Saturday, August 19, 2017

ಮೇಳ ನಿಷ್ಠತೆಯ ಅರುವತ್ತಾರು ಹೆಜ್ಜೆ


ಪ್ರಜಾವಾಣಿಯ 'ದಧಿಗಿಣತೋ' ಅಂಕಣ / 19-5-2017

                 ಗೋವಿಂದ ಭಟ್. ವಯಸ್ಸು ಎಪ್ಪತ್ತೇಳು. ಓದಿದ್ದು ಏಳನೇ ತರಗತಿ. ಧರ್ಮಸ್ಥಳ, ಮೂಲ್ಕಿ, ಕೂಡ್ಲು, ಸುರತ್ಕಲ್ ಇರಾ ಮೇಳಗಳಲ್ಲಿ ಒಟ್ಟು ಅರುವತ್ತಾರು ತಿರುಗಾಟ. ಶ್ರೀ ಧರ್ಮಸ್ಥಳ ಮೇಳವೊಂದರಲ್ಲೇ ಐವತ್ತು ವರುಷಗಳ ವ್ಯವಸಾಯ. ಯಕ್ಷಗಾನದ 'ದಶಾವತಾರಿ' ಸೂರಿಕುಮೇರು ಗೋವಿಂದ ಭಟ್ಟರ ಬಗೆಗೆ ಒಂದು ಪ್ಯಾರವು ವ್ಯಕ್ತಿಯಾಗಿ ಪರಿಚಯಿಸಲು ಸಾಕು. ಕಲಾವಿದನಾಗಿಯೂ ಇಷ್ಟು ವಿವರ ಸಾಕು. ಆದರೆ ಭಟ್ಟರು 'ಕಲಾವಿದ' ಎನ್ನುವ ಒಂದು ಪದದೊಳಗೆ ತನ್ನ ವೃತ್ತಿ ಬದುಕನ್ನು ಕುಬ್ಜಗೊಳಿಸಿಲ್ಲ. ಅದರಾಚೆಗಿನ ಬದುಕಿಗೆ ಕಲಾಸ್ಪರ್ಶವನ್ನು ಕೊಟ್ಟವರು.
               ಬದುಕು ಕಲೆಯಾಗಬೇಕು. ಆಗ ಕಲಾ ಬದುಕಿಗೆ ಹೊಳಪು. ಈ ಹೊಳಪಿನ ಪ್ರಖರದೊಳಗೆ ಈಜುತ್ತಾ ದಡ ಸೇರುವುದು ಸಣ್ಣ ಕೆಲಸವಲ್ಲ. ಗೋವಿಂದ ಭಟ್ಟರಿಗೆ ಆರು ದಶಕ ಬೇಕಾಯಿತು. ಈಜಿದರು, ಮತ್ತೂ ಈಜಿದರು. ಕಲಾ ಬದುಕಿನಲ್ಲಿ ದಡ ಸೇರುವುದು ಎನ್ನುವುದು ದೂರದ ಮಾತು. ಈಜುತ್ತಾ ಇರಬೇಕು. ಸುಸ್ತಾಗಬೇಕು. ಸುಸ್ತು ವೈರಾಗ್ಯದತ್ತ ಹೊರಳಬೇಕು. ಆಗಲೇ ಆನಂದ. ಸಾರ್ಥಕ್ಯದ ಭಾವ.
              ಸಂತೃಪ್ತ ಭಾವ - ಕಲಾವಿದ, ಪ್ರೇಕ್ಷಕ ಇಬ್ಬರಲ್ಲೂ ಏಕಕಾಲಕ್ಕೆ ಮೂಡುವ ಒಂದು ಸ್ಥಿತಿ. ಗೋವಿಂದ ಭಟ್ಟರ ಪಾತ್ರಗಳು ಅಂತಹ ಭಾವಗಳನ್ನು ಹುಟ್ಟುಹಾಕಿವೆ. ಅದನ್ನು ಪಾತ್ರ ಎನ್ನುವುದಕ್ಕಿಂತ ಶಿಲ್ಪ ಎಂದರೆ ಚೆಂದ. ಶಿಲ್ಪ ಮಾತನಾಡುವುದಿಲ್ಲ. ಅದು ಮೌನದಲ್ಲಿ ಹಲವು ಭಾವಗಳನ್ನು ಸೃಷ್ಟಿಸುತ್ತದೆ. ಭಟ್ಟರ ಪಾತ್ರಶಿಲ್ಪವೂ ಹಾಗೆ. ಮಾತನಾಡಬೇಕಾಗಿಲ್ಲ, ಭಾವ ಸ್ಫುರಿಸುತ್ತವೆ. ಶಿಲ್ಪವೇ ನಮ್ಮೊಳಗೆ ಇಳಿದು ಮಾತನಾಡಲು ಶುರು ಮಾಡುತ್ತವೆ.
