Monday, November 21, 2016

ಯಕ್ಷೊತ್ಸವ ಊರಿದ ಸಾಂಸ್ಕೃತಿಕ ಯವನಿಕೆ


              ಸಂಪಾಜೆಯಲ್ಲಿ ಇಪ್ಪತ್ತಮೂರು ಗಂಟೆಗಳ ಯಕ್ಷಗಾನ ಪ್ರದರ್ಶನ! ನಾಲ್ಕು ಆಖ್ಯಾನಗಳು. ಮೂರು ತೆಂಕು ಮತ್ತು ಒಂದು ಬಡಗು ತಿಟ್ಟಿನ ಪ್ರದರ್ಶನ. ವೃತ್ತಿ ಕಲಾವಿದರ ಸಮ್ಮಿಲನ. ಸುಪ್ತ ಪ್ರತಿಭೆಗಳ ಪೂರ್ತಿ ಅನಾವರಣ.  ಯಾವುದೇ ಪ್ರಸಂಗಕ್ಕೆ 'ಸಮಯವಿಲ್ಲ' ಎಂಬ ಗೊಣಗಾಟವಿಲ್ಲ. ಅಕ್ಟೋಬರ್ 29ರಂದು ಮಧ್ಯಾಹ್ನ ಎರಡು ಗಂಟೆಗೆ ಆರಂಭವಾದ 'ಸಂಪಾಜೆ ಯಕ್ಷೊತ್ಸವ'ವು ಮುಗಿಯುವಾಗ ಮರುದಿವಸ ಮಧ್ಯಾಹ್ನ ಒಂದು ಗಂಟೆ!
              2015ರಲ್ಲಿ ಸಂಪಾಜೆ ಯಕ್ಷೊತ್ಸವವು ರಜತ ಸಂಭ್ರಮವನ್ನು ಆಚರಿಸಿತ್ತು. ಈ ವರುಷ ಇಪ್ಪತ್ತಾರರ ಪ್ರದರ್ಶನ. ಡಾ.ಕೀಲಾರು ಗೋಪಾಲಕೃಷ್ಣಯ್ಯವರ ಸಾರಥ್ಯದಲ್ಲಿ ಯಕ್ಷೊತ್ಸವವು 1990ರಲ್ಲಿ ಆರಂಭವಾಗಿತ್ತು. 2004ರಲ್ಲಿ ಇವರು ದೈವಾಧೀನರಾದ ಬಳಿಕ 'ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ'ದ ಮೂಲಕ ಆಯೋಜನೆ. ಉತ್ಸವದ ವ್ಯವಸ್ಥೆ, ವಿನ್ಯಾಸ, ಪ್ರದರ್ಶನ, ಸಂಮಾನ, ಪ್ರಶಸ್ತಿ..ಗಳು ಹಿಂದಿನಂತೆ ಮುಂದುವರಿದಿದೆ.
               ಡಾ.ಕೀಲಾರು ಗೋಪಾಲಕೃಷ್ಣಯ್ಯನವರು ಕಲಾಪೋಷಕ, ಕಲಾ ಪ್ರೇಮಿ. ಕಣ್ಣೀರಿಗೆ ಮರುಗುವ ಗುಣ. ಜಾತ್ಯತೀತ ಮನೋಭಾವದ ದಾನಿ. ಬಾಲ್ಯದಿಂದಲೇ ಯಕ್ಷಗಾನದತ್ತ ಒಲವು, ಸಾಹಿತ್ಯದಲ್ಲಿ ಪ್ರೀತಿ. ಪ್ರತಿಷ್ಠಿತ ಕೀಲಾರು ಮನೆತನ ಅನ್ನ ದಾಸೋಹಕ್ಕೆ ಖ್ಯಾತಿ. ಸ್ವಯಂ ವ್ಯಕ್ತಿತ್ವದಿಂದ ಊರಿಗೆ ಕಣ್ಣಾಗಿ ರೂಪುಗೊಂಡರು. ಸಾಂಸ್ಕೃತಿಕ ವಾತಾವರಣ ಸೃಷ್ಟಿಸಿದರು. ವಿವಿಧ ದತ್ತಿ ನಿಧಿಗಳನ್ನು ಸ್ಥಾಪಿಸಿದರು. ಬಡವರಿಗೆ ಆಸರೆಯಾದರು. ವಿದ್ಯಾರ್ಥಿಗಳಿಗೆ ನೆರವಾದರು. ಕೀಲಾರು ಅವರು ಬದುಕಿನಲ್ಲಿ ರೂಢಿಸಿಕೊಂಡಿರುವ ಸಮಾಜಮುಖಿ ಬದ್ಧತೆಗಳನ್ನು ಈಗ ಪ್ರತಿಷ್ಠಾನವು ಅನುಷ್ಠಾನಿಸುತ್ತಿದೆ.
