Friday, August 4, 2017

ನಿಷ್ಕಪಟ ಕಲಾನಿಷ್ಠೆಯ ಬರೆಪ್ಪಾಡಿ

ಪ್ರಜಾವಾಣಿಯ 'ದಧಿಗಿಣತೋ' / 28-7-2017
  
               1991ನೇ ಇಸವಿ. ಪುತ್ತೂರಿಗೆ ನಾನು ಹೊಸಬ. ಹೊಟ್ಟೆಪಾಡಿಗಾಗಿ ವೃತ್ತಿಗೆ ಹೆಜ್ಜೆಯಿಟ್ಟ ಸಂದರ್ಭ. ಯಕ್ಷಗಾನ ಹವ್ಯಾಸಕ್ಕೆ ಶ್ರೀಕಾರ ಬರೆದ ಸಮಯ. ಒಂದೆರಡು ತಿಂಗಳು ಕಳೆದಿರಬಹುದಷ್ಟೇ. ಬರೆಪ್ಪಾಡಿ ಅನಂತಕೃಷ್ಣ ಭಟ್ಟರಿಗೆ (ಅನಂತಣ್ಣ) ಹೇಗೋ ತಿಳಿಯಿತು. ತಾಳಮದ್ದಳೆಗೆ (ಕೂಟ) ಆಹ್ವಾನಿಸಲು ಆಗಮಿಸಿದ್ದರು. ಸುಮಾರು ಒಂದೂವರೆ ಗಂಟೆಯ ಉಭಯ ಕುಶಲೋಪರಿ. ಅಷ್ಟು ಹೊತ್ತಿಗೆ ಅನಂತಣ್ಣ ಮನದೊಳಗೆ ಇಳಿದಿದ್ದರು. ನಂತರ ಬಹುಕಾಲ ಆಟ, ಕೂಟಗಳಲ್ಲಿ ಒಡನಾಟವಿತ್ತು.
                 2017 ಜುಲೈ 27  ಅನಂತಣ್ಣ ದೂರವಾದರು. ಒಡನಾಟದ ನೆನಪುಗಳು ಮತ್ತೆ ಮತ್ತೆ ರಾಚುವುದಕ್ಕೆ ತೊಡಗಿದುವು. ಪುತ್ತೂರು ಬೊಳ್ವಾರಿನ ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಕಾರ್ಯದರ್ಶಿಯಾಗಿ ಕಾಲು ಶತಮಾನ ಯಕ್ಷಧ್ವನಿಯನ್ನು ಪಸರಿಸಿದ ಅನಂತಣ್ಣ ಹವ್ಯಾಸಿಗಳ ಪಾಲಿಗೆ ಕೈತಾಂಗು. ಪುತ್ತೂರಿಗೆ ಹೊಸಬರು ಬಂದರೆ ಅವರ ಚಿತ್ತಕ್ಕೆ ಹೇಗೋ ತಿಳಿದುಬಿಡುತ್ತದೆ! ಅವರನ್ನು ಹುಡುಕಿ ಸಂಘದ ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅರ್ಥ ಹೇಳಿಸಿ ಖುಷಿ ಪಡುತ್ತಿದ್ದರು.