                ಇವರಿಗೆ 'ಪೂರ್ಣಾವತಾರಿ' ಎನ್ನುವ ಪದ ಒಪ್ಪುತ್ತದೆ. ರಂಗದಲ್ಲಿ ದುಡಿಯುವ ಓರ್ವ 'ತಾನು ಕಲಾವಿದನಲ್ಲ' ಎಂದೆನ್ನಬೇಕಾದರೆ ಅದು ತಪಸ್ಸು! ಕಾಲದ ರೂಪಕ. ಕಾಲಸ್ಥಿತಿಯೊಂದಿಗೆ ಮನಃಸ್ಥಿತಿಯ ಮಿಳಿತ. ತನ್ನ ವೃತ್ತಿಯೊಳಗೆ 'ವೇಷ ಮಾಡುವುದು' ಎನ್ನುವ ಪ್ರಕ್ರಿಯೆ ಮಾತ್ರವಲ್ಲ, ಅದರಾಚೆಗೆ ಸಮಗ್ರ ರಂಗವನ್ನು ನೋಡುವ ನೋಟವಿದೆಯಲ್ಲಾ, ಅದು ರಂಗ ನೀಡಿದ ಬೌದ್ಧಿಕತೆ. ಇಂತಹ ಪಕ್ವತೆಯ ರೂಢನೆಗೆ ಅರುವತ್ತಾರು ವರುಷ ಬೇಕಾಯಿತು.  'ಕಲಾವಿದನಾಗಬೇಕಾದರೆ ತಾನು ಯಕ್ಷಗಾನವೇ ಆಗಬೇಕು. ಆಗ ಪಾತ್ರಗಳು ಮನದೊಳಗೆ ಇಳಿಯುತ್ತವಷ್ಟೇ,' ಇದು ಗೋವಿಂದ ಭಟ್ಟರ ಸ್ವ-ರೂಢಿತ ವ್ಯಕ್ತಿತ್ವ. ಇಂತಹ ವ್ಯಕ್ತಿತ್ವ ರೂಢನೆಗೊಂಡಾಗ ಉಂಟಾಗುವುದೇ ನಿರ್ಲಿಪ್ತತೆ. ನಿಜ ಬದುಕು ನಿರ್ಲಿಪ್ತವಾಗದೆ ಕಲೆಯನ್ನು ಅನುಭವಿಸಲು ಸಾಧ್ಯವಿಲ್ಲ.
               ಒಂದೆಡೆ ಹೇಳುತ್ತಾರೆ - ಕಲಾವಿದರು ವೇಷ ಮಾಡುವುದು ಹೊಟ್ಟೆಪಾಡಿನ ವಿಚಾರ. ಅದು ವೃತ್ತಿ. ಆರಾಧನೆಯೂ ಅಲ್ಲ, ಸೇವೆಯೂ ಅಲ್ಲ. ನಾವೇ ಹೊಸೆದುಕೊಂಡ ವಿಶೇಷಣ. ನನ್ನ ಅಭಿಪ್ರಾಯದಂತೆ 'ಕಲಾವಿದ' ಎನ್ನುವ ಶಬ್ದಕ್ಕೆ ಅರ್ಹರು ಯಾರು? ರಂಗದ ಸರ್ವಾಂಗೀಣ ಅನುಭವ ಯಾರಲ್ಲಿ ಇದೆಯೋ ಆತ ಕಲಾವಿದ. ರಂಗದ ಒಂದೊಂದು ವಿಭಾಗದಲ್ಲಿ ಪರಿಣತನಾದವನಿಗೆ 'ರಂಗಕರ್ಮಿ’ ಎನ್ನುವ ಹೆಸರು ಒಪ್ಪುತ್ತದೆ. ಅದು ಹಿಮ್ಮೇಳ, ಮುಮ್ಮೇಳಕ್ಕೆರಡಕ್ಕೂ ಅನ್ವಯ.
