Monday, August 7, 2017

ರಂಗಕಸುಬಿಗೆ ದ್ರೋಹ ಬಗೆಯದ - ದಾಸರಬೈಲು

ಪ್ರಜಾವಾಣಿ 'ದಧಿಗಿಣತೋ' ಅಂಕಣ /17-3-2017

             ಭಾಗವತ ದಾಸರಬೈಲು ಚನಿಯ ನಾಯ್ಕರು (Dasarabil chaniya Naik) 7-8-1999 ದೂರವಾದರು. ಬಹುಶಃ ಆಗವರ ವಯಸ್ಸು 55-60ರ ಆಜೂಬಾಜು. ಚುಂಬಕ ಶಕ್ತಿಯ ಶಾರೀರದಿಂದ ಯಕ್ಷಲೋಕದಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದರು. ಯಾವ ಶಾರೀರವು ಅವರಿಗೆ ಖ್ಯಾತಿಯನ್ನು ತಂದು ಕೊಟ್ಟಿತೋ, ಅದೇ ಶಾರೀರ ಅವರ ಬದುಕನ್ನೂ ಕಸಿದುಬಿಟ್ಟಿತ್ತು! ಗತಿಸಿ ಹದಿನೆಂಟು ವರುಷವಾಯಿತು. ಅವರ ಒಡನಾಟದಲ್ಲಿದ್ದ ಅನೇಕರಿಗೆ, ಅವರ ಭಾಗವತಿಕೆಗೆ ವೇಷಮಾಡಿದ್ದ, ಅರ್ಥಹೇಳಿದ್ದ ಕಲಾವಿದರಿಗೆ ನಾಯ್ಕರ ನೆನಪು ಸದಾ ಹಸಿರು. ಸುಳ್ಯ, ಪುತ್ತೂರು, ಕಾಸರಗೋಡು.. ಪ್ರದೇಶದಲ್ಲಿ ನಿಜಾರ್ಥದ 'ಯಕ್ಷಕೋಗಿಲೆ'ಯಾಗಿ ಹಾಡಿದರು, ವೇಷವನ್ನು ಕುಣಿಸಿದರು. ತನ್ನ ಸಾತ್ವಿಕ ವ್ಯಕ್ತಿತ್ವದಿಂದ ನೂರಾರು ಅಲ್ಲ, ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದರು. ಚನಿಯ ನಾಯ್ಕರಿಗೆ ಬರಲಾಗುವುದಿಲ್ಲ ಎಂದಾದರೆ ಆಟ ಯಾ ಕೂಟವನ್ನು ಮುಂದೂಡುವ ಸಂಘಗಳು, ಅಭಿಮಾನಿಗಳಿದ್ದರು. (ಆಗಿನ 'ಅಭಿಮಾನಿ' ಅಂದರೆ ಕಲಾವಿದರಷ್ಟೇ ರಂಗವನ್ನೂ ಅಭಿಮಾನದಿಂದ ಕಾಣುವ ಪ್ರೇಕ್ಷಕ ವರ್ಗ)
              ಚನಿಯರ ಭಾಗವತಿಕೆಯಲ್ಲಿ ಮೂವರು ಗಣ್ಯರ ಪ್ರಭಾವ ನಿಚ್ಚಳವಾಗಿತ್ತು. ಒಬ್ಬರು ಹಿರಿಯರಾದ ಅಜ್ಜನಗದ್ದೆ ಗಣಪಯ್ಯ ಭಾಗವತರು. ಭಜನಾ ಹಾಡುಗಾರರಾಗಿದ್ದ ಚನಿಯರು ಅಜ್ಜನಗದ್ದೆಯವರಲ್ಲಿ ಯಕ್ಷಗಾನದ ಅಭ್ಯಾಸ ಮಾಡುತ್ತಿದ್ದಂತೆ ಅವರೊಳಗಿನ ಭಾವಕೋಶವು ಯಕ್ಷಗಾನ ಹಾಡುಗಳಿಗೆ ತಲೆದೂಗಿತು. ಮತ್ತೆ ಹಾಡುವಾಗಲೆಲ್ಲಾ ಭಾವವು ಸದಾ ಎಚ್ಚರ. ಅಜ್ಜನಗದ್ದೆಯವರ ಪದ್ಯವನ್ನು ಕೇಳಿದವರು ಚನಿಯರ ಭಾಗವತಿಕೆಯಲ್ಲಿ ಅವರನ್ನು ಗುರುತಿಸುತ್ತಿದ್ದರು. ಇನ್ನೊಬ್ಬರು ಅಗರಿ ಶ್ರೀನಿವಾಸ ಭಾಗವತರ ಪ್ರಭಾವ. ಇವರಿಬ್ಬರೂ ಭಜನೆಯ ಹಿನ್ನೆಲೆಯಿಂದ ಬಂದವರು.
