Saturday, December 6, 2014

'ಪಾತಾಳ ಪ್ರಶಸ್ತಿ' ಪುರಸ್ಕೃತ - ಭಾಸ್ಕರ ಜೋಶಿ ಶಿರಳಗಿ


           ಅಕ್ಟೋಬರಿನಲ್ಲಿ ಉಡುಪಿ ರಾಜಾಂಗಣದಲ್ಲಿ ಚಿಟ್ಟಾಣಿ ಪಾತ್ರ ವೈಭವದ ಕ್ಷಣ. ಅಂದು 'ಚಕ್ರಚಂಡಿಕೆ' ಪ್ರಸಂಗ. ಐವತ್ತೆಂಟರ ಶಿರಳಗಿ ಭಾಸ್ಕರ ಜೋಶಿ (Bhaskara Joshi Shiralagi) ಅಕ್ಟೋಬರಿನಲ್ಲಿ ಉಡುಪಿ ರಾಜಾಂಗಣದಲ್ಲಿ ಚಿಟ್ಟಾಣಿ ಪಾತ್ರ ವೈಭವದ ಕ್ಷಣ. ಅಂದು 'ಚಕ್ರಚಂಡಿಕೆ' ಪ್ರಸಂಗ. ಐವತ್ತೆಂಟರ ಶಿರಳಗಿ ಭಾಸ್ಕರ ಜೋಶಿ ಹದಿನೆಂಟರ ಹೆಣ್ಣಾಗಿ ಕುಣಿದರು. ಚಿಟ್ಟಾಣಿಯವರೊಂದಿಗೆ ಸರಸವಾಡಿದರು. ಪ್ರಸಂಗದ ಒಂದು ಸನ್ನಿವೇಶದ ವಿನ್ಯಾಸದ ಗಟ್ಟಿತನಕ್ಕೆ ಬೆರಗಾದೆ. ಬಣ್ಣದ ಮನೆಯಲ್ಲಿ ವೇಷ ಕಳಚಿದ ಜೋಶಿ, 'ನಾಳೆ ಬೇಗ ಮನೆ ಸೇರಬೇಕ್ರಿ, ಅಡಿಕೆ ಕೊಯ್ಲು ಆಗ್ತಿದೆ. ಜನ ಸಿಕ್ತಿಲ್ಲ. ಒಟ್ಟಾರೆ ತಲೆಬಿಸಿ,' ಎಂದರು. ಆಗಷ್ಟೇ ರಂಗದಲ್ಲಿ ಅಪ್ಪಟ ಕಲಾವಿದರಾಗಿ ಕುಣಿದ ಜೋಶಿ, ಅಷ್ಟೇ ಕ್ಷಿಪ್ರವಾಗಿ 'ಕೃಷಿಕ'ರಾಗಿ ಬದಲಾಗಿದ್ದರು.
              ಜೋಶಿ ಒಂದು ಕಾಲಘಟ್ಟದಲ್ಲಿ ರಂಗದಲ್ಲಿ ಮೆರೆದ ಯಶಸ್ವಿ ನಾರಿ. ಆಕರ್ಷಕ ಸ್ವರ, ಹೆಣ್ಣಿಗೊಪ್ಪುವ ಮೈಕಟ್ಟು, ಉತ್ತಮ ಭಾಷೆ. ಚೆಲ್ಲುಚೆಲ್ಲು ಪಾತ್ರಗಳಿಂದ ಗರತಿಯ ತನಕ ಮಿತಿಮೀರದ ಅಭಿವ್ಯಕ್ತಿ. ಹಳೆ ಪ್ರಸಂಗಗಳಲ್ಲಿ ಮಿಂಚಿದಂತೆ ಹೊಸ ಪ್ರಸಂಗಗಳೂ ಹೊಸ ಪಂಚ್. ಬಡಗಿನ ಬಹುತೇಕ ಕಲಾವಿದರೊಂದಿಗೆ ರಂಗದಲ್ಲೂ, ಹೊರಗೂ ಒಡನಾಟ.