ಬಹಳ ಕಾಲದಿಂದ ಭಟ್ಟರನ್ನು ನೋಡುತ್ತಿದ್ದೇನೆ. ವೇಷಗಳನ್ನು ಅನುಭವಿಸಿದ್ದೇನೆ. ಅರ್ಥಗಾರಿಕೆಯನ್ನು ಮೆಚ್ಚಿದ್ದೇನೆ. ಅವರೊಬ್ಬ ಯಕ್ಷಗಾನ ಕಂಡ 'ಅಪೂರ್ವ, ಅನನ್ಯ.' ಪಾತ್ರವು ತನ್ನ ಸೊಗಸಿಗಾಗಿ ಅವರೊಳಗೆ ಆವಾಹನೆಗೊಳ್ಳುತ್ತದೆ! ತನ್ನ ಸೌಂದರ್ಯವೃದ್ಧಿಗಾಗಿ ಅಪೇಕ್ಷಿಸುತ್ತದೆ. ನಿಜಗುಣವನ್ನು ಅಭಿವ್ಯಕ್ತಿಸಲು ಪ್ರೋತ್ಸಾಹಿಸುತ್ತಿದೆ.
                 ಈಚೆಗೆ ಚೌಕಿಗೆ ಪ್ರವೇಶವಾದರೆ ಸಾಕು, ರಂಗ ಮತ್ತು ಪಾತ್ರಗಳ ಬಗ್ಗೆ ಹಗುರವಾಗಿ ಮಾತನಾಡುವ ಸಾಕಷ್ಟು ಮಂದಿಯ ಪರಿಚಯವಿದೆ. ಗೋವಿಂದ ಭಟ್ಟರ ವ್ಯಕ್ತಿತ್ವದಲ್ಲೇ ರಂಗದ ಕುರಿತು ವಿಷಾದವಿಲ್ಲದ ನಿಲುವನ್ನು ನೋಡಿ ಆಶ್ಚರ್ಯಪಟ್ಟಿದ್ದೇನೆ. ಬದುಕನ್ನು ಮತ್ತು ರಂಗವನ್ನು ಅಧ್ಯಯನ ಮಾಡುತ್ತಾ ಬೆಳೆದ ಭಟ್ಟರ ಅಧ್ಯಯನಶೀಲ ಚಿಕಿತ್ಸಕ ದೃಷ್ಟಿ ಅಜ್ಞಾತ. ಅದು ಎಂದಿಗೂ ಎಂದೆಂದಿಗೂ ಮೌನ. ಮಾತಾದರೆ ಬೊಗಸೆಯಷ್ಟು ಮೊಗೆಯಬಹುದಷ್ಟೇ.
                ಒಂದು ಪಾತ್ರವೆಂದರೆ ಪದ್ಯಕ್ಕೆ ಕುಣಿದರಾಯಿತು, ಕುಣಿದ ಬಳಿಕ ಮಾತನಾಡಿದರಾಯಿತು ಎನ್ನುವ ವರ್ತಮಾನದ ಮನಃಸ್ಥಿತಿ ಇದೆಯಲ್ಲಾ, ಅದು ಗೋವಿಂದ ಭಟ್ಟರಿಗಿಂತ ಮಾರು ದೂರವಿದೆ. ಪದ್ಯದ ಒಂದೊಂದು ಪದಗಳ ಅಭಿನಯ ಪಾತ್ರಗಳಾಗುತ್ತದೆ. ರಂಗದಲ್ಲಿ ನಿಲ್ಲುವ ನಿಲುವು ಕೂಡಾ ಪಾತ್ರ. ಮಾತು ಕೂಡಾ ಒಂದು ಪಾತ್ರ. ಹೀಗೆ ಹಲವು ಪಾತ್ರಗಳ ಸಂಗಮವೇ ಗೋವಿಂದ ಭಟ್ಟರ ಪಾತ್ರಾಭಿವ್ಯಕ್ತಿ. ಹಾಗಾಗಿ ಅವರು ಪೂರ್ಣಾವತಾರಿ.
