ದೇವೀ ಮಹಾತ್ಮೆ’ ಪ್ರಸಂಗದ ಬಯಲಾಟ. ಸಿಡಿಮದ್ದು-ಬ್ಯಾಂಡ್ ಇಲ್ಲದೇ ಇದ್ದುದರಿಂದ ನಿಜವಾದ ’ಯಕ್ಷಗಾನ’ವನ್ನು ಸವಿದ ಅನುಭವ. ಭಾಗವತರಾದ ಪುರುಷೋತ್ತಮ ಪೂಂಜರ ’ಒಂದನೇ ಸೆಟ್’ ಆಟವನ್ನು ನಡೆಸಿಕೊಟ್ಟಿದ್ದರು. ಇಂದು (ಎಪ್ರಿಲ್ ೨೫) ಪೂಂಜರ ಭಾಗವತಿಕೆ ಸೂಪರ್!

Tuesday, February 14, 2012

’ಕಲಾವಿದರನ್ನು ಗೌರವಿಸುವುದು ಸಮಾಜದ ಧರ್ಮ’: ಎಡನೀರು ಶ್ರೀಗಳು

"ಯಕ್ಷಗಾನದ ಪೌರಾಣಿಕ ಸ್ತ್ರೀಪಾತ್ರಗಳ ವೈಭವಕ್ಕೆ ಕೊಕ್ಕಡ ಈಶ್ವರ ಭಟ್ಟರದು ಪ್ರತ್ಯೇಕ ಕೊಡುಗೆಯಿದೆ. ಇಂತಹ ಅನುಭವಿ ಮತ್ತು ಕಲೆಗಾಗಿಯೇ ಬದುಕನ್ನು ಸವೆಸಿದ ಕಲಾವಿದರನ್ನು ಗೌರವಿಸುವುದು ಸಮಾಜದ ಧರ್ಮ. ನಮ್ಮ ಮಠವು ಯಕ್ಷಗಾನ ಮಾತ್ರವಲ್ಲ, ಎಲ್ಲಾ ಕಲೆಗಳನ್ನು ಗೌರವಿಸುತ್ತದೆ, ಪ್ರದರ್ಶನ ಏರ್ಪಡಿಸುತ್ತದೆ, ಎಂದು ಶ್ರೀ ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಹೇಳಿದರು.

ಅವರು ಫೆ.13ರಂದು ಎಡನೀರಿನಲ್ಲಿ ಜರುಗಿದ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನದ ವಾರ್ಶಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸ್ತ್ರೀಪಾತ್ರಧಾರಿ ಶ್ರೀ ಕೊಕ್ಕಡ ಈಶ್ವರ ಭಟ್ಟರಿಗೆ ಈ ಸಾಲಿನ 'ಪಾತಾಳ ಪ್ರಶಸ್ತಿ'ಯನ್ನು ಪ್ರದಾನಿಸಿ ಆಶೀರ್ವಚನ ನೀಡಿದರು. ಪ್ರಶಸ್ತಿಯು ಶಾಲು, ಹಾರ, ಫಲಪುಪ್ಪ, ಪ್ರಸಸ್ತಿ ಪತ್ರ, ಸ್ಮರಣಿಕೆ ಮತ್ತು ರೂಪಾಯಿ ಐದು ಸಾವಿರ ರೂಪಾಯಿಯ ಒಳಗೊಂಡಿತ್ತು.

ಸಮಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ಘಟಕದ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಶ್ರೀ ಐ.ವಿ.ಭಟ್ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷರಾದ ಪ್ರೊ: ಎಂ.ಎಲ್.ಸಾಮಗ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಮಾಲತೀ ಶ್ರೀಧರ್, ಹಿರಿಯ ಸ್ತ್ರೀಪಾತ್ರಧಾರಿ ಶ್ರೀ ಪಾತಾಳ ವೆಂಕಟ್ರಮಣ ಭಟ್ ಉಪಸ್ಥಿತರಿದ್ದರು.

ಪಾತಾಳ ಯಕ್ಷ ಪ್ರತಿಷ್ಠಾನದ ಅಧ್ಯಕ್ಷರಾದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅತಿಥಿಗಳಿಗೆ ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ಶ್ರೀ ಶ್ರೀರಾಮ ಪಾತಾಳ ಸ್ಮರಣಿಕೆ ನೀಡಿದರು. ಪತ್ರಕರ್ತ, ಕಲಾವಿದ ಶ್ರೀ ನಾ. ಕಾರಂತ ಪೆರಾಜೆ ಪ್ರಶಸ್ತಿಯ ಗುಣಕಥನ ಫಲಕವನ್ನು ವಾಚಿಸಿದರು. ಶ್ರೀಮಠದ ಶ್ರೀ ರಾಜೇಂದ್ರ ಕಲ್ಲೂರಾಯರು ವಂದಿಸಿದರು. ವೇದಮೂರ್ತಿ ಶ್ರೀ ಪೋಳ್ಯ ಅನಂತೇಶ್ವರ ಭಟ್ಟರಿಂದ ವೇದಪಠಣದೊಂದಿಗೆ ಆರಂಭಗೊಂಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರತಿಷ್ಠಾನದ ಡಾ.ಬಿ.ಎನ್.ಮಹಾಲಿಂಗ ಭಟ್ ನಿರ್ವಹಿಸಿದರು.

Sunday, February 12, 2012

'ಪಾತಾಳ ಪ್ರಶಸ್ತಿ' ಪುರಸ್ಕೃತ ಕೊಕ್ಕಡ ಈಶ್ವರ ಭಟ್

'ರಂಗದಲ್ಲಿ ಕಸುಬು ಮಾಡುವ ಕಲಾವಿದನಿಗೆ ತನ್ನ ಪಾತ್ರ ನಿರ್ವಹಣೆಯಲ್ಲಿ 'ತೃಪ್ತಿ' ಬೇಕು. ಸ್ತ್ರೀಪಾತ್ರಗಳಿಗೆ ರಂಗದಲ್ಲಿ ಅವಕಾಶ ಹೆಚ್ಚಿದ್ದಾಗ ಕಸುಬಿನಲ್ಲಿ ತೃಪ್ತಿ ಸಹಜವಾಗಿ ಬರುತ್ತದೆ. ಬೆಳಗ್ಗಿನವರೆಗೆ ಆಗಾಗ್ಗೆ ಬಂದು ಮರೆಯಾಗುವ ಸ್ತ್ರೀಪಾತ್ರಗಳು ರಂಗದಲ್ಲಿ ಮೆರೆಯುವುದಿಲ್ಲ. ಆತನಿಂದ ಉತ್ತಮ ಅಭಿವ್ಯಕ್ತಿಯನ್ನು ನಿರೀಕ್ಷಿಸುವಂತಿಲ್ಲ. ಕಲಾವಿದನನ್ನು ಪ್ರೇಕ್ಷಕ ಬಹುಬೇಗ ಮರೆಯುತ್ತಾನೆ,' ಎಂದು ಹಿರಿಯ ಸ್ತ್ರೀ ಪಾತ್ರಧಾರಿ ಕೊಕ್ಕಡ ಈಶ್ವರ ಭಟ್ ಕಳೆದ ಕಾಲವನ್ನು ಜ್ಞಾಪಿಸಿಕೊಳ್ಳುತ್ತಾರೆ.