                 ಯಕ್ಷಗಾನ ಸಂಘವು ಸರ್ವಸ್ವ. ಯಕ್ಷಗಾನವನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಸಂಘಕ್ಕೂ ಮಣೆ. ಪಾಕ್ಷಿಕವಾಗಿ ನಿರಂತರ ಕೂಟವನ್ನು ನಡೆಸುವ ಬದ್ಧತೆ. ಸಂಘವನ್ನು ಮನಸಾ ಸ್ವೀಕರಿಸಿದ ಸದಸ್ಯರೇ ಸಂಘದ ಆಸ್ತಿ. ಅದೆಷ್ಟೋ ಮಂದಿ ಹವ್ಯಾಸಿಗಳು ಇಲ್ಲಿ ಅರ್ಥಗಾರಿಕೆಯನ್ನು ಆರಂಭಿಸಿದ ದಿನಮಾನಗಳನ್ನು ಅನಂತಣ್ಣ ಜ್ಞಾಪಿಸಿಕೊಳ್ಳುತ್ತಿದ್ದರು. ಓಂ ಶಕ್ತಿ ಆಂಜನೇಯ ಸನ್ನಿಧಿಯಲ್ಲಿ ಜರಗುತ್ತಿದ್ದ ಕೂಟಗಳು ಬೊಳ್ವಾರಿಗೆ ಶೋಭೆ ತಂದಿತ್ತಿತ್ತು. ದೂರದೂರಿನಿಂದ ಕೂಟದಲ್ಲಿ ಭಾಗವಹಿಸಲೆಂದೇ ಬರುತ್ತಿದ್ದರು. 'ನಮ್ಮ ಸಂಘ' ಎನ್ನುವ ಅಭಿಮಾನವೇ ಸಂಘದ ಅಡಿಗಟ್ಟು.
              ಅನಂತಣ್ಣ ಹೇಳುವಂತಹ ಆರ್ಥಿಕ ಸ್ಥಿತಿವಂತರಲ್ಲ. ಉತ್ತಮ ಹೃದಯ ವೈಶಾಲ್ಯವುಳ್ಳವರು. ಆ ಕಾಲಘಟ್ಟದಲ್ಲಿ ಸಂಘದ ಆರ್ಥಿಕ ಸ್ಥಿತಿಗಳು ಅಷ್ಟೊಂದು ಉತ್ತಮವಾಗಿರಲಿಲ್ಲ. ತಾಳಮದ್ದಳೆಗೆ ಆಗಮಿಸಿದ ಕಲಾವಿದರಿಗೆ, ಕೆಲವೊಮ್ಮೆ ಅರ್ಥ ಹೇಳದವರಿಗೂ ಕಾಫಿ, ತಿಂಡಿಗಳ ಆತಿಥ್ಯವನ್ನು ನೀಡದೆ ಕಳುಹಿಸುತ್ತಿರಲಿಲ್ಲ. ಯಾರಾದರೂ ಚಹ ಸೇವನೆ ಮಾಡದೇ ತೆರಳಿದರೆ ಅವರಿಗೆ ದುಃಖವಾಗುತ್ತಿತ್ತು. 'ಮೊದಲು ಆತಿಥ್ಯ, ನಂತರ ಕೂಟ' ಎಂದು ಒಮ್ಮೆ ಹೇಳಿದ್ದರು. ತಾಳಮದ್ದಳೆಯಲ್ಲಿ ನಿರಂತರತೆಯನ್ನು ಕಾಪಾಡಿಕೊಂಡಿದ್ದರು.
               