Saturday, February 3, 2018

ಮಸಿ ಆರಿದ ಬೆವರ ಬರಹ

         ಕುಬಣೂರು ಶ್ರೀಧರ ರಾವ್ ಯಕ್ಷಗಾನದ ಕಟೀಲು ಮೇಳದ ಪ್ರಧಾನ ಭಾಗವತ. ಯಕ್ಷಗಾನಕ್ಕೆ ಸೀಮಿತವಾಗಿರುವಯಕ್ಷಪ್ರಭಾ ಪತ್ರಿಕೆಯ ಸಂಪಾದಕ, ಪ್ರಸಂಗಕರ್ತ. ಒಂದೊಂದು ಅಕ್ಷರಗಳು ಪದಗಳಾಗಿ ಪದ್ಯಗಳಾಗುತ್ತವೆ, ಪ್ರಸಂಗವಾಗುತ್ತದೆ. ಪ್ರತಿ ಅಕ್ಷರಗಳು ಪೋಣಿತವಾಗಿ ಸುದ್ದಿಯನ್ನು ಹೊತ್ತು ತರುವ ಪತ್ರಿಕೆಯಾಗಿದೆ. ಎರಡರ ಅಕ್ಷರಯಾನಕ್ಕೆ ಪೂರ್ಣವಿರಾಮ ಹೇಳಿದ್ದಾರೆ. ಬದುಕಿಗೂ ವಿದಾಯ (2017 ಸೆ.18)  ಹೇಳಿದ್ದಾರೆ. ಅಕ್ಷರಗಳನ್ನು ಕಟ್ಟಿಕೊಡುತ್ತಿದ್ದ ಲೇಖನಿಯ ಮಸಿಯ ತೇವ ಆರಿಹೋಗಿದೆ. 
       ಯಕ್ಷಪ್ರಭಾ ಮಾಸಿಕಕ್ಕೆ ಕುಬಣೂರು ಶ್ರೀಧರ ರಾಯರು (66) ಸಂಪಾದಕರು. ಪತ್ರಿಕೆಯ ನಿರ್ವಹಣೆ ಮತ್ತು ಹೂರಣ ತುಂಬುವುದರಲ್ಲಿ ಅವರದು ಒಂಟಿ ಸೈನ್ಯದ ಶಕ್ತಿ. ಭಾಗವತಿಕೆಯನ್ನು ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಅವರ ಕೂಸಾದ ಪತ್ರಿಕೆಯನ್ನೂ ಪ್ರೀತಿಸುತ್ತಿದ್ದರು. ಆಗಸ್ಟ್ ಸಂಚಿಕೆಯೊಂದಿಗೆ ಪತ್ರಿಕೆಯು ಇಪ್ಪತ್ತಮೂರನೇ ವರುಷಕ್ಕೆ ಕಾಲಿಟ್ಟಿತ್ತು. ತನ್ನ ಸಿಂಗಾಪುರ ಪ್ರವಾಸಕ್ಕಾಗಿ ಸೆಪ್ಟೆಂಬರ್ ಸಂಚಿಕೆಯ ಪ್ರಕಟಣೆಗೆ ರಜೆ ನೀಡಿದ್ದರು. ಆದರೆ ರಜೆಯು ಶಾಶ್ವತವಾಗುತ್ತದೆನ್ನುವ ಅವ್ಯಕ್ತ ಸತ್ಯವು ಯಾರಿಗೂ ಗೋಚರಿಸಲಿಲ್ಲ. ಇಪ್ಪತ್ತ ಎರಡು ವರುಷದ ಅಕ್ಷರಯಾನದಲ್ಲಿ ಒಂದು ದಿವಸವೂ ಪತ್ರಿಕೆಯು ರಜೆ ಪಡೆದಿಲ್ಲ.