ಎಪ್ಪತ್ತೆರಡು ಹರೆಯದ ಈಶ್ವರ ಭಟ್ಟರು ಐವತ್ತು ವರ್ಷಕ್ಕೂ ಮಿಕ್ಕಿ ರಂಗದಲ್ಲಿ ತರುಣಿಯಾಗಿದ್ದಾರೆ. 'ಮೋಹಿನಿ'ಯಿಂದ 'ಚಂದ್ರಮತಿ' ತನಕ. ಒಂದು ಕಾಲಘಟ್ಟದ ಪ್ರದರ್ಶನಗಳನ್ನು ನೆನಪಿಸಿಕೊಂಡಾಗ ನಿವೃತ್ತಿಯಾಗುವಲ್ಲಿಯ ತನಕವೂ ಇವರ ಪಾತ್ರಾಭಿವ್ಯಕ್ತಿಯಲ್ಲಿ 'ಪಾತ್ರದ ಹಿರಿತನ'ದ ಗಟ್ಟಿತನವಿದ್ದುದನ್ನು ಗಮನಿಸಬಹುದು. ಗಟ್ಟಿ ಸಂಪನ್ಮೂಲವನ್ನು ಹೊಂದಿದ ಗಟ್ಟಿಗರ ಮಧ್ಯದಲ್ಲಿ ಬೆಳೆದ ಪರಿಣಾಮ; ಈಗಲೂ ಕೊಕ್ಕಡದವರನ್ನು ನೆನಪಿಸಿಕೊಡರೆ ಸಾಕು, 'ದಾಕ್ಷಾಯಿಣಿ, ಮಾಯಾ ಶೂರ್ಪನಖಿ' ಪಾತ್ರಗಳು ಮಿಂಚುತ್ತವೆ.

ಓದಿದ್ದು ಆರನೇ ತರಗತಿ. ಕುಡಾಣ ಗೋಪಾಲಕೃಷ್ಣ ಭಟ್ಟರಿಂದ ನಾಟ್ಯಾಭ್ಯಾಸ. ಒಂದಷ್ಟು ಕಾಲ ಭರತನಾಟ್ಯದ ಕಲಿಕೆ. ಮಧ್ಯೆ ಬಡಗುತಿಟ್ಟಿನ ಹೆಜ್ಜೆಗಳ ಅಭ್ಯಾಸ. ಮುಂದೆ ಕೆರೆಮನೆ ಮೇಳದಲ್ಲಿ ಒಂದು ವರುಷದ ತಿರುಗಾಟ. ಬಡಗು ಹಜ್ಜೆಗಳಿಗೆ ದಯಾನಂದ ನಾನೂರು ಮತ್ತು ಮೊಳಹಳ್ಳಿ ಕೃಷ್ಣ ಇವರಿಗೆ ಗುರು.

ಭಟ್ಟರ ತಂದೆ ಮಹಾಲಿಂಗ ಭಟ್. ತಾಯಿ ಪರಮೇಶ್ವರಿ. ಅಳಿಕೆ ಸನಿಹದ ಮುಳಿಯದಲ್ಲಿ ಹುಟ್ಟು. ಕಡೆಂಗೋಡ್ಲಿನಲ್ಲಿ ಬದುಕು. ಆರನೇ ತರಗತಿ ತನಕ ಶಾಲಾಭ್ಯಾಸ. ಪುತ್ತೂರಿನ ಪೆರುವಡಿಯವರ ನೂಜಿ ಮನೆಯಲ್ಲಿ ಮಿಕ್ಕ ಯಕ್ಷಗಾನದ ವಿವಿಧಾಂಗಗಳ ಆರ್ಜನೆ.

ಪೆರುವಡಿ ಕೃಷ್ಣ ಭಟ್ಟರ ಸಾರಥ್ಯದ ಮೂಲ್ಕಿ ಮೇಳದಲ್ಲಿ 'ಬಾಲಕೃಷ್ಣ' ಪಾತ್ರದ ಮೂಲಕ ಬಣ್ಣದ ಮೊದಲ ಹೆಜ್ಜೆ. ಮೂಲ್ಕಿಯೂ ಸೇರಿದಂತೆ ಕೂಡ್ಲು, ಸುರತ್ಕಲ್, ಕದ್ರಿ, ಕುಂಬಳೆ, ಸಾಲಿಗ್ರಾಮ, ಶಿರಸಿ, ಇಡಗುಂಜಿ, ಎಡನೀರು ಮೇಳಗಳಲ್ಲಿ ವ್ಯವಸಾಯ.

ಚಂದ್ರಮತಿ, ಶಾರದೆ, ಚಿತ್ರಾಂಗದೆ, ದ್ರೌಪದಿ, ಸುಭದ್ರೆ, ಪ್ರಭಾವತಿ, ಮಾಯಾ ಶೂರ್ಪನಖಿ, ಮಾಯಾಹಿಡಿಂಬಿ, ಮೋಹಿನಿ.. ಹೀಗೆ ಸಾಲು ಸಾಲು ಪಾತ್ರಗಳು ಭಟ್ಟರ ನೆಚ್ಚಿನವುಗಳು. ಖ್ಯಾತಿ ತಂದವುಗಳು. ಕೂಡ್ಲು ಮೇಳದಲ್ಲಿ ಆಡುತ್ತಿದ್ದ 'ಶ್ರೀದೇವಿ ಲಲಿತೋಪಾಖ್ಯಾನ' ಪ್ರಸಂಗದ 'ಶ್ರೀಲಲಿತೆ' ಪಾತ್ರವು ಈಶ್ವರ ಭಟ್ಟರಿಗೆ ತಾರಾಮೌಲ್ಯ ತಂದಿತ್ತು.

ವೈಯಾರದ ನಾಟ್ಯ, ನಯನಾಜೂಕಿನ ಅಭಿವ್ಯಕ್ತಿ. ಮನಮೋಹಕ ಚಿತ್ರ. ಪಾತ್ರಕ್ಕನುಚಿತವಾದ ಸಂಭಾಷಣೆ ಇವರದು. 'ಮೂಲ್ಕಿ ಮೇಳದಲ್ಲಿ ನನ್ನ ಬಾಹುಕ, ಪಾಪಣ್ಣ ಪಾತ್ರಗಳಿಗೆ ಈಶ್ವರ ಭಟ್ಟರು ದಮಯಂತಿಯಾಗಿ, ಗುಣಸುಂದರಿಯಾಗಿ ಸಾಥಿ ನೀಡಿದ್ದಾರೆ. ಉತ್ತಮ ಹೆಸರು ಪಡೆದಿದ್ದಾರೆ. ಮೇಳಕ್ಕೂ ಹೆಸರು ತಂದಿದ್ದಾರೆ' ಎಂದು ಈಶ್ವರ ಭಟ್ಟರ ತಿರುಗಾಟದ ಕ್ಷಣವನ್ನು ನೆನಪಿಸಿಕೊಂಡರು, ಹಾಸ್ಯಗಾರ್ ಪೆರುವಡಿ ನಾರಾಯಣ ಭಟ್.