               ಕಲಾವಿದ, ಉಪನ್ಯಾಸಕ ವೆಂಕಟರಾಮ ಸುಳ್ಯ ಇವರು ಅಗರಿ, ದಾಸರಬೈಲು ಅವರ ಶೈಲಿಗಳನ್ನು ಮುಂದಿಟ್ಟು ಅದರಲ್ಲಿ ಚನಿಯರ ಶೈಲಿಯನ್ನು ಕಂಡುದು ಹೀಗೆ : ತಾಳಸಂಬಂಧಿಯಾದ ಪದ್ಯದ ಲಾಲಿತ್ಯದಲ್ಲಿ ಅಗರಿ ಭಾಗವತರಿಗೂ ಚನಿಯ ಭಾಗವತರಿಗೂ ಸಾಕಷ್ಟು ಸಾಮ್ಯವಿದೆ. ತಾಳದ ಕೊನೆಯ ಘಾತದಿಂದ ಪದ್ಯವನ್ನಾರಂಭಿಸುವ ರೀತಿ ಮತ್ತು ಲಯದ ಖಚಿತತೆಯಲ್ಲಿ ಅವರಲ್ಲಿ ಅಗರಿಯವರನ್ನು ಕಾಣಬಹುದಿತ್ತು. ಅವರ ತಾಳದ ಗತಿ ತಾಳದೊಂದಿಗೆ ಪದದ ಶಬ್ದಗಳು ಬೆರೆಯುವ ರೀತಿಯಿಂದಾಗಿ ರಂಗಸ್ಥಳದ ವೇಷಗಳು ಮಾತ್ರವಲ್ಲ, ಪ್ರೇಕ್ಷಕರೂ ಕುಣಿಯುವಂತಾಗುತ್ತಿತ್ತು. ಮತ್ತೊಬ್ಬರು ಕಡತೋಕ ಮಂಜುನಾಥ ಭಾಗವತರು. ಶ್ರೀ ಧರ್ಮಸ್ಥಳ ಮೇಳದಲ್ಲಿ ಅಲ್ಪ ಕಾಲ ಇವರೊಂದಿಗೆ ತಿರುಗಾಟ. ವೇಷಧಾರಿಯನ್ನು ರಂಗಸ್ಥಳದಲ್ಲಿ ದುಡಿಸಿಕೊಳ್ಳಲು ಕಡತೋಕರು ನಿಪುಣರು. ಚನಿಯರು ವೇಷಧಾರಿಯ ಸಾಮಥ್ರ್ಯವನ್ನು ಅನುಸರಿಸಿ ಪದ್ಯವನ್ನು ಕೊಡುವಲ್ಲಿ ಜಾಣರು. ನಾಯ್ಕರ ಶೃಂಗಾರ, ಕರುಣ, ವೀರ ರಸಗಳ ಸನ್ನಿವೇಶಗಳು ಅನನ್ಯ.
            ಯಕ್ಷಗಾನ ಪ್ರಸಂಗಗಳ ನಿರಂತರ ಓದು ನಾಯ್ಕರ ರಂಗ ಗಟ್ಟಿತನಕ್ಕೆ ಕಾರಣ. ಕವಿಯ ಆಶಯ, ಪಾತ್ರಗಳ ಸ್ವಭಾವ, ಪೂರಕವಾದ ದೃಶ್ಯಗಳನ್ನು ಮನನಿಸಿ ಭಾಗವತಿಕೆ ಮಾಡುತ್ತಿದ್ದರು. ಚಾಲ್ತಿಯಲ್ಲಿರುವ ಬಹುತೇಕ ಪ್ರಸಂಗಗಳು ಕಂಠಸ್ತವಾದರೂ ಪುಸ್ತಕ ಎದುರಿಲ್ಲದೆ ಹಾಡುತ್ತಿರಲಿಲ್ಲ. ಬಿಡುವಿನ ಅವಧಿಯಲ್ಲಿ ಪುರಾಣ ಪುಸ್ತಕಗಳ ಓದುವಿಕೆ ಅವರನ್ನು ಬೌದ್ಧಿಕವಾಗಿ ಪಕ್ವವಾಗಿಸಿತ್ತು. ಅವರಲ್ಲಿ ಕಥಾ ಹಂದರವನ್ನು ಕೇಳಿದ ಕಲಾವಿದನಿಗೆ ಪದ್ಯ, ಅದರ ಅರ್ಥ, ರಂಗಚಲನೆ ಇವೆಲ್ಲವನ್ನೂ ತಾಳ್ಮೆಯಿಂದ ಅರ್ಥವಾಗುವಂತೆ ಹೇಳುತ್ತಿದ್ದ ದೊಡ್ಡ ಗುಣವಿತ್ತು.