               ರಂಗಾಭಿವ್ಯಕ್ತಿ ಹೇಗಿರಬೇಕು ಎಂಬ ಕುಟುಕು ಪ್ರಶ್ನೆಯನ್ನು ಕೇಳಿದ್ದೆ, "ಅಭಿವ್ಯಕ್ತಿಗೆ ಪುರಾಣಗಳ ಓದು ಮುಖ್ಯ. ಪಾತ್ರಗಳ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಇದಕ್ಕೆ ನಮ್ಮ ಕಲ್ಪನೆಯನ್ನು ನಿರ್ಧಾರಗೊಳಿಸಿ ಮಿಳಿತಗೊಳಿಸಬೇಕು. ಬಳಿಕ ರಂಗದಲ್ಲಿ ಅಭಿವ್ಯಕ್ತಿಸಬೇಕು. ಪಾತ್ರದ ಸ್ವಭಾವ ತಿಳಿಯದೆ, ಅರ್ಥವಾಗದೆ ಅಭಿವ್ಯಕ್ತಿ ಅಸಾಧ್ಯ.  ಪುರಾಣ ಅಧ್ಯಯನ, ಅನುಭವಿಗಳ ಜತೆ ಮಾತುಕತೆ, ಹಿಂದಿನ ಕಲಾವಿದರ ಬೌದ್ಧಿಕತೆ ಇದನ್ನೆಲ್ಲಾ ಅಭ್ಯಸಿಸಬೇಕು. ನಾನು ಹಿಂದೆ ಹೇಳಿದ್ದನ್ನೇ ಪುನಃ ಅವರ್ತನೆ ಮಾಡ್ತೇನೆ - 'ಜನಜೀವನದಂತೆ ರಂಗ ಇರುತ್ತದೆ, ಇರಬೇಕು.' ಅದನ್ನು ಪುರಾಣಗಳ ಪಾತ್ರಗಳಲ್ಲಿ ಧ್ವನಿಸುತ್ತೇವೆ ಅಷ್ಟೇ. ಉದಾಃ ರಾಮ ಹೇಗಿರಬೇಕು? ನಾವು 'ನಮ್ಮ ತಂದೆ ತಾಯಿಗಳ ಜತೆ ಹೇಗಿರುತ್ತೇವೆ' ಎನ್ನುವ ಭಾವ ಇದೆಯಲ್ಲಾ, ಇದು ಅಭಿನಯಕ್ಕೆ ಮೂಲ.
              ತೆಂಕುತಿಟ್ಟು ರಂಗದಲ್ಲಿ 'ಪುರಾಣ ಪಾತ್ರ ಹೇಗಿರಬೇಕು' ಎನ್ನುವುದಕ್ಕೆ ಗೋವಿಂದ ಭಟ್ಟರ ವೇಷಗಳನ್ನು ತೋರಿಸುವಷ್ಟು ರಂಗದೊಳಗೆ ಆಳವಾಗಿ ಇಳಿದು ಬೇರು ಬಿಟ್ಟಿದ್ದಾರೆ. ಆ ಬೇರಿನ ತಾಯಿ ಬೇರು ಗಟ್ಟಿಯಾಗಿದೆ. ಗಟ್ಟಿಗರೊಂದಿಗೆ ಬೆಳೆದ ಬೌದ್ಧಿಕತೆಯು ಹುಟ್ಟು ಹಾಕಿದ ಸ್ಥಿತಿಯಿದು. ಹೊಗಳಿಕೆಯನ್ನು ನವಿರಾಗಿ ಬದಿಗೆ ಸರಿಸುವ, ಅಪ್ಪಟ ವಿಮರ್ಶೆಗೆ ಕಿವಿ ತೆರದುಕೊಳ್ಳುತ್ತಾ, ತೆಗಳಿಕೆಯನ್ನು ತನಗೆ ಸಂಬಂಧಪಟ್ಟದ್ದಲ್ಲ ಎಂದು ಪ್ರತ್ಯಪ್ರತ್ಯೇಕವಾಗಿ ವಿಭಾಗಿಸಿ ನೋಡಲು ಗೋವಿಂದ ಭಟ್ಟರಿಗೆ ಅರುವತ್ತಾರು ವರುಷ ಬೇಕಾಯಿತು.