'ಕಲಾವಿದನಿಗೆ ದುಡ್ಡು ಮುಖ್ಯ ಹೌದು. ಜತೆಗೆ ಅಭಿಮಾನವೂ ಕೂಡಾ. ರಂಗದಲ್ಲಿ ಸರಿಯಾದ ಅಭಿವ್ಯಕ್ತಿಗೆ ಅವಕಾಶವಿಲ್ಲದೇ ಹೋದಾಗ ಅಭಿಮಾನಿಗಳಿಗೆ ಮುಖ ತೋರಿಸಲು ನಾಚಿಕೆಯಾಗುತ್ತದೆ,' ಮಾತಿನ ಮಧ್ಯೆಯಿರುವ ಅವರ ನೋವು ಅರ್ಥವಾಗಲು ಕಷ್ಟಪಡಬೇಕಿಲ್ಲ.

ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಮಾನ, ಕೆರೆಮನೆ ಶಂಭು ಹೆಗಡೆ ಜಯಂತಿ ಸಂಮಾನ, ಮಂಗಳೂರು ಹವ್ಯಕ ಸಭಾ, ಶ್ರೀ ಎಡನೀರು ಮಠ, ಕಲಾರಂಗ ಉಡುಪಿ.. ಹೀಗೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಈಶ್ವರ ಭಟ್ಟರ ಕಲಾ ಸೇವೆಗೆ ಸಂದ ಮಾನಗಳು.

ಪ್ರಸ್ತುತ ಕೊಕ್ಕಡ-ಪಟ್ರಮೆ ಸಮೀಪದ ಹೆನ್ನಳದಲ್ಲಿ ವಾಸ. ಪತ್ನಿ ಶಕುಂತಳೆ. ಮೂವರು ಮಕ್ಕಳು. ಕಡೆಂಗೋಡ್ಲು ನನಗೆ ಬಾಲ್ಯವನ್ನು ಕೊಟ್ಟದ್ದರಿಂದ ಈ ಊರು ನನ್ನ ಹೆಸರಿನೊಂದಿಗೆ ಹೊಸೆಯಬೇಕಿತ್ತು. ಈಗ ಕೊಕ್ಕಡ ಸಮೀಪವಿರುವುದರಿಂದಲೋ ಏನೋ ನಾನೀಗ ಕೊಕ್ಕಡ ಈಶ್ವರ ಭಟ್.

ಈಶ್ವರ ಭಟ್ಟರ ಕಲಾ ಸೇವೆಗೆ ಈಗ 'ಪಾತಾಳ ಪ್ರಶಸ್ತಿ'ಯ ಗರಿ. ಎಡನೀರು ಮಠಾಧೀಶ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀ ಪಾದಂಗಳವರು ಗೌರವಾಧ್ಯಕ್ಷರಾಗಿರುವ 'ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ'ದಿಂದ ಫೆಬ್ರವರಿ 13ರಂದು ರಾತ್ರಿ 8 ಗಂಟೆಗೆ ಶ್ರೀ ಎಡನೀರು ಮಠದ ಶ್ರೀಕೃಷ್ಣ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ.

Monday, January 9, 2012

ಮೂರು ಪ್ರಸಂಗವೂ, ಏಳು ಮಂದಿ ಕಲಾವಿದರೂ..!

ಕಾಲು ಶತಮಾನದ ಹಿಂದೆ. 'ಚೌಡೇಶ್ವರಿ ಮೇಳ'ವು ಸುಳ್ಯ-ಕೊಡಗು ವ್ಯಾಪ್ತಿಯಲ್ಲಿ ಖ್ಯಾತಿ. ಬಹುತೇಕ ಹವ್ಯಾಸಿ ಕಲಾವಿದರು. ಅಪ್ಪಟ ಭಾಗವತ ಕೀರ್ತಿಶೇಷ ದಾಸರಬೈಲು ಚನಿಯ ನಾಯ್ಕರ ನಿರ್ದೇಶನ. ಆ ತಂಡದಲ್ಲಿ ಈಗ ನಮ್ಮೊಂದಿಗಿಲ್ಲದ ಹಾಸ್ಯಗಾರ ಪ್ಯಾರ್ ನಾವೂರು ಇದ್ದರು.

ಆ ಭಾಗಕ್ಕೆ ಆಟಕ್ಕೆ ಬಂದಾಗಲೆಲ್ಲಾ ಭಾಗವತ ಚನಿಯ ನಾಯ್ಕರು ಬಿಡುವಿದ್ದಾಗ ನಮ್ಮಲ್ಲಿಗೆ ಬರುತ್ತಿದ್ದರು. ಒಂದು ದಿವಸ ಮಡಿಕೇರಿ ಹತ್ತಿರದ ಹಳ್ಳಿಯೊಂದರ ಆಟ ಮುಗಿಸಿ ಮನೆಗೆ ಬರುವಾಗಲೇ ಅವರ ಮೂಡ್ ಔಟ್ ಆಗಿತ್ತು! 'ಎಂಚಿನ ಸಾವುದ ಆಟ. ಯಕ್ಷಗಾನ ಪಂಡ ಗೊತ್ತಿಜ್ಜಿ. ಸಾಕೋ ಸಾಕಾಂಡ್' (ನಾಯ್ಕರು ಹೆಚ್ಚಾಗಿ ತುಳುವಿನಲ್ಲಿ ಸಂಭಾಷಿಸುತ್ತಿದ್ದರು.)

ಅಜಾತ ಶತ್ರುವಾಗಿದ್ದ ನಾಯ್ಕರು ಅಂದು ಯಾಕೆ ಅಸಹನೆಗೊಂಡಿದ್ದರು. 'ಭಾಗವತರೆ, ದೂರದ ಆಟ. ಸಂಭಾವನೆಗೆ ತೊಂದರೆಯಾಯಿತಾ' ಅಂತ ಮಾತಿಗಿಳಿದೆ. 'ಕವರ್ ಏರೆಗ್ ಬೋಡು. ಯಾನೇ ಕೊರ್ತುವೆ! ಅಕ್ಲೆಗ್ ಯಕ್ಷಗಾನ, ನಾಟಕ, ಕೋರಿಕಟ್ಟ ಪೂರಾ ಒಂಜೇ, ಯಕ್ಷಗಾನದ ಮರ್ಯಾದಿ ಪೋಂಡ್...', ಅವರ ಅಸಹನೆ ಕಡಿಮೆಯಾದಂತಿಲ್ಲ. ಸ್ನಾನ, ಕಾಫಿ ಮುಗಿಸಿ, ಅವರಿಗೆ ನಿದ್ರಿಸಲು ವ್ಯವಸ್ಥೆ ಮಾಡುತ್ತಿದ್ದಂತೆ, 'ಅವು ಎಂಚಿನ ಪಂನ್ಡಾ...' ಅಂತ ನಿನ್ನೆಯ ಆಟದ ಕತೆಗೆ ಮುಂದಾದರು.

ಮಡಿಕೇರಿ ಸನಿಹದ ಹಳ್ಳಿಯೊಂದರಲ್ಲಿ ಚೌಡೇಶ್ವರಿ ಮೇಳದ ಆಟ. ಏಳು ಮಂದಿ ವೇಷಕ್ಕಾದರೆ, ಹಿಮ್ಮೇಳಕ್ಕೆ ಮೂರು ಮಂದಿ. ಹೆಚ್ಚು ವೇಷ ಇರುವ ದೇವಿ ಮಹಾತ್ಮೆಯಂತಹ ಪ್ರಸಂಗ ಹೊರತು ಪಡಿಸಿ ಉಳಿದ ಪ್ರಸಂಗಗಳಿಗೆ ಸೂಕ್ತವಾಗುವಂತಹ ವೇಷಭೂಷಣ. ಅಂದು ವೀಳ್ಯ ಕೊಟ್ಟವರು ನಿಗದಿಪಡಿಸಿದ ಪ್ರಸಂಗ - 'ಶ್ವೇತಕುಮಾರ ಚರಿತ್ರೆ'.