       ಪತ್ರಿಕೆಯ ದಶಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಸಂದರ್ಭದಲ್ಲಿ ಕುಬಣೂರರು, “ಪತ್ರಿಕೆಯನ್ನು ಎಲ್ಲಾ ವರ್ಗದ, ಅದರಲ್ಲೂ ಪಾಮರರು ಓದುವಂತಾಗಬೇಕು. ಯಕ್ಷಗಾನದ ಸುದ್ದಿಗಳು ಬಾಯ್ಮಾತಿನ ಮೂಲಕ ನಂದಿ ಹೋಗಬಾರದು. ಅದು ದಾಖಲಾಗಬೇಕು. ಪತ್ರಿಕೆಯೊಂದನ್ನು ಸಾಕಿ ಸಲಹಲು ಯಕ್ಷಗಾನ ಕ್ಷೇತ್ರಕ್ಕೆ ತೊಡಕಾಗದು ಎಂದ ನೆನಪು ಹಸಿಯಾಗಿದೆ. ಅಂದರೆ ಪತ್ರಿಕೆಯ ಪ್ರಸಾರ ವ್ಯಾಪ್ತಿಯನ್ನು ಹಿಗ್ಗಿಸಲು ತೊಂದರೆಯಾಗದು ಎನ್ನುವ ದೂರ ನಿರೀಕ್ಷೆ. ತಾನು, ತನ್ನ ಮನೆಯವರಿಗೆ ಹೆಚ್ಚು ಶ್ರಮ ಕೊಡುತ್ತಿದ್ದ ಪತ್ರಿಕೆಯನ್ನು ಕುಬಣೂರರು ಬದ್ಧತೆಯಂತೆ ಪ್ರಕಾಶಿಸುತ್ತಿದ್ದರು. ಪ್ರಾಯಃ ಖರ್ಚು ವೆಚ್ಚಗಳ ಕುರಿತು ಮಾತನಾಡಿದರೆ ವೆಚ್ಚದ ಕಡೆಗೆ ತಕ್ಕಡಿ ವಾಲುತ್ತಿತ್ತು.
       ಯಕ್ಷಗಾನದಲ್ಲಿ ಸಾಂಸ್ಕøತಿಕ ದಾಖಲಾತಿಯು ನವಮಾಧ್ಯಮಗಳ ಭರಾಟೆಯ ಸದ್ದಿನ ಮಧ್ಯೆ ಕ್ಷೀಣವಾಗಿ ಕೇಳುತ್ತದೆ. ಈಗಂತೂ ಪ್ರದರ್ಶನಕ್ಕಿಂತ ಪ್ರಚಾರವೇ ಹೆಚ್ಚು! ಪತ್ರಿಕೆಗಳಲ್ಲಿ ಜಾಹೀರಾತು ನೀಡಿದರೆ ಮಾತ್ರ ಸುದ್ದಿ ಪ್ರಕಟ ಎನ್ನುವ ಸ್ಥಿತಿಯೂ ಇದೆಯೆನ್ನಿ. ವಸ್ತುಸ್ಥಿತಿ ಹೀಗಿರುತ್ತಾ ಯಕ್ಷಗಾನದ ಸುದ್ದಿಗಳು ಹಳ್ಳಿಯಿಂದಲೂ ಹರಿದು ಬರಬೇಕು ಎನ್ನುವ ಇರಾದೆ ಕುಬಣೂರರಲ್ಲಿತ್ತು. ಜಾಹೀರಾತುಗಳೇ ಆರ್ಥಿಕ ಮೂಲವಾಗಿರುವ ಪತ್ರಿಕೆಯ ಪ್ರಕಾಶನವು ಸುಲಭ ಸಾಧ್ಯವಲ್ಲವೆನ್ನುವ ಎಚ್ಚರ ಅವರಲ್ಲಿತ್ತು. ಬಹುಶಃ ಎಚ್ಚರವೇ ಎರಡು ದಶಕಗಳ ಕಾಲ ಪತ್ರಿಕೆಯನ್ನು ಮುನ್ನಡೆಸಿತ್ತು.