                  ಇವರದು ಕನಸು ಕಾಣುವ ಬದುಕಲ್ಲ. ವರ್ತಮಾನ ಹೇಗುಂಟೋ ಹಾಗೆ ಬದುಕನ್ನು ಕಟ್ಟಿಕೊಳ್ಳುತ್ತಾ ಬಂದವರು. ತಂದೆ ನಾರಾಯಣ ಸುಬ್ರಾಯ ಜೋಶಿಯವರ ಪೌರೋಹಿತ್ಯ ವೃತ್ತಿ ಬದುಕಿಗಾಧಾರ. ಎಸ್.ಎಸ್.ಎಲ್.ಸಿ.ತನಕ ಓದು. ಯಕ್ಷಗಾನ ನಾಟಕದ ಮೂಲಕ ರಂಗಪ್ರವೇಶ. 'ಪನ್ನದಾಸಿ' - ಪ್ರಥಮ ನಾಟಕ. ಇವರ ಸ್ತ್ರೀಪಾತ್ರಗಳ ಮೋಡಿಯು 'ಕೊಳಗಿ ಮೇಳ'ಕ್ಕೆ ಕಲಾವಿದನನ್ನಾಗಿ ರೂಪಿಸಿತು. ಹೊಸ್ತೋಟ ಮಂಜುನಾಥ ಭಾಗವತರು, ಹೆರಂಜಾಲು ವೆಂಕಟ್ರಮಣ ಇವರಿಂದ ನಾಟ್ಯಾಭ್ಯಾಸ.
                   ಮುಂದೆ ಇಡಗುಂಜಿ ಮೇಳದ ತಿರುಗಾಟವು ಹೊಸ ರಂಗ ತಂತ್ರಗಳ ಕಲಿಕೆಗೆ ತಾಣವಾಯಿತು. ಮುಂದೆ ಡಾ.ಶಿವರಾಮ ಕಾರಂತರ 'ಯಕ್ಷರಂಗ'ದ ಗರಡಿಯಲ್ಲಿ ವ್ಯವಸಾಯ. ಅವರ ಯಕ್ಷಗಾನ ಬ್ಯಾಲೆಯು ನೃತ್ಯ, ಸಂಗೀತ ಪ್ರಧಾನ. ಭಾವಾಭಿವ್ಯಕ್ತಿಗೆ ಪ್ರಾಶಸ್ತ್ಯ.  ತಂಡದಲ್ಲಿ ಸ್ತ್ರೀಪಾತ್ರವನ್ನು ಮಾಡುವ ಸ್ತ್ರೀಯರಿದ್ದರೂ ಭಾಸ್ಕರ ಜೋಶಿಯವರ ಪಾತ್ರಗಳ ಲಾಲಿತ್ಯಗಳಿಂದಾಗಿ ಸ್ತ್ರೀಪಾತ್ರಗಳ ಪಟ್ಟ ಖಾಯಂ. ದೇಶ, ವಿದೇಶಗಳಿಗೆ ಯಕ್ಷಯಾತ್ರೆ.
                  ಕಾರಂತರೊಂದಿಗಿನ ಆರು ವರುಷದ ತಿರುಗಾಟದ ಒಂದೊಂದು ಕ್ಷಣವೂ ಕಾಡುವ ನೆನಪು. ಚಿಕ್ಕ ಚಿಕ್ಕ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ. ಬಹುಶಃ ರಂಗದಲ್ಲಿ ನನಗೇನಾದರೂ ಹೆಸರು ಬಂದಿದ್ದರೆ ಅವರ ಒಡನಾಟದ ಜ್ಞಾನ ಸಂಪಾದನೆಯಿಂದ ಸಾಧ್ಯವಾಯಿತು ಎನ್ನಬಹುದು, ಎನ್ನುತ್ತಾರೆ ಭಾಸ್ಕರ ಜೋಶಿ.