ಸಮಯಕ್ಕೆ ಸರಿಯಾಗಿ ಕಲಾವಿದರ ದಂಡು ಆಟದ ಜಾಗ ತಲುಪಿತು. ವೀಳ್ಯಕೊಟ್ಟವರಿಂದ ಸ್ವಾಗತ. ಉಪಾಹಾರ-ಭೋಜನ ವ್ಯವಸ್ಥೆ. ನಾಲ್ಕು ಕಂಬದ ರಂಗವೇದಿಕೆ. ಗ್ಯಾಸ್ಲೈಟ್ ಬೆಳಕು. ಸಂಜೆಯಾದಂತೆ ಮೈಕಾಸುರನ ಅಟ್ಟಹಾಸ. ಚೌಕಿ ತೆರೆದುಕೊಂಡಿತು. ಪಾತ್ರ ಹಂಚೋಣವಾಯಿತು. ಎಂಟು ಗಂಟೆಯಿಂದ ಹನ್ನೆರಡು ಗಂಟೆ ತನಕ ಪ್ರದರ್ಶನ.

ಒಮ್ಮೆ ಚೌಕಿ ತೆರೆದುಕೊಂಡರೆ ಆಯಿತು, ಮತ್ತೆ ಭಾಗವತ ಚನಿಯ ನಾಯ್ಕರು ದೇವರ ಪೆಟ್ಟಿಗೆಯ ಸನಿಹವೇ ಕುಳಿತುಕೊಳ್ಳುತ್ತಿರುವುದು ಜಾಯಮಾನ. ಭಾಗವತನ ಲಕ್ಷಣವೂ ಹೌದೆನ್ನಿ. ಆಟ ಶುರುವಾಗಲು ಹಸಿರು ನಿಶಾನೆ ಸಿಕ್ಕಿತು.
ಚೌಕಿ ಪೂಜೆ, ಪೀಠಿಕೆ. ಪ್ರಸಂಗ ಶುರುವಾಯಿತು. ಅಷ್ಟರಲ್ಲಿ ಚೌಕಿಗೆ 'ನಿಶೆ ಏರಿಸಿಕೊಂಡ' ಹತ್ತಾರು ಮಂದಿಯ ದಂಡು ನುಗ್ಗಿತು. ಆ ತಂಡದಲ್ಲಿ ವೀಳ್ಯ ನೀಡಿದ ವ್ಯಕ್ತಿಯೂ ಇದ್ದ! 'ನಿಮ್ಮದು ಎಂತಹ ಪ್ರಸಂಗ. ನಮಗೆ ಮಹಿಷಾಸುರ ಬರುವ ಪ್ರಸಂಗವೇ ಆಗಬೇಕು' ಎನ್ನಬೇಕೆ!

ಚೌಕಿಯಲ್ಲಿ ಗೊಂದಲ. ಉತ್ತರ ಕಾಣದ ಕ್ಷಣಗಳು. ಕಾರಣ ನಿಗದಿಯಾಗಿದ್ದ ಪ್ರಸಂಗಕ್ಕೆ ಎಲ್ಲಾ ಕಲಾವಿದರೂ ತಯಾರಾಗಿದ್ದರು. ಹೊಸ ಪ್ರಸಂಗಕ್ಕೆ ಅಣಿಯಾಗಲು ಅವಕಾಶವಿಲ್ಲ. ಕಲಾವಿದರಿಗೆ ಅಷ್ಟು ಸುಲಭವೂ ಅಲ್ಲ. ಅಲ್ಲದೆ, ಪ್ರಸಂಗ ಪುಸ್ತಕವೂ ಇಲ್ಲ. ಏನು ಮಾಡೋಣ?

ಸರಿ, ಅವರನ್ನು ಹಾಸ್ಯಗಾರರಾದ ಪ್ಯಾರ್ ನಾವೂರು ಸಮಾಧಾನಪಡಿಸಿ ಸಾಗಹಾಕಿದರು. ಆಟ ಮುಂದುವರಿದು ಒಂದು ಗಂಟೆಯಾಗಿರಬಹುದು, ಇನ್ನೊಂದು ತಂಡ ಚೌಕಿಗೆ ನುಗ್ಗಿತು. ಅವರಿಗೆ 'ತ್ರಿಜನ್ಮ ಮೋಕ್ಷ' ಪ್ರಸಂಗವೇ ಆಗಬೇಕಂತೆ. ಎರಡೂ ತಂಡಗಳ ಬೇಡಿಕೆಯ ಮುಂದೆ ಮೇಳದ ಕಲಾವಿದರು ಕಂಗಾಲು.

ರಂಗ ಪ್ರವೇಶ ಮಾಡಿದ ಪಾತ್ರಗಳು ಚೌಕಿಗೆ ಬಂದುವು. ಮುಂದಿನ ವೇಷ ಪ್ರವೇಶ ಮಾಡೋಣ ಅಂದರೆ ಚೌಕಿ ಗೊಂದಲದ ಗೂಡಾಗಿತ್ತು. ಪ್ರೇಕ್ಷಕರಲ್ಲೂ ಗುಲ್ಲು, ಶಿಳ್ಳೆ ಜೋರಾಯಿತು. 'ಐವತ್ತು ರೂಪಾಯಿ ಕೊಟ್ಟಿದ್ದೇನೆ. ಆಟ ಯಾಕೆ ನಿಲ್ಲಿಸಿದ್ರಿ' ಎನ್ನುತ್ತಾ ಒಬ್ಬರು ಚೌಕಿಗೆ ನುಗ್ಗಲು ಪ್ರಯತ್ನಿಸುತ್ತಿದ್ದಂತೆ, 'ನಾನು ಇನ್ನೂರು ರೂಪಾಯಿ ಕೊಟ್ಟಿದ್ದೇನೆ' ಎಂದರು ಇನ್ನೊಬ್ಬರು..!

ಪರಿಸ್ಥಿತಿ ಕೈಮೀರುವ ಲಕ್ಷಣ ಕಂಡು ಬಂತು. 'ನಿಮಗೆ ಮಹಿಷಾಸುರ, ಹಿರಣ್ಯಾಕ್ಷ, ಹಿರಣ್ಯಕಶಿಪು ಸ್ಟೇಜ್ಗೆ ಬರಬೇಕಲ್ವಾ. ಬರುತ್ತದೆ. ನೀವೆಲ್ಲಾ ಹೋಗಿ. ಆಟ ಶುರುಮಾಡೋಣ' ಎನ್ನುವ ಧೈರ್ಯ ನೀಡಿದ ಚನಿಯ ನಾಯ್ಕರು; ವೀಳ್ಯ ಹಾಕಿ, ಮುಂಡಾಸು, ಶಾಲು ಏರಿಸಿ, ಜಾಗಟೆಯೊಂದಿಗೆ ರಂಗಕ್ಕೆ ಬರಲು ಸಿದ್ಧರಾದರು.