ಇಪ್ಪತ್ತು ವರುಷದ ಹಿಂದೆ ಕಲಾವಿದನೊಬ್ಬ ಪತ್ರಿಕೆಯ ಸಂಪಾದಕನಾಗುವುದು ದೊಡ್ಡ ಮತ್ತು ಅಪರೂಪದ ಸುದ್ದಿ. ಜಾಹೀರಾತುಗಳಿಲ್ಲದೆ ಒಂದಷ್ಟು ಕಾಲ ಪ್ರಕಟಿಸಿದ್ದರು. ಆಸಕ್ತರಿಗೆ ಉಚಿತವಾಗಿ ಹಂಚಿದ್ದರು. ಸುದ್ದಿ ಕೊಡುವಂತೆ, ಲೇಖನ ಬರೆಯುವಂತೆ ವಿನಂತಿಸಿದ್ದರು. ಚಂದಾದಾರರನ್ನು ಓಡಾಡಿ ದಾಖಲಿಸಿದ್ದರು. ಆರ್ಥಿಕ ಭಾರವನ್ನು ಹಗುರ ಮಾಡಲು ವರುಷಕ್ಕೊಂದು ವಿಶೇಷಾಂಕವನ್ನೂ ಹೊರ ತರುತ್ತಿದ್ದರು. ತನ್ನ ಮೇಳದ ತಿರುಗಾಟದ ಮಧ್ಯೆ ಪತ್ರಿಕೆಯ ಪ್ರಕಾಶನ ಕಾರ್ಯ ಮೇಲ್ನೋಟಕ್ಕೆ ಕಂಡಷ್ಟು ಸುಲಭವಲ್ಲ.
       ಯಕ್ಷಗಾನ ಪತ್ರಿಕೆಗೆ ಯಕ್ಷಗಾನದ ಹೊರತಾದ ಜಾಹೀರಾತು ದುರ್ಲಭ. ಆರಂಭದಲ್ಲಿ ಯತ್ನಿಸಿದರೂ ಯಶ ಕಾಣಲಿಲ್ಲ. ಆದರೆ ಯಕ್ಷಗಾನ ಸಂಘಟಕರು ಯಕ್ಷಪ್ರಭಾದ ಕೈತಾಂಗು ಆಗಿ ಆದರಿಸಿದ್ದಾರೆ ಎನ್ನುವ ಮಾತನ್ನು ಆಗಾಗ್ಗೆ ಕುಬಣೂರು ಹೇಳುತ್ತಿದ್ದರು. ಪ್ರದರ್ಶನವೊಂದರ ಆಯೋಜನೆಯ ಹಿನ್ನೆಲೆಯಲ್ಲಿ ಸಂಘಟಕರು ರೂಪಿಸುವ ಬಜೆಟಿನಲ್ಲಿ ಯಕ್ಷಪ್ರಭಾ ಪತ್ರಿಕೆಯ ಜಾಹೀರಾತು ವೆಚ್ಚವು ಕೂಡಾ ಸೇರುತ್ತಿತ್ತು!  ಪತ್ರಿಕೆಯೊಂದನ್ನು ಕಲಾಭಿಮಾನಿಗಳೂ ಸ್ವೀಕರಿಸಿದ ಬಗೆಯಿದು.
       ಪ್ರಕೃತ ಯಕ್ಷಗಾನ ವಲಯದ ಕಾರ್ಯಕ್ರಮಗಳ ದಾಖಲಾತಿ, ವ್ಯಕ್ತಿ ಪರಿಚಯ, ವಿಚಾರ-ವಿಮರ್ಶೆ, ಕಲಾವಿಮರ್ಶೆ, ಧ್ವನಿಸುರುಳಿ-ಪುಸ್ತಕ ಪರಿಚಯ, ಕಾರ್ಯಕ್ರಮಗಳ ಮುನ್ನೋಟ, ವರದಿ...ಗಳು ಹೂರಣವಾಗುತ್ತಿದ್ದುವು.  ಯಕ್ಷಗಾನದಂತಹ ಸಂಕೀರ್ಣ ಕಲೆಯ ಬಗ್ಗೆ ಬಹಳಷ್ಟು ವಿಚಾರಪೂರ್ಣ ಲೇಖನ, ವಿಮರ್ಶೆಗಳಿಂದ ಪತ್ರಿಕೆಯನ್ನು ಸಮೃದ್ಧಿಗೊಳಿಸಬಹುದಿತ್ತು. ಆರ್ಥಿಕ ಭಾರವನ್ನು ಹಗುರಗೊಳಿಸುವ ಹೆಗಲುಗಳು ಸಿಗುತ್ತಿದ್ದರೆ ಕುಬಣೂರು ಎಂದೋ ಕೆಲಸ ಮಾಡುತ್ತಿದ್ದರೆನ್ನಿ. “ಕಟೀಲು ಮೇಳದ ಸಂಚಾಲಕರು ತನ್ನ ಮೇಳದ ಪ್ರದರ್ಶನಗಳ ಜಾಹೀರಾತು ನೀಡುವುದರೊಂದಿಗೆ, ಕಟೀಲು ಮೇಳದ ಆಟ ಆಡಿಸುವವರನ್ನು ಚಂದಾದಾರರನ್ನಾಗಿ ಮಾಡಲು ಒಪ್ಪಿಗೆ ನೀಡಿದ್ದರು. ಇದು ನಿಜವಾದ ಪ್ರೋತ್ಸಾಹಎಂದು ಕುಬಣೂರರೊಮ್ಮೆ ಹೇಳಿದ್ದರು. 