             ಚನಿಯರ ತಾಳವು ಲಯಬದ್ಧ. ಅವರು ತಾಳ ಹಾಕುವಾಗ ಎಂದೂ ಪೆಟ್ಟುಗಳನ್ನು ನುಂಗಿದವರಲ್ಲ. ಕಲಿಕಾ ಹಂತದ ಮದ್ದಳೆಗಾರನೂ ಸಲೀಸಾಗಿ ಮದ್ದಳೆ ನುಡಿಸಬಹುದಾಗಿತ್ತು. ಪಾತ್ರಧಾರಿಯೊಳಗಿದ್ದ ಅಂತಃಸತ್ವವನ್ನು ಹೊರಗೆಳೆವ ವಿಶೇಷ ಶಕ್ತಿ ಹಾಡಿಗಿತ್ತು. ಪ್ರೇಕ್ಷಕನಿಗೆ ಹಿತಾನುಭವ ನೀಡುತ್ತಿತ್ತು. ಹಿಂದೆ ಮುಂದೆ ಓಡುವ ಚೆಂಡೆ, ಮದ್ದಳೆಗಾರರನ್ನು ಎಳೆದು ಹಳಿಯಲ್ಲಿ ಓಡುವಂತೆ ಮಾಡುವ ತಾಕತ್ತಿತ್ತು. ಹಾಗಾಗಿ ಮದ್ದಳೆ, ಚೆಂಡೆ ವಾದಕರು ವೃತ್ತಿಪರರಿರಲಿ, ಹವ್ಯಾಸಿಗಳಿರಲಿ, ಕೆಲವೊಮ್ಮೆ ಅನುಭವ ಪರಾಕಾಷ್ಠೆಗೇರಿ ವಿಷಮ ಬಾರಿಸುವವರು ಸಿಕ್ಕರೂ ಚನಿಯರು ಅಧೀರರಾಗುತ್ತಿರಲಿಲ್ಲ.
            ಭಾಗವತ ಪದ್ಯಾಣ ಗಣಪತಿ ಭಟ್ಟರಿಗೆ ಚನಿಯ ನಾಯ್ಕರು ರಂಗದಲ್ಲಿ ಗುರು. ಒಂದು ವರುಷ ಚೌಡೇಶ್ವರಿ ಮೇಳದಲ್ಲಿ ಅವರೊಂದಿಗೆ ತಿರುಗಾಟ ಮಾಡಿದ್ದೆ. ಮೇಳದಲ್ಲಿ ಪ್ರಸಂಗದ ನಡೆಯ ಪ್ರತ್ಯಕ್ಷ ಪಾಠ ಮಾಡಿದ್ದರು. ಅಠಾಣ, ಸಿಂಹೇಂದ್ರ ಮಧ್ಯಮ, ಮಧ್ಯಮಾವತಿ, ಕಾಂಬೋಜಿ, ನಾಟಿ, ಭೈರವಿ, ಆರಭಿ, ಮೋಹನ, ಸಾವೇರಿ, ಷಣ್ಮುಖಪ್ರಿಯ, ಪಂತುರಾವಳಿ, ಬಿಲಹರಿ, ಸುರುಟಿ, ಕಾನಡ ಮೊದಲಾದ ರಾಗಗಳಲ್ಲಿ ಹಾಡುವಾಗ ಚನಿಯರು ನೆನಪಾಗುತ್ತಾರೆ. ಅವರ ಐದಾರು ರಾಗಗಳನ್ನು ನಾನು ಅನುಕರಿಸುತ್ತೇನೆ. ರಾಗಗಳಲ್ಲಿ ವಂಚನೆ (ಸರ್ಕಸ್) ಇರಲಿಲ್ಲ. ಅವರ ಪದ್ಯದಲ್ಲಿ ರಾಗ, ತಾಳ, ಲಯ, ಗತಿ ಅದ್ಭುತವಾಗಿ ಇದ್ದುವು, ಎನ್ನುತ್ತಾರೆ.