                 ಸಾಲಿಗ್ರಾಮ ಮೇಳ, ಅಮೃತೇಶ್ವರಿ, ಪೆರ್ಊರು ಮೇಳಗಳಲ್ಲಿ ಯಶಸ್ವೀ ತಿರುಗಾಟ. ಇವರ ವೇಷ ವಿನ್ಯಾಸ ಕ್ಲೀನ್. ಶೃಂಗಾರ, ಕರುಣ, ವೀರ, ರೌದ್ರ ರಸಾಭಿವ್ಯಕ್ತಿಯಲ್ಲಿ ಪ್ರತ್ಯೇಕ ಛಾಪು. ಚುರುಕಿನ ನಡೆ. ಕ್ಷಿಪ್ರವಾಗಿ ಉದುರುವ ಮಾತು.  ಪ್ರಭಾವತಿ, ಮೋಹಿನಿ, ಸೈರಂಧ್ರಿ, ದಾಕ್ಷಾಯಿಣಿ.. ಪಾತ್ರಗಳು ಹೆಸರಿನೊಂದಿಗೆ ಹೊಸೆದುಬಿಟ್ಟಿದೆ.
                 ಕೆರೆಮೆನೆ ಮಹಾಬಲ ಹೆಗಡೆಯವರ ಜಮದಗ್ನಿ-ರೇಣುಕೆ' ಈಶ್ವರ-ದಾಕ್ಷಾಯಿಣಿ ಜತೆಗಾರಿಕೆ, ಬ್ರಹ್ಮಕಪಾಲ ಪ್ರಸಂಗದಲ್ಲಿ ಗೋಡೆಯವರ ಬ್ರಹ್ಮನೊಂದಿಗೆ ಶಾರದೆ, ಬಳ್ಕೂರ ಕೃಷ್ಣಯಾಜಿಯವರ ಸುಧನ್ವನೊಂದಿಗೆ ಪ್ರಭಾವತಿ, ಮಹಾಬಲ ಹೆಗಡೆಯವರ ದುಷ್ಟಬುದ್ಧಿ-ವಿಷಯೆ ಜತೆಗಾರಿಕೆಗಳು ಕಾಲದ ಕಥನಗಳು. "ಚೆಲುವೆ ಚಿತ್ರಾವತಿ ಪ್ರಸಂಗದ ಮೊದಲ ಪ್ರದರ್ಶನದಲ್ಲಿ ’ಚಿತ್ರಾವತಿ’ ಮಾಡಿದವರು ಭಾಸ್ಕರ ಜೋಶಿ. ಅವರ ಹೆಸರನ್ನು ನೆನಪಿಸಿರೆ ಸಾಕು, ಫಕ್ಕನೆ ನೆನಪಾಗುವುದು”ದಾಕ್ಷಾಯಿಣಿ’ ಪಾತ್ರ," ಇವರನ್ನು ಹತ್ತಿರದಿಂದ ಬಲ್ಲ ರಾಜಶೇಖರ ಮರಕ್ಕಿಣಿ ನೆನಪಿಸಿಕೊಳ್ಳುತ್ತಾರೆ.
                 "ಬಾಲ್ಯದಲ್ಲಿ ಒಂದು ಕನಸಿತ್ತು. ಮುಖ್ಯ ಸ್ತ್ರೀಪಾತ್ರಧಾರಿಯಾಗಬೇಕು, ಕರಪತ್ರದಲ್ಲಿ ಮುಖ್ಯ ಸ್ತ್ರೀ ಪಾತ್ರಧಾರಿ ಜಾಗದಲ್ಲಿ ನನ್ನ ಹೆಸರಿರಬೇಕು, ದಿವಸಕ್ಕೆ ಕನಿಷ್ಠ ನೂರು ರೂಪಾಯಿ ಸಂಭಾವನೆ ಸಿಗಬೇಕು. ಇವೆಲ್ಲವೂ ಈಡೇರಿದೆ. ಕನಸು ನನಸಾಗಿದೆ. ಇಳಿ ವಯಸ್ಸಿನಲ್ಲೂ ಮೇಳಗಳಿಗೆ ಬೇಡಿಕೆ ಬರುತ್ತಿದೆ. ತೋಟ, ಆಟ ಎನ್ನುತ್ತಾ ಸಮನ್ವಯ ಮಾಡಿಕೊಳ್ಳುತ್ತಿದ್ದೇನೆ," ಎನ್ನುತ್ತಾರೆ.