              ಸಂಪಾಜೆ ಯಕ್ಷೊತ್ಸವದಲ್ಲಿ ಆತಿಥ್ಯಕ್ಕೆ ಮಣೆ. ಪ್ರದರ್ಶನ ಮುಗಿಯುವ ತನಕ ಪಾಕ ಶಾಲೆಯು ತೆರೆದಿರುತ್ತದೆ. ಎಷ್ಟು ಹೊತ್ತಿಗೆ ಹೋದರೂ ಉಪಾಹಾರ, ಭೋಜನವನ್ನು ಬಡಿಸಲು ಕಾದಿರುತ್ತಾರೆ. ಹಾಗಾಗಿ ಪ್ರದರ್ಶನ ಪೂರ್ತಿ ಬಹುತೇಕ ಪ್ರೇಕ್ಷಕರು ಭಾಗವಹಿಸುವುದನ್ನು ನೋಡಬಹುದು. ಎಲ್ಲಾ ವರ್ಗದ ಜನರು ಭಾಗವಹಿಸುತ್ತಾರೆ. ಒಂದೊಂದು ವಿಭಾಗದಲ್ಲೂ ಲೋಪ ಬರಬಾರದೆನ್ನುವ ನಿಗಾ. ಎಲ್ಲೆಲ್ಲೂ ಅಚ್ಚುಕಟ್ಟು. ಗೊಂದಲವಾಗದಂತೆ ಎಚ್ಚರ.
             'ಸಹಸ್ರ ಕವಚ, ಮಾರುತಿ ಪ್ರತಾಪ, ಉತ್ತಮ ಸೌದಾಮಿನಿ, ವಿಶ್ವವಿಮೋಹನ' - ಸರ್ವಾಂಗ ಸುಂದರವಾಗಿ ಮೂಡಿಬಂದ ಆಖ್ಯಾನಗಳು. ಇದರಲ್ಲಿ 'ಮಾರುತಿ ಪ್ರತಾಪ'ವನ್ನು ಬಡಗು ತಿಟ್ಟಿನ ಖ್ಯಾತರು ಪ್ರದರ್ಶಿಸಿದ್ದರು. ಜನ್ಸಾಲೆ ರಾಘವೇಂದ್ರ ಆಚಾರ್ಯರ ಭಾಗವತಿಕೆಯಲ್ಲಿ ಪ್ರಸ್ತುತಿಯಾದ ಈ ಪ್ರಸಂಗವು ಲಂಬಿತವಾದಂತೆ ಕಂಡು ಬಂದರೂ ಪ್ರಸಂಗದ ಒಟ್ಟು ಸೌಂದರ್ಯವನ್ನು ಕಲಾವಿದರು ಕಟ್ಟಿಕೊಟ್ಟರು. ಮೂವರು ಭಾಗವತರ ತ್ರಿಂದ್ವ ಭಾಗವತಿಕೆಯಲ್ಲಿ ಸಹಸ್ರಕವಚ ಪ್ರಸಂಗ ಮೆರುಗಿತು.
             ಉತ್ತಮ ಸೌದಾಮಿನಿ - ಒಂದು ಕಾಲಘಟ್ಟದಲ್ಲಿ ಶ್ರೀ ಧರ್ಮಸ್ಥಳ ಮೇಳದಲ್ಲಿ ಯಶಕಂಡ ಪ್ರಸಂಗ ಯಕ್ಷೊತ್ಸವದಲ್ಲಿ ಕಲಾವಿದರಿಗೆಲ್ಲಾ ಪ್ರಸಂಗವು ಹೊಸತು. ಎಲ್ಲೂ ಗೊಂದಲವಾಗದೆ ಸಹಜವಾಗಿ ಓಟ ಕಂಡಿತ್ತು. ಹೆಚ್ಚು ನಾಟಕೀಯ ತಿರುವುಗಳುಳ್ಳ ಇದನ್ನು ನೊಡುವ ಪ್ರೇಕ್ಷಕರು ಕೂಡಾ ರಂಗದಲ್ಲೇ ತಮ್ಮ ಗಮನವನ್ನು ಇರಿಸಿದಾಗ ಮಾತ್ರ ಪ್ರಸಂಗದ ಆಶಯ ಮನದೊಳಗೆ ಇಳಿಯುತ್ತದೆ. ಕೆಲವೊಂದು ಸನ್ನಿವೇಶಗಳಲ್ಲಿ ಬಹಳ ಸೂಕ್ಷ್ಮತೆಯ ಬಂಧವಿತ್ತು. ಮೇಲ್ನೋಟಕ್ಕೆ ನೋಡುವಾಗ ಸನ್ನಿವೇಶದಿಂದ ಸನ್ನಿವೇಶಕ್ಕೆ ಸಂಬಂಧವೇ ಇಲ್ಲದಂತೆ ಭಾಸವಾಗುತ್ತದೆ. ಕೊನೆಗೆ ಎಲ್ಲವೂ ಸುಸೂತ್ರವಾಗಿ ಪರಸ್ಪರ ಸಂಬಂಧ ಹೊಸೆಯುತ್ತದೆ.