              ನನ್ನ ಕಲಾ ಬದುಕಿನಲ್ಲಿ ತಾಳಮದ್ದಳೆ ನಡೆಯುತ್ತಿದ್ದಂತೆ ಅಸಹನೆಯಿಂದ ಜಾಗಟೆಯನ್ನು ಕೆಳಗಿಟ್ಟು ನಡೆದ ಭಾಗವತರನ್ನು ನೋಡಿದ್ದೇನೆ. ಮದ್ದಳೆ, ಚೆಂಡೆ ನುಡಿಸುತ್ತಿದ್ದಂತೆ ಪರಿಕರಗಳನ್ನು ಬಿಟ್ಟು ಓಡಿದ ಕಲಾವಿದರನ್ನು ನೋಡಿದ್ದೇನೆ. ಇಂತಹ 'ಕಲಾದ್ರೋಹ'ವನ್ನು ಚನಿಯ ನಾಯ್ಕರು ಎಂದೂ ಮಾಡಿದ್ದಿಲ್ಲ. ಅದು ಅವರ ಸಂಸ್ಕಾರ. ಕಲೆಯ ಮೇಲೆಯ ಶ್ರದ್ಧೆ. ಕಪ್ಪಂಚಿನ ಕನ್ನಡಕ, ಎತ್ತರಕ್ಕೆ ಬಾಚಿದ ತಲೆಕೂದಲು, ಕುಂಕುಮದ ದೊಡ್ಡ ತಿಲಕ, ಶ್ವೇತ ಉಡುಪು, ಹಸಿರು ಯಾ ಕೆಂಪು ಶಾಲು, ಕೈಯಲ್ಲಿ ಜಾಗಟೆ-ಪುಸ್ತಕ ಹಿಡಿದು, ಸ್ವಸ್ತಿಕಕ್ಕೆ ನಮಸ್ಕರಿಸಿ, ರಂಗದಲ್ಲಿ ಚೆಂಡೆ-ಮದ್ದಳೆಗೆ-ಕಲಾವಿದರಿಗೆ ನಮಿಸಿದ ಬಳಿಕವೇ ರಂಗವೇರುತ್ತಿದ್ದರು. ಯಕ್ಷಗಾನವನ್ನು ಆರಾಧ್ಯ ಕಲೆ ಎಂದು ಸ್ಪಷ್ಟವಾಗಿ ನಂಬಿದ ಚನಿಯರು ಅದರಂತೆ ನಡೆದುಕೊಳ್ಳುತ್ತಿದ್ದರು.
             ಕೆಲವರು ತಮಾಶೆಗಾಗಿ ಹೇಳುತ್ತಿದ್ದರು, 'ಒಂಜಿ ಪದ್ಯ ಪನ್ಲೆ ಬಾಗವತೆರೆ'. (ಒಂದು ಪದ ಹೇಳಿ ಭಾಗವತರೆ). ಅದಕ್ಕವರ ಉತ್ತರ ನೋಡಿ, ಕಂಡವರ ಮುಂದೆಲ್ಲ ಪದ ಹೇಳುವುದಕ್ಕೆ ಕಲೆಯೆಂಬುದು ಬಿಕರಿಗಿಟ್ಟ ವಸ್ತುವಲ್ಲ ಎಂದು ಖಾರವಾಗಿ ಉತ್ತರಿಸುತ್ತಿದ್ದರು. ಅಪಮಾನವನ್ನು ಸಹಿಸದ ಸ್ವಾಭಿಮಾನ. ಅವರ ಮೇಳ ಜೀವನ ಎಲ್ಲರಂತಲ್ಲ. ಟೆಂಟ್ ಊರುವ ಕೆಲಸವನ್ನೂ ಮಾಡಿದ್ದರು. ಹಿರಿಯ ಕಲಾವಿದರ 'ಸೇವೆ' ಮಾಡುತ್ತಾ ಕಲಿತರು, ಬಲಿತರು. ತನ್ನ ಬಡತನ, ಸಾಮಾಜಿಕ ಸ್ಥಾನಮಾನ ಮತ್ತು ಇತರರಿಗೂ ತನಗೂ ಇರುವ ಅಂತರವನ್ನು ಚನಿಯರು ಪಾಲಿಸುತ್ತಿದ್ದುದರಿಂಲೋ ಏನೋ ಯಕ್ಷಗಾನದ ಮುಖ್ಯವಾಹಿನಿಯಿಂದ ಅವರು ದೂರವೇ ಇರಬೇಕಾಯಿತು.  ಅವರನ್ನು ಹತ್ತಿರದಿಂದ ಬಲ್ಲ ಸಾಹಿತಿ ಕೃ.ಶಾ.ಮರ್ಕಂಜ ಒಂದೆಡೆ ಉಲ್ಲೇಖಿಸುತ್ತಾರೆ, "ಹೆಸರಾಂತ ಅರ್ಥಧಾರಿಗಳ ಮಡಿವಂತಿಕೆ, ನಾಯ್ಕರ ಜಾತಿ, ಬಾಹ್ಯ ಸೌಂದರ್ಯ, ತೀವ್ರ ಬಡತನ ಇತ್ಯಾದಿಗಳು ಕಾರಣವಾಗಿಯೇ ಏನೋ ಚನಿಯರಲ್ಲಿ ಒಂದು ರೀತಿಯ ಹಿಂಜರಿಕೆಯಿತ್ತು. ಇದಕ್ಕೆ ರಂಗದಲ್ಲಿ ಆದ ಅವಮಾನವೇ ಕಾರಣ. ಮತ್ತೆಂದೂ ದೊಡ್ಡ ಸೆಟ್ಟು ಎಂದು ಕರೆಯಲ್ಪಡುತ್ತಿದ್ದ ಕೂಟಗಳಿಂದ ದೂರವಿರುತ್ತಿದ್ದರು."