ಮರುದಿವಸದ ಆಟ ಮಹಿಷ ಮರ್ದಿನಿ. ಅದಕ್ಕಾಗಿ ಮಹಿಷಾಸುರ ಪಾತ್ರದ ಕೊಂಬು ಕ್ಯಾಂಪ್ನಲ್ಲಿತ್ತು. ಶ್ವೇತಕುಮಾರ ಪ್ರಸಂಗದ 'ಕರಾಳನೇತ್ರೆ' ರಾಕ್ಷಸಿಯ ಪಾತ್ರಕ್ಕೆ ಕೊಂಬು ಬಿಗಿಯಲಾಯಿತು. 'ತ್ರಿಲೋಕ ಸುಂದರಿ' ಪಾತ್ರಕ್ಕೆ ಸಿದ್ಧರಾದವರಿಗೆ ಶ್ರೀದೇವಿ ಪಾತ್ರ ಆವಾಹನೆಯಾಯಿತು. ಹಿರಣ್ಯಾಕ್ಷ ಅಲ್ವಾ, ದುರ್ಜಯನ ಪಾತ್ರ ಮಾಡುವಾತ 'ಹಿರಣ್ಯಾಕ್ಷ'ನಾದ. ಮತ್ಯಾರೋ ಹಿರಣ್ಯಕಶಿಪು, ನರಸಿಂಹನಾದರು. ಪಾತ್ರಗಳ ಪಕ್ಷಾಂತರ!

ಪಡಿಮಂಚವನ್ನೇರಿದ ಭಾಗವತರು 'ಶ್ವೇತಕುಮಾರ' ಪ್ರಸಂಗವನ್ನು ಸ್ವಲ್ಪ ಮುಂದುವರಿಸುತ್ತಾ, 'ಮಹಿಷಾಸುರನ' ಪ್ರವೇಶಕ್ಕೆ ಅಣಿಯಾದರು. ಸೂಟೆ, ಮುಳಿಹುಲ್ಲು.. ಅಬ್ಬರ ಜೋರಾಗಿಯೇ ಇತ್ತು. 'ಸ್ವಲ್ಪ ನಿಧಾನಕ್ಕೆ ರಂಗಕ್ಕೆ ಬಂದರೆ ಸಾಕು. ಅವರೆಲ್ಲಾ ಕುಣಿದು ಕುಪ್ಪಳಿಸಲಿ' ಎಂದು ವೇಷಧಾರಿಗೆ ಸೂಚನೆ ಕೊಟ್ಟರು. ಅಂದಿನ ಮಹಿಷಾಸುರನಿಗೆ ಏನಿಲ್ಲವೆಂದರೂ ರಂಗವೇದಿಕೆ ತಲುಪಲು ಮುಕ್ಕಾಲು ಗಂಟೆ.

ರಂಗದಲ್ಲಿ ಮಹಿಷಾಸುರನ ಅಬ್ಬರ. ಕುಣಿತ. ಪ್ರೇಕ್ಷಕರಿಂದ ಶಿಳ್ಳೆ, ಚಪ್ಪಾಳೆ. ಇವರು ಸಂತೋಷದ ಪರಾಕಾಷ್ಠೆಗೇರುತ್ತಲೇ ಭಾಗವತರು, 'ದೇವಿ ಮತ್ತು ಮಹಿಷಾಸುರ' ಯುದ್ಧ ಪದ್ಯಗಳನ್ನು ಎತ್ತುಗಡೆ ಮಾಡಿ ಮಹಿಷಾಸುರನನ್ನು ಕೊಂದೇ ಬಿಟ್ಟರು! ದೇವಿ ಪಾತ್ರಧಾರಿಗೆ ಹೂವಿನ ಮಾಲೆ, ಮಹಿಷಾಸುರನಿಗೆ ವಿಶೇಷ ಆತಿಥ್ಯ! ಚಳಿಯ ಊರಲ್ವಾ..! ಏನಂತೀರಿ?

ಸರಿ, ಹಿರಣ್ಯಾಕ್ಷನ ಪ್ರವೇಶ. ದೇವಿ ಪಾತ್ರ ಮಾಡಿದರು ಅಷ್ಟಭುಜವನ್ನು ಕಳಚಿಕೊಂಡು, ಹಿರಣ್ಯಾಕ್ಷನ ಮುಂದೆ ಪ್ರ್ರತ್ಯಕ್ಷ. ಬಳಿಕ ಹಿರಣ್ಯಕಶಿಪು. ಅಂತೂ ಮಧ್ಯರಾತ್ರಿಯಾಗುವಾಗ ಆಟಕ್ಕೆ ಮಂಗಳ. ಸ್ವಲ್ಪ ಹೆಚ್ಚೆ ವೀಳ್ಯವೂ ಸಿಕ್ಕಿತು.

'ನಾವು ಹೇಳಿದ ಪ್ರಸಂಗವೇ ಆಯಿತಲ್ಲಾ' ಎಂಬ ಸಂತೋಷ ಒಂದು ವರ್ಗಕ್ಕಾದರೆ, 'ನಮ್ಮದೂ ಪ್ರದರ್ಶನವಾಯಿತಲ್ಲಾ' ಎನ್ನುವುದು ಇನ್ನೊಂದು ತಂಡದ ಖುಷಿ. ಆದರೆ ಕಲಾವಿದರಿಗೆ ಬೇಸರವಾಗಿತ್ತು. 'ಯಕ್ಷಗಾನದ ಪರಂಪರೆಗೆ ನಾವು ಅನ್ಯಾಯ ಮಾಡಿದೆವು' ಎಂಬ ಕೊರಗು.

ಆಟದ ಕತೆಯನ್ನು ಹೇಳಿದ ಚನಿಯ ನಾಯ್ಕರಲ್ಲೂ ಮನಶ್ಶಾಂತಿಯಿರಲಿಲ್ಲ. 'ಹೇಗೂ ಆಯ್ತಲ್ಲಾ, ನಿದ್ದೆ ಮಾಡಿ. ಸಂಜೆಯ ಆಟಕ್ಕೆ ಹೋಗಬೇಡ್ವಾ' ಎಂದರು ನನ್ನಮ್ಮ.

'ನನ್ನ ಯಕ್ಷಗಾನದ ಬದುಕಿನಲ್ಲಿ ಇಂತಹ ಅವಸ್ಥೆ ಅದುದೇ ಇಲ್ಲ. ಮುಂದೆಯೂ ಹೀಗಾಗದಿರಲಿ' ಎನ್ನುತ್ತಾ ನಿದ್ದೆಗೆ ಜಾರಲು ಪ್ರಯತ್ನಿಸಿದರು.

Tuesday, January 3, 2012

ಒಂದು ಆಟದ ಸುತ್ತ.. ..

