Monday, November 21, 2016

ಗೋವಿನ ಮಹತಿಗೆ ಯಕ್ಷಗಾನ ಮಾಧ್ಯಮ

             ಯಕ್ಷಗಾನ ತಾಳಮದ್ದಳೆ, ಆಟಗಳು ಹಳ್ಳಿಯಿಂದ ನಗರ ತನಕ ವಿಶಾಲ ವ್ಯಾಪ್ತಿಯನ್ನು ಪಡೆದಿದೆ. ಪುರಾಣ ಸಂದೇಶ, ಬದುಕಿನ ಮಾದರಿಗಳು, ಸಂಸ್ಕೃತಿ-ಸಂಸ್ಕಾರಗಳು.. ಜನಮಾನಸಕ್ಕೆ ತಲಪಿಸುವ ಸಾಧನ. ಆಧುನಿಕ ತಂತ್ರಜ್ಞಾನಗಳು ಧಾಂಗುಡಿಯಿಡುವ ಪೂರ್ವದಲ್ಲಿ ದಕ್ಷಿಣೋತ್ತರ ಜಿಲ್ಲೆಯುದ್ದಕ್ಕೂ, ಇತ್ತ ಮಲೆಯಾಳದ  ಮಣ್ಣಿಗೂ ಯಕ್ಷಗಾನವೊಂದೇ ಅರಿವನ್ನು ಬಿತ್ತುವ ಉಪಾಧಿಯಾಗಿತ್ತು.
            "ನನ್ನ ಅಮ್ಮ ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಪುರಾಣ ಕಾವ್ಯಗಳನ್ನು, ಅದರ ಅರ್ಥಗಳನ್ನು ಪಾರಾಯಣ ಮಾಡುತ್ತಿದ್ದಾಗ ನಾವೆಲ್ಲಾ ಕಿವಿಯಾಗುತ್ತಿದ್ದೆವು. ಮನೆಗಳಲ್ಲಿ ಪುರಾಣ ಕಥೆಗಳನ್ನು ಹೇಳುವ ಪರಿಪಾಠವಿತ್ತು. ಆ ವಾತಾವರಣದಲ್ಲಿ ಬೆಳೆದ ನಮಗೆ ಪುರಾಣ ಓದದೆಯೇ ರಾಮಾಯಣ, ಮಹಾಭಾರತ ಕಥೆಗಳು ಮತಿಯೊಳಗೆ ಇಳಿದಿದ್ದುವು," ಎಂದು ಕೀರ್ತಿಶೇಷ ಡಾ. ಶೇಣಿ ಗೋಪಾಲಕೃಷ್ಣ ಭಟ್ಟರು ಹೇಳಿದ ಮಾತು ನೆನಪಾಗುತ್ತದೆ.
            ಇಂತಹ ಸಂದೇಶವನ್ನು ಬಿತ್ತುವ ಯಕ್ಷಗಾನವು ಕ್ರಮೇಣ ಸಾಮಾಜಿಕ ಪ್ರಸಂಗದತ್ತ ಹೊರಳಿದುವು. ತುಳು ಪ್ರಸಂಗಳು ರಚನೆಯಾದುವು. ಈ ಮಧ್ಯೆ ಒಂದು ಪಿಡುಗನ್ನೋ, ಒಂದು ಚಳುವಳಿಯನ್ನೋ ಕೇಂದ್ರೀಕರಿಸಿ ಪ್ರಸಂಗಗಳು ರಚನೆಯಾದುವು. ತಾಳಮದ್ದಳೆ, ಆಟಗಳ ಮೂಲಕ ಪ್ರಸ್ತುತಿಕೊಂಡುವು. ಒಂದು ಉಪನ್ಯಾಸ, ಭಾಷಣಗಳು ಮಾಡುವ ಪರಿಣಾಮಕ್ಕಿಂತಲೂ ದುಪ್ಪಟ್ಟು ಗಾಢ ಪರಿಣಾಮ ಬೀರಿದುವು. ಅವೆಲ್ಲಾ ಕಾಲದ ಒಂದು ಮಿತಿಯೊಳಗೆ ಹೆಚ್ಚು ಪರಿಣಾಮ, ಪ್ರಭಾವ ಬೀರುವಂತಹುದು, ದೀರ್ಘಕಾಲಿಕವಲ್ಲ.