           ನಾಯ್ಕರು ಶ್ರೀಮಂತರಲ್ಲ. ಬಡತನವಿದೆಯೆಂದು ಕಲೆಯನ್ನು ಹಿಗ್ಗಾಮುಗ್ಗಾ ಜಗ್ಗಲಿಲ್ಲ. ಕಲೆಯನ್ನು ಆರಾಧಿಸುತ್ತಾ ಬೆಳೆದರು. ಸಂಮಾನಗಳ ಕುರಿತು ಅವರಿಗೆ ಅಷ್ಟೊಂದು ಒಲವು ಕಡಿಮೆಯಿತ್ತು. ಕೀರ್ತಿಶೇಷರಾದ ಪ್ಯಾರ್ ನಾವೂರರಲ್ಲಿ ಚನಿಯರು ಹೇಳಿದ ಮಾತು ನೆನಪಾಗುತ್ತದೆ, "ನಾನು ಕಲಿತ ವಿದ್ಯೆಗೆ, ನನ್ನಲ್ಲಿರುವ ಪ್ರತಿಭೆಗೆ ಗೌರವ ಸಂದಿದೆಯೇ ಹೊರತು ಈ ವಿದ್ಯೆಯನ್ನು ಕರಗತ ಮಾಡಿಕೊಳ್ಳಲು ಶ್ರಮವಹಿಸಿ, ಕಷ್ಟ ನಿಷ್ಠುರಗಳನ್ನು ಸಹಿಸಿದ ನನ್ನ ವೈಯಕ್ತಿಕ ಭವಿಷ್ಯಕ್ಕೆ ಇದರಿಂದೇನು ಪ್ರಯೋಜನ?" ಎಂದಿದ್ದರು. 1998-99ರ ಕಾಲಘಟ್ಟದ ಸಂಮಾನಗಳ ಸ್ಥಿತಿ ಹೇಗಿತ್ತು ಎನ್ನುವುದು ಅವರ ಮಾತಿನಲ್ಲಿ ಧ್ವನಿತವಾಗಿತ್ತು.
            ವರ್ತಮಾನದ ಭಾಗವತಿಕೆಯನ್ನು ವಿಮರ್ಶಿಸುವುದು ಅಪರಾಧವಾಗಿಬಿಡುತ್ತದೆ! ರಂಗದಲ್ಲಿ ಏನು ಆಗುತ್ತದೋ ಅದನ್ನು ಒಪ್ಪಿಕೊಳ್ಳಬೇಕಾದ ಒತ್ತಡವಿದೆ. ಸಾಹಿತ್ಯ, ತಾಳ, ರಾಗ, ಲಯ ಮತ್ತು ಯಕ್ಷಗಾನ ಮಟ್ಟುಗಳನ್ನು ಏದುಸಿರುಗೊಳಿಸಿ, ರಂಗವು ವಿಜೃಂಭಿಸುವ (!) ಕಾಲಘಟ್ಟದಲ್ಲಿ ಚನಿಯರು ನೆನಪಾದರು. ಅವರ ಒಂದೊಂದು ಪದ್ಯಗಳನ್ನು ಮನನಿಸಿದಾಗ ಪ್ರಸ್ತುತ 'ಮಟ್ಟು' ಎನ್ನುವುದು ಅರ್ಥವನ್ನೇ ಕಳೆದುಕೊಂಡಿದೆಯೋ ಎನ್ನುವ ಭಯ ಕಾಡಿತು!

No comments:

Post a Comment