'ಯಕ್ಷಗಾನ ಜಾನಪದ ಕಲೆಯಲ್ಲ. ಅದೊಂದು ಆರಾಧನಾ ಕಲೆ' ಎಂದು ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರು ಸೋದಾಹರಣವಾಗಿ ಹೇಳುತ್ತಿದ್ದರು. ಅವರ ಹೇಳಿಕೆಗಳನ್ನು ದಿನಗಟ್ಟಲೆ ಚರ್ಚೆ ಮಾಡಬಹುದಾದರೂ, 'ಅರಾಧನೆ ಕಲೆ' ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಅದಕ್ಕೆ ಪೂರಕವಾಗಿ ಇಂದಿನ ವರೆಗೂ ಯಕ್ಷಗಾನವನ್ನು ಆರಾಧಿಸುವಂತಹ ಸಾಕಷ್ಟು ಉಪಾಧಿಗಳು ಸಿಗುತ್ತವೆ.

ಶೇಣಿಯವರ ಮಾತನ್ನು ನೆನಪಿಸಿಕೊಳ್ಳುತ್ತಿದ್ದಂತೆ ಮೂರು ದಶಕದ ಹಿಂದಿನ ನನ್ನೂರಿನ ಯಕ್ಷಗಾನ ವಾತಾವರಣ ಮಿಂಚಿ ಮರೆಯಾಯಿತು. ನಾನಿನ್ನೂ ಬಣ್ಣದ ಲೋಕದ ಸಮೀಪಕ್ಕೆ ಬಂದಿರಲಿಲ್ಲ. ಈಗ ದಿವಂಗತರಾಗಿರುವ ಪ್ರಕಾಶ್ಚಂದ್ರ ರಾವ್ ಬಾಯಾರು ಗರಡಿಯಲ್ಲಿ ಪಳಗಿದ ತಂಡ ಸಿದ್ಧವಾಗಿತ್ತು. 'ನಮ್ಮೂರಲ್ಲಿ ಯಕ್ಷಗಾನ ತರಬೇತಿ ನಡೆಯುತ್ತಿದೆ. ನಮ್ಮ ಯುವಕರು ವೇಷ ಹಾಕ್ತಾರೆ' ಎಂಬ ಸಂಭ್ರಮ ಕಲಾವಿದರಿಗೆ ಮಾತ್ರವಲ್ಲ, ಇಡೀ ಊರಿಗೆ ಖುಷಿಕೊಟ್ಟಿತ್ತು.

ಹೋಟೆಲ್ಗಳಲ್ಲಿ, ಗೂಡಂಗಡಿಗಳಲ್ಲಿ, ಶಾಲೆಗಳಲ್ಲಿ, ಕಟ್ಟಪುಣಿಗಳಲ್ಲಿ ಮುಖತಃ ಸಿಕ್ಕಾಗಲೆಲ್ಲಾ ಇದರದ್ದೇ ಸುದ್ದಿ. ನಾಟ್ಯ ಕಲಿವ/ಕಲಿತವರು ಸಿಕ್ಕರಂತೂ ಮುಗಿಯಿತು, 'ಹೇಗಾಯಿತು, ಎಲ್ಲಿಯ ವರೆಗೆ ಮುಟ್ಟಿತು, ಆಟ ಯಾವಾಗ' ಎಂಬ ಪ್ರಶ್ನೆಗಳು. ನಾಟ್ಯ ಕಲಿಸುವ ಗುರುಗಳು ಮುಖಾಮುಖಿಯಾದಾಗ ಮನೆಗೆ ಬರುವಂತೆ ಒತ್ತಾಯಿಸುತ್ತಿದ್ದರು. ಆತಿಥ್ಯ ನೀಡುತ್ತಿದ್ದರು. 'ಇವರೆಲ್ಲಾ ತುಂಬ ಮುಜುಗರ ಕೊಟ್ಟಿದ್ದಾರೆ' ಎಂದು ನಂತರದ ದಿನಗಳಲ್ಲಿ ಪ್ರಕಾಶ್ಚಂದ್ರರು ಹೇಳಿದ್ದುಂಟು.

'ದೇವಿ ಮಹಾತ್ಮೆ' ಪ್ರಸಂಗ ಎಂದು ನಿಶ್ಚಯವಾಯತು. ಪ್ರಸಂಗದ ಹೆಸರು ಕೇಳಿದಾಗಲೇ ಕಲಾವಿದರು ಕಂಗಾಲಾಗಿದ್ದರು! ಕುತೂಹಲ-ಕಾತರ. ಸರಕಾರದ ಮಂತ್ರಿಮಂಡಲ ವಿಸ್ತರಣೆ ಅಂತ ಘೋಷಿಸಿದಾಗ ಉಂಟಾಗುತ್ತದಲ್ಲಾ ಅಂತಹ ಟೆನ್ಶನ್! 'ಮಹಿಷಾಸುರ ಯಾರು ಮಾರಾಯ್ರೆ, ದೇವಿ ಯಾರು, ಚಂಡ-ಮುಂಡ ಪಾತ್ರ ಯಾರಿಗೆ, ರಕ್ತಬೀಜ ಯಾರು ಮಾಡ್ತಾರೆ?' ಮೊದಲಾದ ಚೋದ್ಯಗಳಿಗೆ ತಂತಮ್ಮಲ್ಲೇ ಉತ್ತರವಿರುತ್ತಿತ್ತು.

ಸರಿ, ಪಾತ್ರ ಹಂಚುವಿಕೆಯೂ ನಡೆಯಿತು. ಸಂಭಾಷಣೆ ಹಸ್ತಪ್ರತಿಗಳು ಕೈ ಸೇರಿದ್ದುವು. ಕಂಠಪಾಠ ನಡೆಯುತ್ತಿತ್ತು. ಪ್ರಾಕ್ಟೀಸ್ ಆಗುತ್ತಿತ್ತು. ಕೊನೆಗೆ ಸ್ಟೇಜ್ ಪ್ರಾಕ್ಟೀಸ್. ಕರ ಪತ್ರ ಅಚ್ಚಾಯಿತು. ಊರಿಗೆ ಊರೇ 'ದೇವಿ ಮಹಾತ್ಮೆ' ಆಟಕ್ಕೆ ತೆರೆದುಕೊಳ್ಳುತ್ತಾ ಬಂತು. ಪ್ರದರ್ಶನದ ದಿವಸ. 'ದೇವಿ ಮಹಾತ್ಮೆ ಪ್ರಸಂಗವಲ್ವಾ. ಎಲ್ಲರೂ ಶುದ್ಧದಲ್ಲಿ ಇರಬೇಕು' ಎಂದು ಹಿರಿಯರೊಬ್ಬರ ಕಟ್ಟಾಜ್ಞೆ. ಹಿರಿಯರ ಮಾತು ಅಂದರೆ ಮುಗಿಯಿತು. ಕಟ್ಟುನಿಟ್ಟಾಗಿ ಪಾಲಿಸಲ್ಪಡುತ್ತಿತ್ತು.

'ಶುದ್ಧವಾಗಿರುವುದು ಹೇಗೆ? ಮುಖ್ಯವಾಗಿ ಮಹಿಷಾಸುರ, ದೇವಿ, ಚಂಡ-ಮುಂಡ, ರಕ್ತಬೀಜ ಪಾತ್ರ ಮಾಡುವ ಕಲಾವಿದರು ದೇವಸ್ಥಾನದಲ್ಲಿ ಪವಿತ್ರವಾದ 'ಕಲಶ ಸ್ನಾನ' ಮಾಡಿದರು. ದೇವರಿಗೆ ವಿಶೇಷ ಪೂಜೆ. ಅರ್ಚಕರಿಂದ ಪ್ರಾರ್ಥನೆ. ಪ್ರಸಾದ ವಿತರಣೆ. ಆ ಹೊತ್ತಲ್ಲಿ ಕಲಾವಿದನ ಮನೆಯವರೆಲ್ಲಾ ಹಾಜರ್. ಅವರಿಂದಲೂ ಪ್ರತ್ಯೇಕ ಹರಕೆ.