           ಇಂದು ದೇಶಾದ್ಯಂತ ಗೋವಿನ ಸಂರಕ್ಷಣೆಯ ಚಳುವಳಿ ನಡೆಯುತ್ತಿದೆ. ಮಾಧ್ಯಮಗಳಲ್ಲಿ ಗೋಸಂತತಿ ಉಳಿಸುವ, ಬೆಳೆಸುವ ವಿಚಾರಗಳು ಪ್ರಕಟವಾಗುತ್ತಿವೆ. ಸರಕಾರಿ ಮಟ್ಟದಲ್ಲೂ ಗೋವಿನ ಅಭಿವೃದ್ಧಿಗೆ ಬೇಕಾದ ಯೋಜನೆಗಳು ರೂಪುಗೊಳ್ಳುತ್ತಿವೆ. ಹೈನುಗಾರಿಕೆಗೂ, ಕೃಷಿಗೂ ಬಿಡಿಸಲಾಗದ ಬಂಧ-ಅನುಬಂಧ. ಹೀಗೆ ಬದುಕಿನಲ್ಲಿ ಗೋವಿನ ಮಹತ್ವವನ್ನು ಸಾರುವ ವರ್ತಮಾನದ ಒಂದು ವಿಚಾರದ, ಸಮಸ್ಯೆಯ ಸುತ್ತ ಯಕ್ಷಗಾನ ಪ್ರಸಂಗವೊಂದು ಸಿದ್ಧವಾಗಿದೆ. ಒಂದೆರಡು ತಾಳಮದ್ದಳೆ ಜರುಗಿದೆ.
           ಪ್ರಸಂಗದ ಹೆಸರು - 'ಅಭೀಷ್ಟದಾಯಿನಿ ಗೋಮಾತೆ'. ಹವ್ಯಾಸಿ ಭಾಗವತ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್ ಪ್ರಸಂಗದ ರಚಯಿತರು. ಕಲಾವಿದ ಉಂಡೆಮನೆ ಕೃಷ್ಣ ಭಟ್ಟರಿಂದ ಪರಿಷ್ಕಾರ. ಸುಮಾರು ಮೂರು ಗಂಟೆಗೆ ಹೊಂದುವ ಕಾಲ್ಪನಿಕ ಪ್ರಸಂಗ. ಗೋ ಸಂತತಿಯನ್ನು ಉಳಿಸಬೇಕು, ಬೆಳೆಸಬೇಕು ಎನ್ನುವ ಸ್ಪಷ್ಟ ಸಂದೇಶ ಬೀರುವ ಪ್ರಸಂಗವು ವರ್ತಮಾನಕ್ಕೆ ಕನ್ನಡಿ. ಯಕ್ಷಗಾನದ ವರ್ತುಲದೊಳಗೆ ಕಥಾನಕ ಸುತ್ತುತ್ತದೆ. ಎಲ್ಲೂ ಕಥೆಯಿಂದ, ಚೌಕಟ್ಟಿನಿಂದ ಹೊರಹೋಗದಂತಹ ಬಿಗಿ.
           ಕಥಾ ಹಂದರ : ಕರುನಾಡಿನ ಸುಧರ್ಮ ಮಹಾರಾಜನ ಮಗ ಸತ್ಯಸೇನ. ಈತ ಬೇಟೆಗೆ ತೆರಳಿದಾಗ ಕಳಿಂಗದ ವೀರವರ್ಮನ ಮಗಳು ಚಂದ್ರಾನನೆಯ ಪರಿಚಯ. ಪರಸ್ಪರ ಪ್ರೇಮಾಂಕುರ. ಬಳಿಕ ವಿವಾಹ. ಗಂಡನ ಮನೆಯಲ್ಲಿ ಒಂದೆರಡು ತಿಂಗಳು ಕಳೆದ ಚಂದ್ರಾನನೆಗೆ ಗೋವಿನ ಮಾಂಸ ತಿನ್ನುವ ಚಪಲ. ಇದು ತಂದೆಯ ಬಳುವಳಿ. ಹೆಂಡತಿಯನ್ನು ಒಲಿಸಿಕೊಳ್ಳಲು ಗಂಡ ಸತ್ಯಸೇನ ಗೋವಧೆಗೆ ಮುಂದಾಗುತ್ತಾನೆ. ತಂದೆಯಿಂದ ಮಗನಿಗೆ ಬುದ್ಧಿವಾದ. ಯಾವುದಕ್ಕೂ ಓಗೊಡದ ಮಗನಿಂದ ದೂರವಿರಲು ಸುಧರ್ಮ ನಿರ್ಧಾರ. ದೇಶಾಂತರ ಪರ್ಯಟನೆ. ಸುಜ್ಞಾನಂದ ಯೋಗಿಯ ಮೊರೆ. ಇವರಿಬ್ಬರ ಪ್ರಾರ್ಥನೆಯಂತೆ ನಂದಿನಿ ಪ್ರತ್ಯಕ್ಷ, ಅಭಯ. ಗೋವಧೆಯ ಪರಿಣಾಮಗಳ ನಿರೂಪಣೆ.  ಯೋಗಿಯಿಂದ ಗೋಸಂರಕ್ಷಣೆಯ ಮಹತ್ವವನ್ನು ಅರಿತ ಸುಧರ್ಮನಿಂದ ಪಶ್ಚಾತ್ತಾಮ. ಕಾಲಾಂತರದಲ್ಲಿ ಮಗ ಸತ್ಯಸೇನನಲ್ಲಿ ಪರಿವರ್ತನೆ ಉಂಟಾಗುತ್ತದೆ. ತಂದೆಯನ್ನು ಹುಡುಕುತ್ತಾ ಯೋಗಿಯು ಆಶ್ರಮಕ್ಕೆ ಬರುತ್ತಾನೆ. ತನ್ನ ಸ್ವಶುರನನ್ನು ಯುದ್ಧದಲ್ಲಿ ಮಣಿಸಿ ಕಥಾನಕ ಸುಖಾಂತ್ಯವಾಗುತ್ತದೆ.