       ವಾಣಿಜ್ಯ ಮೇಳಗಳಿಂದ ಪತ್ರಿಕೆಗೆ ಹೇಳುವಂತಹ ಉತ್ತೇಜನ ಇಲ್ಲ. ಒಂದು ತರಹದ ನಿರಾಸಕ್ತಿ ಮನೋಭಾವ. ಅರಿವಿನ ಕೊರತೆಯೋ ಏನೋ? ವೃತ್ತಿಪರ ಕಲಾವಿದರಿಂದ ಹೆಚ್ಚಿನ ಪ್ರೋತ್ಸಾಹವೂ ಇಲ್ಲ, ಅಭಿರುಚಿಯೂ ಇಲ್ಲ. ಸುದ್ದಿ ಸಂಚಯನಕ್ಕೆ ಕೇಳಿಕೊಂಡರೂ ಸಹಕಾರವಿಲ್ಲ. ಹೆಚ್ಚಿನವರಿಗೆ ಅವರದೇ ಆದ ಭ್ರಾಮಕ ಜಗತ್ತಿನಲ್ಲಿ ವಿಹರಿಸುವುದನ್ನು ಬಿಟ್ಟರೆ; ಲೋಕದ ವ್ಯವಹಾರ, ಕಲೆಯ ಗೌರವ, ಔಚಿತ್ಯಪೂರ್ಣ ನಡತೆ ಇಲ್ಲವೇ ಇಲ್ಲ ಎಂಬುದನ್ನು ನನ್ನ ವೈಯಕ್ತಿಕ ಅನುಭವದಿಂದಲೂ, ಪತ್ರಿಕೋದ್ಯಮ ವ್ಯವಸಾಯದಲ್ಲೂ ತಿಳಿದ ಕಠೋರ ಸತ್ಯ ಎನ್ನುವ ವಿಷಾದ ಭಾಗವತರಲ್ಲಿತ್ತು. 
       ನಾಲ್ಕೈದು ವರುಷವಾಯಿತು - ರಂಗುರಂಗಿನ, ವೈಚಿತ್ರ್ಯಪೂರ್ಣ ಕಲಾವಿದನ ಬದುಕು, ದುಶ್ಚಟಗಳನ್ನು ಬಿಂಬಿಸುವ ರಂಜಿತ ಲೇಖನಗಳನ್ನು ಪ್ರಕಟಿಸಿದಲ್ಲಿ ಪತ್ರಿಕೆಯ ಪ್ರಸಾರ ಗಣನೀಯವಾಗಿ ಹೆಚ್ಚಾಗಬಹುದು ಎನ್ನುವ ಪುಕ್ಕಟೆ ಸಲಹೆಯನ್ನು ಕಲಾವಿದರೊಬ್ಬರು ನೀಡಿದ್ದರಂತೆ. ಸಲಹೆಯು ಕುಬಣೂರರಿಗೆ ಕಿರಿಕಿರಿ ಮಾಡಿತ್ತು. ತನ್ನ ನೋವನ್ನು ದೂರವಾಣಿಯಲ್ಲಿ ಹಂಚಿಕೊಂಡಿದ್ದರು. “ಮೇಳದಲ್ಲಿ ಆಟವು ಮಂಗಲವಾಗುವ ಸಮಯಕ್ಕೆ ಆಗಲೇ ಕೆಲವರು ತಮ್ಮ ಸಹಾಯಾರ್ಥದ ಆಟದ ಟಿಕೇಟ್ ನೀಡಿ, ಇನ್ನು ಕೆಲವರು ಅಸೌಖ್ಯದ ನೆಪದಿಂದ ಸಹಾಯ ಯಾಚಿಸಿ ಹಾಗೂ ಹಲಕೆಲವು ಬಗೆಯಿಂದ ಆಟ ಆಡಿಸುವವರನ್ನು ಶೋಷಿಸಿದಾಗ, ನನಗೆ ಪತ್ರಿಕೆಯ ಚಂದಾ ಕೇಳಲು ಯಾ ಅವರ ಹತ್ತಿರ ಹೋಗಲೂ ದಾಕ್ಷಿಣ್ಯವಾಗುತ್ತದೆ,” ಎಂದಿದ್ದ ಶ್ರೀಧರ ರಾಯರ ಮನದ ಮಾತಲ್ಲಿ ಕಲಾವಿದರ (ಕೆಲವರು) ಕುರಿತ ಮರುಕ ವ್ಯಕ್ತವಾಗಿತ್ತು.