'ಮಹಿಷಾಸುರ ಮತ್ತು ದೇವಿ ಪಾತ್ರವನ್ನು ಮಾಡುವ ಕಲಾವಿದರು ಆಟ ಮುಗಿಯುವಲ್ಲಿಯ ತನಕ ಜತೆಗೆ ಓಡಾಡಬಾರದು' ಹಿರಿಯರಿಂದ ಇನ್ನೊಂದು ಬಾಂಬ್! ಸ್ವಲ್ಪ ಮಟ್ಟಿಗೆ ಈ ಆದೇಶ ಪಾಲನೆಯಾದರೂ, ಚೌಕಿಯಲ್ಲಿ ಒಂದಾಗಬೇಡ್ವೇ! ರಂಗಸ್ಥಳವನ್ನು ಕಲಾವಿದರೆಲ್ಲಾ ಸೇರಿ ರಚಿಸಿದರು. ಮಹಿಷಾಸುರನ ಪ್ರವೇಶ ಎಲ್ಲಿಂದ, ಹೇಗೆ, ಎಷ್ಟು ಹೊತ್ತಿಗೆ ಎಂಬೆಲ್ಲಾ 'ತಾಂತ್ರಿಕ ಅಂಶ'ವನ್ನು ಭಾಗವತರಿಂದ ಪಡೆದದ್ದಾಯ್ತು. ಪ್ರವೇಶ ಮಾಡುವ ದಾರಿಯನ್ನು ವಿಶೇಷ ಆಸ್ಥೆಯಿಂದ ಕ್ಲೀನ್ ಮಾಡಿದ್ದೂ ಆಯಿತು.

ಸೂರ್ಯಾಸ್ತವಾಗುತ್ತಿದ್ದಂತೆ ಯಕ್ಷಗಾನ ಲೋಕ ತೆರೆದುಕೊಳ್ಳಲು ಆರಂಭ. ಕೆಲವರು ಮೈಕ್ ಬಿಗಿಯುತ್ತಿದ್ದರು. ಹತ್ತಾರು ಗ್ಯಾಸ್ಲೈಟ್ಗಳು ಕಾಯಕಲ್ಪ ಹೊಂದುತ್ತಿದ್ದುವು. ಚೌಕಿ ಸಿದ್ಧತೆಯಾಗುತ್ತಿತ್ತು. 'ದೇವಿ' ಕುಳಿತುಕೊಳ್ಳಲು ಉಯ್ಯಾಲೆಯ ಹಗ್ಗ ಎಷ್ಟು ಗಟ್ಟಿಯಿರಬೇಕು ಎಂಬುದಕ್ಕೆ ಕಲಾವಿದನನ್ನೇ ಕೂರಿಸಿ ಧಾರಣ ಶಕ್ತಿಯನ್ನು ಪರೀಕ್ಷಿಸಿಯಾಗಿತ್ತು! 'ಎಂತ ಮಾಡಿ ಬಿಟ್ರಿ.. ಈಗಲೇ ಅವನನ್ನು ಕುಳ್ಳಿರಿಸುವುದಾ.. ಸೊಯ ಇಲ್ವಾ.. ಮತ್ತೇ ಏನಾದರೂ ಆಗ್ಬೇಕು.. ನೋಡಿ' ಹಿರಿಯರಿಂದ ಬೈಗುಳ ಸುರಿಮಳೆ. ಇಷ್ಟು ಹೊತ್ತಿಗೆ ಕಲಾವಿದರ ಮೈಯಲ್ಲಿ ಪಾತ್ರಗಳು ಆವೇಶವಾಗಲು ಶುರು ಮಾಡಿದ್ದುವು!

'ಗಜಮುಖನೆ ಗಣಪತಿಯೆ ನಿನಗೆ ವಂದನೆ' ಮೈಕ್ನಲ್ಲಿ ಹಾಡು ಬರುತ್ತಿದ್ದಂತೆ ಸುತ್ತುಮುತ್ತಲಿನ ಮನೆಗಳಲ್ಲಿ ಹೈಅಲರ್ಟ್! 'ಮೈಕ್ ಕೇಳ್ತಾ ಇದೆ. ಇನ್ನೂ ಹೊರಟು ಆಗಿಲ್ವಾ.. ಬೇಗ ತಯಾರಾಗಿ' ಮನೆ ಮನೆಯಲ್ಲಿ ಅವಸರ-ಸಂಭ್ರಮ. ಇತ್ತ ಪ್ರದರ್ಶನ ಆಗುವಲ್ಲಿ 'ಸೋಜಿ ಅಂಗಡಿ' (ಈಗ ಮಾಯವಾಗಿದೆ), ಬೀಡಾ-ಬೀಡಿ ಅಂಗಡಿ, ಚಹ ಹೋಟೆಲ್..ಗಳಿಗೆ ಜೀವ ಬರಲಾರಂಭಿಸಿತು. ಐದು ಗಂಟೆಗೆ ಐಸ್ಕ್ಯಾಂಡಿಯವನು ರೆಡಿ. ಅವನ ಸುತ್ತ ಮಕ್ಕಳ ಗಡಣ. ಮಕ್ಕಳಲ್ಲಿದ್ದ ಪುಡಿಕಾಸುಗಳು ನೀರಾಗಿ ಹೊಟ್ಟೆಗಳಿದುವು.

ಗಂಟೆ ಒಂಭತ್ತೂವರೆಯಾಯಿತು. 'ದೇವರ ಮುಂದೆ ಕುಣಿಯಲು ವೇಷ ರೆಡಿಯಾಯ್ತಾ, ಏನು ಮಾಡ್ತೀರಿ' ಎನ್ನುತ್ತಾ ಹಿರಿಯರು ಚೌಕಿಗೆ ನುಗ್ಗಿ, ಹಿಮ್ಮೆಳದವರನ್ನು-ವೇಷಗಳನ್ನು ಹೊರಡಿಸಿದರು. ದೇವರ ಮುಂದೆ ವೇಷಗಳು ಕುಣಿಯುತ್ತಿದ್ದಂತೆ, 'ದೇವರೇ ನಮ್ಮ ಮುಂದೆ ಕುಣಿಯುತ್ತಿದ್ದಾರೆ' ಎಂಬ ಭಾವ ಎಲ್ಲರಲ್ಲಿರುತ್ತಿತ್ತು. ತೀರ್ಥಪ್ರಸಾದದ ಸೇವನೆಯ ಬಳಿಕ, 'ಪುನಃ ಪ್ರಾರ್ಥನೆ ಮಾಡಿಕೊಂಡು' ಚೌಕಿಗೆ ಮರುಪ್ರಯಾಣ.