ಅನಂತಣ್ಣ ಸ್ವತಃ ಅರ್ಥಧಾರಿ. ವೇಷಧಾರಿ ಕೂಡಾ. ಬೊಳ್ವಾರಿನ ಕೂಟದಲ್ಲಿ ಅತಿಥಿಗಳಿಗೆ ಮೊದಲಾದ್ಯತೆ. ಮಿಕ್ಕುಳಿದ ಅರ್ಥಗಳಿದ್ದರೆ ತಾನು ಇಟ್ಟುಕೊಳ್ಳುತ್ತಿದ್ದರು. ತಾಳಮದ್ದಳೆಯ ಅಲಿಖಿತ ಸಂವಿಧಾನಕ್ಕೆ ಆಗುವ ತೊಡಕನ್ನು ಸಹಿಸಿ ಅತಿಥಿಗಳಿಗೆ ನೋವಾಗದಂತೆ ಅರ್ಥ ಹಂಚುತ್ತಿದ್ದರು. ಒಮ್ಮೆ ಹೀಗಾಯಿತು - ಸಂಘದ ತಾಳಮದ್ದಳೆ. ಪ್ರಸಂಗ ಸುಧನ್ವ ಮೋಕ್ಷ. ಅಂದು ಪ್ರಭಾವತಿಯ ಅರ್ಥವನ್ನು ಹೇಳುವ ಕಲಾವಿದರು ಸಮಯಕ್ಕೆ ಬಾರದೆ ರಕ್ತದೊತ್ತಡವನ್ನು ಹೆಚ್ಚಿಸಿದ್ದರು. ಕಥೆ ಮುಂದುವರಿಯಿತು. ಇನ್ನೇನು ಸುಧನ್ವ ಮತ್ತು ಅರ್ಜುನನ ಯುದ್ಧದ ಸನ್ನಿವೇಶ  ಸನ್ನಿಹಿತವಾಗುತ್ತಿದ್ದಂತೆ ಗುಟ್ಟಲ್ಲಿ ಹೇಳಿದರು, ಪ್ರಭಾವತಿ ಅರ್ಥವನ್ನು ಹೇಳುವವರು ಬಂದಿದ್ದಾರೆ. ಸ್ವಲ್ಪ ಸುಧಾರಿಸಿ. ಕಥಾನಕ ಮುಂದುವರಿದಾಗಿತ್ತು. ಅವರ ಕೋರಿಕೆಯಂತೆ ಪ್ರಸಂಗಕ್ಕೆ 'ರಿವರ್ಸ್ ಗೇರ್' ಎಳೆಯಲೇ ಬೇಕಾಗಿತ್ತು. ಕಲಾವಿದರಿಗೆ ನೋವಾಗಬಾರದೆನ್ನುವ ಕಳಕಳಿ ನಿಜಕ್ಕೂ ಅಪ್ಪಟ. ಅನಂತಣ್ಣನ ಈ ಮನಃಸ್ಥಿತಿಯನ್ನು ಎಲ್ಲರೂ ಗೌರವಿಸಿದ್ದರು ಕೂಡಾ.
              ಪುತ್ತೂರು ಸನಿಹದ ತನ್ನ ಬರೆಪ್ಪಾಡಿ ಮನೆಯಲ್ಲಿ ಬಹುಕಾಲ ಶ್ರೀ ರಾಘವೇಂದ್ರ ಆರಾಧನೆಯ ದಿವಸ ತಾಳಮದ್ದಳೆ ಕೂಟ ಖಾಯಂ. ರಾತ್ರಿ ಪೂಜೆಯ ಬಳಿಕ ತಾಳಮದ್ದಳೆ. ಆಮಂತ್ರಿತರಲ್ಲದೆ ಸುದ್ದಿ ಕೇಳಿ ಕಲಾವಿದರು ಭಾಗವಹಿಸುತ್ತಿದ್ದರು. ಅಂದಿನ ಸುಗ್ರಾಹಸ ಭೋಜನವೇ ಒಂದು ಸುದ್ದಿ. ರಾತ್ರಿಯಿಡೀ ಉಪಾಹಾರದ ದಾಸೋಹ. ಬೆಳಿಗ್ಗೆ ಕೂಟ ಮುಗಿದು ಬೆಳಗ್ಗಿನ ಉಪಾಹಾರ ಮುಗಿಸಿದ ಬಳಿಕವೇ ಕಲಾವಿದರಿಗೆ ವಿದಾಯ. ಅವರವರ ಆಸಕ್ತಿಗೆ ಸರಿಯಾದ ಆತಿಥ್ಯ. ಕೆಲವರಿಗೆ ವೀಳ್ಯ ಇಷ್ಟವಾದರೆ, ಇನ್ನೂ ಕೆಲವರಿಗೆ ಬೀಡಿ, ಸಿಗರೇಟ್! ಆ ಕಾಲಘಟ್ಟದಲ್ಲಿ ಇದೆಲ್ಲ ಮಾನ್ಯವಾಗಿತ್ತು. ಒಟ್ಟಾರೆಯಾಗಿ ಕಲಾವಿದರು ಖುಷಿಯಾಗಿರಬೇಕು ಎನ್ನುವ ಧೋರಣೆ.