                  ಮೇಳಗಳ ತಿರುಗಾಟ ಮಾಡುತ್ತಿದ್ದಂತೆ ಸ್ವತಃ ಮೇಳ ಮಾಡಬೇಕೆನ್ನುವ ಕೆಟ್ಟ ತುಡಿತವೊಂದು ಅಪ್ಪಿಕೊಂಡಿತು! 'ಭುವನಗಿರಿ ಮೇಳ'ದ ಸಂಪನ್ನತೆ. ಮೂರು ವರುಷದಲ್ಲಿ ಆರು ಲಕ್ಷ ರೂಪಾಯಿ ನಷ್ಟ. ಸಾಲಗಾರನ ಪಟ್ಟ. ಸಾಲ ತೀರಿಸಲು ಪುನಃ ಮೇಳಗಳಲ್ಲಿ ಬಣ್ಣ ಹಚ್ಚುತ್ತಿದ್ದಂತೆ ಅಪಘಾತಕ್ಕೆ ಒಳಗಾದರು. ಪರಿಹಾರಕ್ಕಾಗಿ ಕೋರ್ಟು-ಕಚೇರಿ ಅಲೆದಾಟ. 'ನೀನು ಕಲಾವಿದ ಎನ್ನುವುದಕ್ಕೆ ಏನು ಪುರಾವೆ?' ಎಂದಾಗ ನಿರುತ್ತರ. ಸರಿಯಾದ ದಾಖಲೆಯಿಲ್ಲದೆ ವ್ಯಾಜ್ಯ ಕಾಗದದಲ್ಲೇ ಉಳಿಯಿತು. ರಂಗದಲ್ಲಿ ಎತ್ತರಕ್ಕೇರಿದ ಜೋಶಿಯವರ ಕಲಾ ಬದುಕಿನಲ್ಲಿನ ಕೆಲವು ಇಳಿಘಟನೆಗಳಿವು.
                 ಸಿದ್ಧಾಪುರ ತಾಲೂಕಿನ ಶಿರಳಗಿಯಲ್ಲಿ ಕೃಷಿ ಪ್ರಧಾನ ವೃತ್ತಿ. ನಿರಂತರ ದುಡಿಮೆ. ಆಲಸ್ಯ ಕಾಣದ ಕೃಷಿಕ. ಆರ್ಥಿಕವಾಗಿ ಹೇಳುವಂತಹ ಸದೃಢರಲ್ಲ. ಮಾನಸಿಕವಾಗಿ ಸಂತೃಪ್ತ. ಸಹಾಯ ಮನೋಭಾವ. ಶುದ್ಧ ಹಸ್ತರು. ನೇರ ವ್ಯವಹಾರ.  ಮೇಳಗಳ ಯಜಮಾನರಿಗೆ ಎಂದೂ ಇವರು ತಲೆನೋವಾಗಿಲ್ಲ. ಕಲಾವಿದನಲ್ಲಿ ಇರಲೇಬೇಕಾದ ಗುಣಗಳು ಜೋಶಿಯವರಲ್ಲಿ ಮಿಳಿತವಾಗಿದೆ. ಮಡದಿ ಮಾಲಿನಿ. ಸ್ಪೂರ್ತಿ, ರಘುರಾಮ ಇಬ್ಬರು ಮಕ್ಕಳು.
                ಮೂವತ್ತೈದು ವರುಷಗಳ ರಂಗಸಾಧನೆಗಾಗಿ ಈಗ 'ಪಾತಾಳ ಪ್ರಶಸ್ತಿ'ಯ ಬಾಗಿನ. ದಶಂಬರ 7ರಂದು ಎಡನೀರಿನಲ್ಲಿ ಪರಮಪೂಜ್ಯ ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ದಿವ್ಯ ಸಾನ್ನಿಧ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ. ಪಾತಾಳ ಯಕ್ಷ ಪ್ರತಿಷ್ಠಾನವು ನೀಡುವ ಈ ಪ್ರಶಸ್ತಿಗೆ ಈಗ ದಶಮಾನದ ಖುಷಿ. ಈ ನೆನಪಿಗಾಗಿ 'ಉಪಾಯನ' (Editor : Na. Karantha Peraje) ಎನ್ನುವ ಪುಸ್ತಿಕೆಯ ಅನಾವರಣ ನಡೆಯಲಿದೆ.
                

No comments:

Post a Comment