               ಯಕ್ಷಗಾನ ಕ್ಷೇತ್ರದಲ್ಲಿ ಅರುವತ್ತು ತಿರುಗಾಟ ಎನ್ನುವುದು ಹಿರಿದಾದ ವಿಚಾರ. ಬಣ್ಣದ ಬದುಕಿನ ಐದು ವರುಷ, ಹತ್ತು ವರುಷ, ವಿಂಶತಿ, ರಜತ, ಸುವರ್ಣ.. ಹೀಗೆ ಹಲವು ರಂಗ ಸಂಭ್ರಮಗಳನ್ನು ಆಚರಿಸಿದ ಕಲಾವಿದರೆಲ್ಲರಿಗೂ ಗೋವಿಂದ ಭಟ್ಟರು ಆದರ್ಶ. ಈಗ ಗೋವಿಂದ ಭಟ್ಟರು ಹೊಸ ಆದರ್ಶವೊಂದರ ಸ್ಥಾಪನೆಗೆ ಹೆಜ್ಜೆ ಊರಿದ್ದಾರೆ. 'ತನಗೆ ಸಂಮಾನ ಸಾಕು' ಎನ್ನುವ ಸಂದೇಶದೊಂದಿಗೆ ಹೊಸದಾದ ಹಾದಿ ತೆರೆದಿದ್ದಾರೆ. ತನ್ನ ಏಳ್ಗೆಗೆ ಸಮ್ಮನಸ್ಸಿನ ಶಿಲ್ಪಿಗಳಾಗಿರುವವರನ್ನು ಸ್ವತಃ ಗೌರವಿಸುವ ಪರಿಪಾಠಕ್ಕೆ ಶ್ರೀಕಾರ. ಮನದ ಭಾವವನ್ನು ಮಾತಿಗೆ ಸೀಮಿತಗೊಳಿಸದೆ ಅದಕ್ಕೆ ಸಾಕಾರತೆಯನ್ನು ತರುವ ನಿರ್ಧಾರ. ಇದಕ್ಕಾಗಿ ಉಜಿರೆಯ ಜನಾರ್ದನ ದೇವಸ್ಥಾನದಲ್ಲಿ ವೇದಿಕೆ ಸಜ್ಜಾಗಿದೆ. ಮೇ 21, 22ರಂದು ದಿನಪೂರ್ತಿ 'ಗೋವಿಂದ ಕಲಾಭಾವಾರ್ಪಣಂ' ಕಲಾಪ.
             ಡಾ.ವೀರೇಂದ್ರ ಹೆಗ್ಗಡೆ ದಂಪತಿಗೆ 'ಕಲಾಭಾವಾರ್ಪಣಂ ಗೌರವ', ಹರ್ಶೇಂದ್ರ ಕುಮಾರ್ ದಂಪತಿಗೆ 'ಕಲಾಜೀವನ ಗೌರವ', ಟಿ.ಶ್ಯಾಮ ಭಟ್ ದಂಪತಿಗೆ 'ಕಲಾಧರ್ಮ ಗೌರವ', ಕುರಿಯ ವೆಂಕಟ್ರಮಣ ಶಾಸ್ತ್ರಿಗಳಿಗೆ 'ಗುರು ಕುರಿಯ ಸ್ಮೃತಿ ಗೌರವ', ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಗೆ 'ಆದ್ಯ ಪೋಷಕ ಸ್ಮೃತಿ ಗೌರವ,' ಪ್ರದಾನ. ಇವರೆಲ್ಲಾ ಗೋವಿಂದ ಭಟ್ಟರ ಕಲಾಯಾನಕ್ಕೆ ತುಂಬು ಬೆಂಬಲ, ಪ್ರೋತ್ಸಾಹವನ್ನು ನೀಡಿದ ಕಾರಣವೇ ಯಕ್ಷರಂಗದಲ್ಲಿ 'ಪೂರ್ಣಾವತಾರಿ'ಯಾಗಲು ಸಾಧ್ಯವಾಯಿತು.
               ಗೋವಿಂದ ಭಟ್ಟರಿಗೆ ಎಪ್ಪತ್ತೇಳು. ಕಾಲದ ಓಟಕ್ಕೆ ಗೋವಿಂದಣ್ಣ ತಲೆ ಬಾಗಿದ್ದಾರೆ. ಕಲೆಯ ನಿಷ್ಠತೆಯನ್ನು, ಮೇಳ ನಿಷ್ಠತೆಯನ್ನು ಮೆರೆದಿದ್ದಾರೆ.  'ನನಗೆ ರಂಗವೇ ಉಸಿರು' ಎಂದಿದ್ದ ಅವರ ಮಾತು ನಿತ್ಯ ಕಾಡುತ್ತದೆ.
ಚಿತ್ರ : ರಾಮ್ ನರೇಶ್ ಮಂಚಿ

No comments:

Post a Comment