              ತಾಳಮದ್ದಳೆಯ ಹಿರಿಯ ಅರ್ಥಧಾರಿಗಳ ಹತ್ತಿರದ ಒಡನಾಟವಿತ್ತು. ತಾಳಮದ್ದಳೆ ಆಲಿಸಲೆಂದೇ ದೂರದೂರಕ್ಕೆ ಪ್ರಯಾಣಿಸುತ್ತಿದ್ದರು. ಹೀಗೆ ಹೋದಾಗಲೆಲ್ಲಾ ಅನಂತಣ್ಣನಿಗೆ ಒಂದು ಅರ್ಥ ಖಾಯಂ. ಡಾ.ಶೇಣಿ, ರಾಮದಾಸ ಸಾಮಗರು, ಕಾಂತ ರೈಗಳು... ಮೊದಲಾದ ಹಿರಿಯರೊಂದಿಗೆ ಅರ್ಥ ಹೇಳಿದ ಖುಷಿಯನ್ನು ಆಗಾಗ್ಗೆ ಹಂಚಿಕೊಳ್ಳುವುದಿತ್ತು. ತಾಳಮದ್ದಳೆಗಳ ಸ್ವಾರಸ್ಯಗಳು ಬರೆಪ್ಪಾಡಿಯವರ ನಿಷಂಗದಲ್ಲಿ  ಸಾಕಷ್ಟಿತ್ತು. ಲಹರಿ ಬಂದಾಗ ಆಪ್ತರಲ್ಲಿ ಹಂಚಿಕೊಳ್ಳುತ್ತಿದ್ದರು.
              "ಯಕ್ಷಗಾನದ ಒಲವು ಇದೆಯೆಂದು ಗೊತ್ತಾದರೆ ಸಾಕು, ಅಂತಹವರನ್ನು ಎಳೆದು ತಂದು ಅರ್ಥ ಹೇಳಿಸುವ ದೊಡ್ಡ ಗುಣ. ಸಂಘದ ಕೂಟ ಅಲ್ಲದೆ ಬೇರೆ ಸಮಾರಂಭಗಳ ಕೂಟಗಳಿಗೆ ಕರೆ ಬಂದಾಗ ಸಂತೋಷದಿಂದ ಸಂಘಟಿಸುತ್ತಿದ್ದರು. ಅಲ್ಲಿ ಸಿಕ್ಕಿದ ವೀಳ್ಯವನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತಿದ್ದರು. ಹಿಮ್ಮೇಳ ಪರಿಕರಗಳನ್ನು ಸ್ವತಃ ಹೊತ್ತೊಯ್ಯುತ್ತಿದ್ದರು. ಇಂತಹ ವಿಚಾರಗಳು ಅವರಿಗೆ ಅವಮಾನವಲ್ಲ, ಎಂದು ಅವರ ಒಡನಾಟವನ್ನು ನೆನಪು ಮಾಡಿಕೊಳ್ಳುತ್ತಾರೆ," ಕಲಾವಿದ ಪಿ.ಜಿ.ಜಗನ್ನಿವಾಸ ರಾವ್.
               ಅನಂತಣ್ಣನಿಗೆ ಪೌರೋಹಿತ್ಯ ವಿಭಾಗದಲ್ಲಿ ಪರಿಣತಿಯಿತ್ತು. ಅದನ್ನೆಲ್ಲೂ ತೋರಿಸಿಕೊಂಡಿಲ್ಲ. ಆಯಾಯಾ ಕ್ಷೇತ್ರಕ್ಕೆ ಸರಿಯಾದ ಉಡುಪು, ಭಾಷೆ, ಒಡನಾಟ. ಯಕ್ಷಗಾನದ ಸಂಪರ್ಕಕ್ಕೆ ಬಂದಾಗ ತಾನೋರ್ವ ವೈದಿಕ ಎನ್ನುವುದನ್ನು ಪೂರ್ತಿಯಾಗಿ ಮರೆಯುತ್ತಿದ್ದರು. ಎಂದೂ ಫೋಸ್ ಕೊಡುತ್ತಿರಲಿಲ್ಲ. ಹಾಗೆಂತ ಪೌರೋಹಿತ್ಯ ಕ್ಷೇತ್ರಕ್ಕೆ ಬಂದಾಗ ಅಲ್ಲಿ ಯಕ್ಷಗಾನದ ಯಾವುದೇ ಸುಳಿವು ಇಲ್ಲದಂತೆ ಸ್ವಯಂ ನಿಯಂತ್ರಣವಿತ್ತು. ಉತ್ತಮ ಭಜನಾ ಹಾಡುಗಾರರು ಕೂಡಾ.