ಕಿಕ್ಕಿರಿದ ಜನಸಂದಣಿ. ವೇಷಗಳೆಲ್ಲಾ ಚೌಕಿಯಲ್ಲಿ ತಯಾರಾಗುತ್ತಿದ್ದುವು. ಸಂಬಂಧಿಕರು ಚೌಕಿಯಲ್ಲಿ ಇಣುಕಿ ಇಣುಕಿ ನೋಡುತ್ತಿದ್ದರು. 'ಓ.. ಇಂತಹವನ ವೇಷ ಆಯಿತು, ಇವನದು ಆಗುತ್ತಾ ಉಂಟಷ್ಟೇ.. ಅವನಿಗೆ ಚಹ ಬೇಕೋ ಏನೋ.. ನಿಂಬೆ ಶರಬತ್ ಬೇಕಾಗಬಹುದಾ..' ಎಂಬ ಚಡಪಡಿಕೆ, ಕಾತರಗಳು ಚೌಕಿಯ ಹೊರಗಿನ ನೋಟ.

ಚೌಕಿಯಲ್ಲಿ ಪೂಜೆ. ಗಪ್ಚಿಪ್, ಗದ್ದಲವಿಲ್ಲ. 'ಮೈಕ್ ಆಫ್ ಮಾಡಿ' ಹಿರಿಯರ ಬುಲಾವ್. ಕಲಾವಿದರೆಲ್ಲೂ ಭಯ-ಭಕ್ತಿಯಿಂದ ಕೈಮುಗಿದು 'ತನ್ನ ವೇಷ ಒಳ್ಳೆಯದಾಗಲಿ' ಎಂದು ಹರಕೆ ಹೇಳಿಕೊಳ್ಳುತ್ತಿದ್ದರು. ಆಟ ಶುರುವಾಯಿತು. ಚೆಂಡೆಯ ಸದ್ದಿನೊಂದಿಗೆ 'ದೇವಿ ಮಹಾತ್ಮೆ'ಯ ಪೌರಾಣಿಕ ಲೋಕ ನಾಲ್ಕು ಕಂಬದ ಮಧ್ಯೆ ಅನಾವರಣಗೊಂಡಿತು. ಯಾವ್ಯಾವ ಪಾತ್ರಗಳ ಬಗ್ಗೆ ಭಯ-ಆತಂಕಗಳಿದ್ದುವೋ ಅವೆಲ್ಲಾ ಸುಲಲಿತವಾಗಿ ನಿರ್ವಹಿಸಲ್ಪಟ್ಟಿತ್ತು. ಮಧು-ಕೈಟಭ, ಮಹಿಷಾಸುರ, ಚಂಡ, ಮುಂಡ, ರಕ್ತಬೀಜ, ಶುಂಭ, ನಿಶುಂಭ ಪಾತ್ರಗಳ ವಧೆಯಾಗುವಾಗ ಕಡಿದ ಕುಂಬಳಕಾಯಿ ಹೋಳುಗಳು ಮರುದಿನವಿಡೀ ಆಟಕ್ಕೆ ಸಾಕ್ಷಿಯಾಗಿದ್ದುವು.

ಕೆಲವರ ಪಾತ್ರಗಳು ಮಧ್ಯೆ ಮಧ್ಯೆ ಮುಗಿದುಹೋಗುತ್ತಿತ್ತು. ಅವರೆಲ್ಲಾ ಮುಖದ ಬಣ್ಣವನ್ನು ಸ್ವಲ್ಪ ಉಳಿಸಿಕೊಂಡು, ತನ್ನ ಬಂಧುಗಳ-ಸ್ನೇಹಿತರ ಗಡಣದೊಂದಿಗೆ 'ಪಾತ್ರದ ಯಶಸ್ಸಿನ' ಕುರಿತು ಹರಟೆ ನಡೆಸುತ್ತಿದ್ದರು. ಪಾತ್ರವಾದ ಬಳಿಕವೂ 'ಅಬ್ಬಾ.. ದೇವರು ಕೈಬಿಟ್ಟಿಲ್ಲ. ಏನೂ ತೊಂದರೆಯಾಗಿಲ್ಲ. ಆಯಾಸವಾಗಿಲ್ಲ.' ಎಂಬ ಭಯ-ಭಕ್ತಿ. ಆಟ ಮುಗಿಸಿದ ಮರುದಿವಸ ಜರುಗಿದ ಪ್ರದರ್ಶನದ ಪೋಸ್ಟ್ಮಾಟಂ. ಹೊಗಳಿಕೆಗಳ ಸುರಿಮಳೆ. ಮನೆಮನೆಯಲ್ಲಿ ಆಟದ-ಕಲಾವಿದರ ವಿಮರ್ಶೆ.. ನಂತರದ ದಿವಸಗಳಲ್ಲಿ ಕಲಾವಿದರು ಸಿಕ್ಕಿದಾಗಲೆಲ್ಲಾ ಅವರಿಗೆ ಪ್ರತ್ಯೇಕ ಮಣೆ. ಬಹುತೇಕ ಎಲ್ಲಾ ಊರುಗಳಲ್ಲೂ ಯಕ್ಷಗಾನದ ಪ್ರದರ್ಶನದ ಸುತ್ತ ಇಂತಹ ಸುಂದರ ಅನುಭವವಿರುತ್ತಿತ್ತು.

ಈ ರೀತಿಯ ಭಕ್ತಿ-ಶೃದ್ಧೆಯ ವಾತಾವರಣ ಯಕ್ಷಗಾನ ಕ್ಷೇತ್ರದಲ್ಲಿ ಎಲ್ಲಿದೆ? ಹುಡುಕಿದರೆ ಅಲ್ಲೋ-ಇಲ್ಲೋ ಅಷ್ಟೇ. ಆಗ ಸಾಂಸ್ಕೃತಿಕ ಆಯ್ಕೆ ಬೇರೆ ಇರಲಿಲ್ಲ ಎಂಬುದು ಸರಿ. ಆದರೆ ಯಕ್ಷಗಾನವನ್ನು 'ದೈವೀ ಕಲೆ'ಯಾಗಿ ಸ್ವೀಕರಿಸಿದ್ದರಲ್ಲಾ, ಅದರ ಹಿಂದಿರುವ ಭಾವನೆಗಳಿಗೆ ಭಾಷೆಯನ್ನು ಬರೆಯಲಾಗುವುದಿಲ್ಲ. ಅವೆಲ್ಲಾ ಅನುಭವ ಜನ್ಯ. ಅದರಲ್ಲಿ ಸುಖವಿತ್ತು, ನೆಮ್ಮದಿಯಿತ್ತು, ಆನಂದಗಳಿದ್ದುವು. 'ನಮ್ಮೂರಲ್ಲೂ ಯಕ್ಷಗಾನ ಬೆಳೆಯಬೇಕೆಂಬ' ಆಶಯವಿತ್ತು. ಹಾಗಾಗಿಯೇ 'ಗಂಡು ಕಲೆ' ಉಳಿದುಕೊಂಡಿದೆ.

ಈಗ 'ಪ್ರದರ್ಶನ ರೈಸಬೇಕು' ಎಂಬ ಮಾನದಂಡದಂತೆ ಯಶಸ್ಸು. ಸ್ಥಾನ-ಮಾನ. ಹೊಗಳಿಕೆ. 'ಕೆಟ್ಟ ಅಭಿವ್ಯಕ್ತಿಯಾದರೂ ಹೊಗಳಲೇ ಬೇಕು' ಎಂಬ ಅಲಿಖಿತ ಶಾಸನ!