            ಮೇಲ್ನೋಟಕ್ಕೆ ಚಿಕ್ಕ ಕಥಾಭಾಗ. ಆದರೆ ತಾಳಮದ್ದಳೆಯಲ್ಲಿ ಹೆಚ್ಚು ಪರಿಣಾಮ. ಕಲಾವಿದರೆಲ್ಲರೂ ಪ್ರಸಂಗದ ಆಶಯವನ್ನು ಅರ್ಥ ಮಾಡಿಕೊಂಡಿದ್ದಾರೆ. ವರ್ತಮಾನಕ್ಕೆ ಟ್ಯೂನ್ ಆದ ಕಲಾವಿದರಿಂದ ಮಾತ್ರ ಪ್ರಸ್ತುತಿ ಸಾಧ್ಯ. ಪುರಾಣ ಪ್ರಸಂಗಗಳಂತೆ ವಾದ-ಸಂವಾದಗಳು ನಡೆದರೆ ಪ್ರಸಂಗದ ಆಶಯಕ್ಕೆ ಭಂಗವಾಗುತ್ತದೆ. ಇಲ್ಲಿರುವುದು ತಾಳಮದ್ದಳೆಯ ಮೂಲಕ ಗೋವಿನ ಸಂರಕ್ಷಣೆಯ ಅಗತ್ಯವನ್ನು ಸಾರುವುದಾಗಿದೆ, ಎನ್ನುತ್ತಾರೆ ಭಾಗವತ ಬಟ್ಯಮೂಲೆ.
           ಉಂಡೆಮನೆ ಕೃಷ್ಣ ಭಟ್, ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್, (ಭಾಗವತರು), ಪಕಳಕುಂಜ ಶ್ಯಾಮ ಭಟ್, ಗುಂಡ್ಯಡ್ಕ ಈಶ್ವರ ಭಟ್, ನಾರಾಯಣ ಕಾರಂತ, ಸೂರ್ಯ ಭಟ್ ಕಶೆಕೋಡಿ, ಗಣರಾಜ ಬಡೆಕ್ಕಿಲ, ಪ್ರಭಾಕರ ಭಟ್, ಮಧುರಾ ಜಿ. ಭಟ್ (ಅರ್ಥಧಾರಿಗಳು) ಮೊದಲಾದ ಕಲಾವಿದರು. ಐದಾರು ಪ್ರಯೋಗಗಳು ಪ್ರಾಯೋಗಿಕವಾಗಿ ಜರುಗಿದಾಗ ಮಾತ್ರ ಪ್ರಸಂಗವು ಪ್ರಭಾವಶಾಲಿಯಾಗುತ್ತದೆ. ಜಾಳುಗಳು ಉದುರಿಹೋಗುತ್ತವೆ. ಸತ್ವ ಮಾತ್ರ ಉಳಿದು ಆಶಯ ಅನಾವರಣಗೊಳ್ಳುತ್ತದೆ. ಎಲ್ಲಾ ಕಲಾವಿದರು ಸಿದ್ಧ ಜಾಡಿಗಿಂತ ಭಿನ್ನವಾಗಿ ಯೋಚಿಸುತ್ತಿರುವುದು ಶ್ಲಾಘನೀಯ.