              ವರ್ತಮಾನ ಯಕ್ಷಗಾನವು ಬಯಸುವ 'ರೈಸುವಿಕೆ'ಯು ಉತ್ತಮ ಸೌಧಾಮಿನಿಯಲ್ಲಿಲ್ಲ. ಹಾಗಾಗಿ ಕೆಲವರು 'ಬೋರ್' ಅಂದದುಂಟು. ಹಲವು ಕಾಲದಿಂದ ನಾನು 'ಬೋರ್' ಪದದ ಅರ್ಥ ಹುಡುಕುತ್ತಿದ್ದೇನೆ! ನನಗಿನ್ನೂ ಸಿಕ್ಕಿಲ್ಲ. ಆಟ ನೋಡುವ ಪ್ರೇಕ್ಷಕನ ಚಿತ್ತವು ರಂಗದೊಳಗೆ ಸುತ್ತುತ್ತಿದ್ದರೆ ಬೋರ್ ಎಂಬ ಅಂಟದು.  ಕೆಲವೊಮ್ಮೆ ರಂಗದ ಸಂಭಾಷಣೆಗಳು ದೀರ್ಘವಾದಾಗ ಚಿತ್ತವು ರಂಗದಿಂದ ಹೊರಗೆ ಸುತ್ತುವುದುಂಟು. ಆ ರೀತಿಯ ಸುತ್ತಾಟ ಒಂದು ಕ್ಷಣ ಮಾತ್ರ! ಮತ್ತದು ರಂಗದೊಳಗೆ ಜಿಗಿಯಬೇಕು. ಹೀಗೆ ಜಿಗಿಯದಿದ್ದರೆ ಪ್ರಸಂಗವನ್ನು ಅನುಭವಿಸುವುದಕ್ಕೆ, ಹಿಮ್ಮೇಳವನ್ನು ಆಸ್ವಾದಿಸುವುದಕ್ಕೆ ಕಷ್ಟವಾಗುತ್ತದೆ. ಎಲ್ಲಾ ಕಲಾವಿದರು ಉತ್ತಮ ಸೌದಾಮಿನಿಗೆ ನ್ಯಾಯ ಒದಗಿಸಿದ್ದಾರೆ. ಪರಿಣಾಮ ನೀಡಿದ್ದಾರೆ. ಚಿಕ್ಕ ಚಿಕ್ಕ ಹಾಸ್ಯ, ಮಾತಿನ ವರಸೆಯ ಪಂಚ್ಗಳು ಮುದ ನೀಡಿತ್ತು.
              ಕೊನೆಯ ಪ್ರಸಂಗ - ವಿಶ್ವವಿಮೋಹನ ಅಥವಾ ಭದ್ರಾಯು ಚರಿತ್ರೆ. ಬಹುತೇಕ ಏರು ಪದ್ಯಗಳ ಆಖ್ಯಾನವಿದು. ಪ್ರಸಂಗ ಆರಂಭವಾಗುವಾಗ ಬೆಳಗ್ಗಿನ ಜಾವ ಏಳು ಗಂಟೆ! ಸ್ವಯಂವರ, ಶೃಂಗಾರ, ವೀರರಸಗಳಿಂದ ಆವೃತ್ತವಾದ ಪ್ರಸಂಗ. ಸಂಪಾಜೆಯ ಯಕ್ಷೊತ್ಸವ ಅಂದಾಗ ಎಲ್ಲಾ ಕಲಾವಿದರಿಗೂ ತನ್ನಲ್ಲಿರುವ  ಪ್ರತಿಭೆಯ ಅನಾವರಣ ಆಗಬೇಕೆಂಬ ಹಪಹಪಿಕೆ ಇರುತ್ತದೆ. ಆಗ ಪ್ರಸಂಗ ಸಹಜವಾಗಿ ಲಂಬಿತವಾಗುತ್ತದೆ. ಲಂಬನವಾಯಿತೆಂದು ಯಾರೂ ಗೊಣಗದೆ ಪ್ರಸಂಗವನ್ನು ಸ್ವೀಕರಿಸುವ ಮನಃಸ್ಥಿತಿಯಿದೆಯಲ್ಲಾ, ಇದು ಸಂಪಾಜೆ ಯಕ್ಷೊತ್ಸವದ ಹೈಲೈಟ್.