ಬಹುತೇಕ ಪ್ರಸಂಗಗಳ ಪದ್ಯಗಳು ಕಂಠಸ್ಥ. ಎಲ್ಲಾ ನಮೂನೆಯ ಅರ್ಥಗಳನ್ನು ಹೇಳಿದ ಅನುಭವಿ.
                ಒಮ್ಮೆ ಕೀರ್ತಿಶೇಷ ಬೊಳ್ವಾರು ಮಾಧವ ನಾಯಕರು ಅನಂತಣ್ಣನ ಹನುಮಂತನ ಅರ್ಥವನ್ನು ಕೇಳಿ ಖುಷಿಯಿಂದ ಹೇಳಿದ್ದರು, "ಆಂಜನೇಯ ಸಂಘದ ತಾಳಮದ್ದಳೆಗಳಲ್ಲಿ ಹನುಮಂತ ಪಾತ್ರ ಬರುವ ಪ್ರಸಂಗವಿದ್ದರೆ ಅದರಲ್ಲಿ ಹನುಮಂತನ ಪಾತ್ರದ ಅರ್ಥವನ್ನು ನೀವೇ ನಿರ್ವಹಿಸಬೇಕು." ಅಂದಿನಿಂದ ಮಾಧವ ನಾಯಕರ ಮಾತನ್ನು ಸುಳ್ಳಾಗಿಸಲಿಲ್ಲ. ಒಂದೆರಡು ಬಾರಿ ಅವಕಾಶಗಳು ತಪ್ಪಿದಾಗ ಅಸಹನೆಗೊಂಡಿದ್ದರು.
                ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಡಿಯಲ್ಲಿ ’ಮಹಿಳಾ ಯಕ್ಷಗಾನ ಸಂಘದ’ ಸ್ಥಾಪನೆಯ ಕನಸು ನನಸಾದಾಗ ಖುಷಿ ಪಟ್ಟಿದ್ದರು. ಹೊಸಬರಿಗೆ ಅರ್ಥಗಳನ್ನು ಸ್ವತಃ ಬರೆಯುತ್ತಿದ್ದರು. ಮರಣಿಸುವ ಹಿಂದಿನ ರಾತ್ರಿ ಹವ್ಯಾಸಿಗಳಿಗಾಗಿ ವೀರಮಣಿ ಕಾಳಗ ಪ್ರಸಂಗಕ್ಕೆ ಅರ್ಥ ಬರೆಯುವ ಕಾಯಕದಲ್ಲಿದ್ದರು. "ಪ್ರಸಂಗ, ಕವಿ ಮತ್ತು ಪಾತ್ರಗಳ ಆಶಯವನ್ನು ಕಲಾವಿದರು ಅರ್ಥ ಮಾಡಿಕೊಳ್ಳಬೇಕು. ಭಾವನಾತ್ಮಕವಾಗಿ ಅರ್ಥ ಹೇಳಿದಾಗ ಪರಿಣಾಮ ಜಾಸ್ತಿ. ಅರ್ಥಗಾರಿಕೆ ಭಾಷಣದಂತಿರಬಾರದು", ಎನ್ನುತ್ತಿದ್ದರು.