            ಪ್ರಸಂಗ ಪದ್ಯಗಳು ಇನ್ನಷ್ಟು ಪರಿಷ್ಕಾರಗೊಳ್ಳಬೇಕಿದೆ ಎನ್ನುವ ನಿಲುವು ಭಾಗವತರದು. ನಿಧಾನಕ್ಕೆ ಸರಿಹೋಗಬಹುದು.  ಮುಂದೆ ಪುಣ್ಯಕೋಟಿ ಯಕ್ಷ ಬಳಗ, ಕಶೆಕೋಡಿ ತಂಡದ ಮೂಲಕ ಪ್ರದರ್ಶನಗೊಳ್ಳುತ್ತದೆ. ಒಂದು ಆಶಯವನ್ನು ಹೊಂದಿದ ಕಾರಣ ಕೆಲವು ಸಮಯದ ವರೆಗೆ ಈ ಪ್ರಸಂಗದ ಆಟ, ಕೂಟಗಳನ್ನು ಈ ತಂಡವೇ ಪ್ರದರ್ಶಿಸುವಂತೆ ಪ್ರಸಂಗಕರ್ತರು ನಿರ್ಧರಿಸಿದ್ದಾರೆ. ಗೋವನ್ನು ಸಾಕುವವರಿಗೆ  ಗೋವಿನ ಮಹತ್ವವ್ನು ತಇಳಿಸಲು ಇದೊಂದು ಪ್ರಯತ್ನ, ಎನ್ನುತ್ತಾರೆ ತಂಡದ ನಿರ್ವಾಹಕ ಗಣರಾಜ ಕೆದಿಲ.
            ಸಾಮಾಜಿಕ ಪ್ರಸಂಗಗಳು ತಾಳಮದ್ದಳೆ, ಆಟಗಳಾಗುತ್ತಿರುವುದು ಹೊಸತಲ್ಲ. ಡಾ.ಅಮೃತ ಸೋಮೇಶ್ವರ ವಿರಚಿತ 'ಘೋರ ಮಾರಕ' (ಕಥಾ ಸಂಗ್ರಹ : ಭಾಸ್ಕರ ರೈ ಕುಕ್ಕುವಳ್ಳಿ) ಪ್ರಸಂಗವು ಕನ್ನಾಡು ಮಾತ್ರವಲ್ಲ ರಾಷ್ಟ್ರದ ರಾಜಧಾನಿಯಲ್ಲೂ ಪ್ರದರ್ಶನ ಕಂಡಿದೆ. ಇಲಾಖೆಗಳ ವರಿಷ್ಠರು ಮೆಚ್ಚಿಕೊಂಡಿದ್ದಾರೆ. ಪ್ರಸಂಗಕರ್ತರನ್ನು, ಕಲಾವಿದರನ್ನು ಬೆನ್ನುತಟ್ಟಿದ್ದಾರೆ. ಏಡ್ಸ್ ರೋಗದ ಸುತ್ತ ಹೆಣೆದ 'ಘೋರ ಮಾರಕ' ಕಥಾನಕವು ಯಕ್ಷಗಾನ ಚೌಕಟ್ಟಿನೊಳಗಿದ್ದು ಆಶಯವನ್ನು ಬಿಂಬಿಸುವಲ್ಲಿ ಸಫಲವಾಗಿದೆ.
        ಹೊಸ್ತೋಟ ಮಂಜುನಾಥ ಭಾಗವತರ 'ನಿಸರ್ಗ ಸಂಧಾನ' ಪ್ರಸಂಗವು ಸಾಕಷ್ಟು ಪ್ರದರ್ಶನ ನೀಡಿದೆ. ಸಾಕ್ಷರತಾ ಆಂದೋಳನ ಸಂದರ್ಭದಲ್ಲಿ ಸುಳ್ಯದ ಡಾ.ಚಂದ್ರಶೇಖರ ದಾಮ್ಲೆ ನೇತೃತ್ವದಲ್ಲಿ 'ಅಕ್ಷರ ವಿಜಯ' ಪ್ರದರ್ಶನಗಳು ಗ್ರಾಮ ಗ್ರಾಮಗಳಲ್ಲಿ ಜರುಗಿವೆ. ಸುಳ್ಯ ಕುಕ್ಕುಜಡ್ಕದ ಎಂ.ಟಿ.ಶಾಂತಿಮೂಲೆಯವರ 'ಕೃಷಿ ವಿಜಯ', ಒಕ್ಕಲು ಮಸೂದೆಯ ಕುರಿತು ಉಪ್ಪಳ ಕೃಷ್ಣ ಮಾಸ್ತರ್ ರಚಿಸಿದ 'ಚಿಕ್ಕ ಬೊಕ್ಕ ಕಾಳಗ'.. ಇಂತಹ ಹತ್ತಾರು ಪ್ರಸಂಗಗಳು ಆಯಾಯ ಕಾಲಘಟ್ಟದಲ್ಲಿ ರಚನೆಯಾಗಿದೆ. ರಂಗ ಪ್ರದರ್ಶನ ಕಂಡಿದೆ. ಈಗ ಈ ಸಾಲಿಗೆ 'ಅಭೀಷ್ಟದಾಯಿನಿ ಗೋಮಾತೆ'.

ದಧಿಗಿಣತೋ / 30-9-2016



No comments:

Post a Comment