              ಇಂದು ಸಮಗ್ರ ಯಕ್ಷಗಾನವನ್ನು ನೋಡುವ ರಸಿಕರು ಎಲ್ಲವೆಂದಲ್ಲ, ತೀರಾ ಕಡಿಮೆ. ಒಂದೊಂದು ಅಂಗವನ್ನು ಪ್ರೀತಿಸುವ, ಅದಕ್ಕಾಗಿ ಕಾಯುವ ಮನಸ್ಸುಗಳು ಧಾರಾಳ. ಕೆಲವರಿಗೆ ಭಾಗವತಿಕೆ, ಇನ್ನೂ ಕೆಲವರಿಗೆ ಚೆಂಡೆ-ಮದ್ದಳೆಗಳು, ಹಾಸ್ಯ, ಸ್ತ್ರೀವೇಶ, ಪುಂಡುವೇಶ... ಹೀಗೆ. ಇಪ್ಪತ್ತಮೂರು ಗಂಟೆಗಳಲ್ಲಿ ಇಂತಹ ನಿರೀಕ್ಷೆ, ಕಾತರಗಳಿಗೆ ಸಾಕ್ಷಿಯಾಗಿತ್ತು ಯಕ್ಷೊತ್ಸವ. ಕಾಲ ಬದಲಾಗಿದೆ, ಪುರುಸೊತ್ತಿಲ್ಲ, ಬ್ಯುಸಿ.. ಮೊದಲಾದ ಒಣ ಮಾತುಗಳನ್ನು ಬದುಕಿನಲ್ಲಿ ಕೇಳುತ್ತೇವೆ. ಯಕ್ಷೊತ್ಸವದಲ್ಲಿ ಇಪ್ಪತ್ತಮೂರು ಗಂಟೆ ಕುಳಿತ ಪ್ರೇಕ್ಷಕರನ್ನು ಕಂಡಾಗ ಈ ಮಾತು ಢಾಳು ಎಂದು ಗೋಚರವಾಯಿತು! ಮನಸ್ಸಿದ್ದರೆ ಮಾರ್ಗವಿದೆ.
                ಕೀಲಾರು ಮನೆತನದವರು ಇಪ್ಪತ್ತಾರು ವರುಷಗಳಿಂದ ಸಂಪಾಜೆಯಂತಹ ಹಳ್ಳಿಗೆ ಸಾಂಸ್ಕೃತಿಕ  ಮೌಲ್ಯವನ್ನು ನೀಡಿದ್ದಾರೆ. ಸಾಂಸ್ಕೃತಿಕ ಯವನಿಕೆಯನ್ನು ಊರಿದ್ದಾರೆ. ಸಂಪಾಜೆ ಊರಿನ ಹೆಸರನ್ನು ಕೇಳದವರು ಸಂಪಾಜೆಗೆ ಬರುವಂತೆ ಮಾಡಿದ ಸಾಧನೆ ಚಿಕ್ಕ ವಿಚಾರವಲ್ಲ. ಕೀಲಾರು ಅವರ 'ಜಾತ್ಯತೀತ ಮನೋಭಾವ ಮತ್ತು ಸರ್ವಧರ್ಮ ಪ್ರೀತಿ'ಯು ಯಕ್ಷೊತ್ಸವದಲ್ಲಿ ಸಾಕಾರಗೊಳ್ಳುತ್ತಿದೆ. ಸಂಪಾಜೆಯ ಆಟಕ್ಕೆ ಹೋಗುವಾಗಲೂ ಯಕ್ಷಗಾನದ ಗುಂಗು, ಆಟ ನೋಡಿ ಮರಳುವಾಗಲೂ ಯಕ್ಷಗಾನದ್ದೇ ಗುಂಗು! ಈ ಗುಂಗಿನ ತೇವ ತಿಂಗಳಾದರೂ ಆರದು!

ಚಿತ್ರ : ಶ್ಯಾಮ ಕುಮಾರ್ ತಲೆಂಗಳ
ಪ್ರಜಾವಾಣಿ/ದಧಿಗಿಣತೋ/4-11-2016

      

No comments:

Post a Comment