                ಪೂಜ್ಯ ಪೇಜಾವರ ಶ್ರೀಗಳ ಬಾಲ್ಯದ ಒಡನಾಡಿ ಅನಂತಣ್ಣ. ಮೊನ್ನೆ ಅವರ ಚಾತುರ್ಮಾಸ್ಯದ ಸಂದರ್ಭದಲ್ಲಿ ಜರುಗಿದ ವಾಲಿ ಮೋಕ್ಷ ಪ್ರಸಂಗದ 'ವಾಲಿ'ಯ ಅರ್ಥವನ್ನು ಭಾವನಾತ್ಮಕವಾಗಿ ನಿರ್ವಹಿಸಿದ್ದರು. ಬಪ್ಪಳಿಗೆಯ ’ಅಗ್ರಹಾರ’ ಗೃಹದಲ್ಲಿ ಜರುಗಿದ”ಪುತ್ತೂರು ಗೋಪಣ್ಣ’ ಅವರ ಸಂಸ್ಮರಣೆಯ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಮೊನ್ನೆಯಷ್ಟೇ ದೂರವಾದ ಚಿದಾನಂದ ಕಾಮತ್ ಕಾಸರಗೋಡು ಅವರ ಮರಣದ ಸುದ್ದಿಗೆ ಮರುಗಿದ್ದರು.
                "ಅನಂತಣ್ಣನದು ಯಕ್ಷನಿಸ್ಪೃಹ ವ್ಯಕ್ತಿತ್ವ. ಕಪಟದಿಂದ ದೂರ. ಹವ್ಯಾಸಿಗಳಲ್ಲಿ ಹೆಚ್ಚೆಚ್ಚು ಕಲಾವಿದರು ರೂಪುಗೊಳ್ಳಬೇಕೆಂಬ ಆಶೆಯನ್ನು ಹೊಂದಿದ್ದರು. ಫಲಾಪೇಕ್ಷೆಯಿಲ್ಲದೆ ಯಕ್ಷಗಾನಕ್ಕಾಗಿ ಸಮರ್ಪಿಸಿಕೊಂಡಿರುವುದು ಅಜ್ಞಾತ ಸತ್ಯ," ಎಂದು ಆಂಜನೇಯ ಯಕ್ಷಗಾನ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯರು ಅನಂತಕೃಷ್ಣ ಭಟ್ಟರ ಗುಣವನ್ನು ನೆನಪಿಸಿಕೊಳ್ಳುತ್ತಾರೆ.
             ಪುತ್ತೂರಿನ ಯಕ್ಷಗಾನ ಪರಿಸರವನ್ನು ತನ್ನ ಉಸಿರಿನಂತೆ ಕಾಪಾಡಿ ಬೆಳೆಸಿದ್ದರು. ಕೀರ್ತಿಶೇಷ ಬರೆಪ್ಪಾಡಿ ನಾರಾಯಣ ಭಟ್ ಮತ್ತು ಬರೆಪ್ಪಾಡಿ ಪುರಂದರ ಭಟ್ ಅನಂತಣ್ಣನ ಸಹೋದರರು. ಮಡದಿ ಸುಗುಣಾ.
ಎಂಭತ್ತನಾಲ್ಕರ ಬರೆಪ್ಪಾಡಿ ಅನಂತಕೃಷ್ಣ ಭಟ್ಟರು ದೂರವಾಗಿದ್ದಾರೆ. ಅವರು ಅನುಷ್ಠಾನಿಸಿ ಬಿಟ್ಟುಹೋದ ಗುಣಗಳು ಮೌನವಾಗಿದೆ. ಯಕ್ಷಗಾನದ ಕುರಿತು ಎಂದೂ ಗೊಣಗದ ಅನಂತಣ್ಣ ಅದನ್ನೊಂದು ಆರಾಧನಾ ತಾಣವನ್ನಾಗಿ ಸ್ವೀಕರಿಸಿದ್ದರು. ಬರೆಪ್ಪಾಡಿಯವರಿಗಿದು ಅಕ್ಷರ ನಮನ.



No comments:

Post a Comment