       ಎಲ್ಲಾ ಸವಾಲು, ಸಮಸ್ಯೆಗಳನ್ನು ದಾಟಿ ಯಕ್ಷಪ್ರಭಾ ಎರಡು ದಶಕ ಪೂರೈಸಿದೆ. ಕೆಲವೊಮ್ಮೆ ಹೂರಣ ಸೊರಗಿದಾಗ ಹಗುರವಾಗಿ ಮಾತನಾಡಿದವರನ್ನೂ ಬಲ್ಲೆ. ಸಂಪಾದಕರು ವೃತ್ತಿಯೊಂದಿಗೆ ಪತ್ರಿಕೆಯನ್ನೂ ನಿಭಾಯಿಸುವ ಕಾರಣ ಹಾಗಾಗುವುದು ಸಹಜ. ಶ್ರೀಧರ ರಾಯರಿಗೆ ಯಕ್ಷಪ್ರಭಾ ಪ್ರಕಟಣೆಯು ಹಣ ಮಾಡುವ ಕ್ಷೇತ್ರವಾಗಿರಲಿಲ್ಲ. ಹಣ ಕಳೆದುಕೊಳ್ಳುವ ಹವ್ಯಾಸ! ಯಕ್ಷಗಾನದಲ್ಲಿದ್ದು ಏನನ್ನಾದರೂ ಸಾಧನೆ ಮಾಡಬೇಕೆನ್ನುವ ತುಡಿತ. ಹಾಗಾಗಿ ಏನೇನೋ ಮಾಡಲಿಲ್ಲ! ಏನೇನೋ ಆಗಲಿಲ್ಲ!
       ಸಿಕ್ಕಸಿಕ್ಕವರನ್ನು ಕುಬಣೂರರು ಪೀಡಿಸಲಿಲ್ಲ. ಅವರನ್ನು ಹತ್ತಿರದಿಂದ ಬಲ್ಲ ಪ್ರಸಂಗಕರ್ತ ಡಿ.ಎಸ್.ಶ್ರೀಧರ್ ಹೇಳುತ್ತಾರೆ, “ಯಕ್ಷಪ್ರಭಾ ಪತ್ರಿಕೆಯು ಇನ್ನೂರೈವತ್ತು ರೂಪಾಯಿಗೆ ಆಜೀವ ಸದಸ್ಯತ್ಯವನ್ನು ನೀಡಿತ್ತು. ಯಕ್ಷಗಾನವನ್ನೇ ನಂಬಿ ಇಷ್ಟು ದೀರ್ಘ ಕಾಲ ಪತ್ರಿಕೆಯೊಂದು ನಡೆದಿರುವುದು ದಾಖಲೆ.” ಯಕ್ಷಪ್ರಭಾವನ್ನು ಪ್ರತಿ ತಿಂಗಳು ಓದಲು ಕಾದು ಕುಳಿತುಕೊಳ್ಳವ ಓದುಗರಿದ್ದಾರೆ.
       ಯಕ್ಷಪ್ರಭಾ ಸದೃಢವಾಗಬೇಕು. ವ್ಯವಸ್ಥಿತವಾದ ಹೂರಣ ರೂಪುಗೊಳ್ಳಬೇಕು. ಆರೋಗ್ಯಪೂರ್ಣ, ಉತ್ತಮ ಮನಸ್ಸಿನ ಸಂವಾದ, ವಿಮರ್ಶೆಗಳಾಗಬೇಕು. ಹಾಗಾಗಬೇಕಾದರೆ ಪತ್ರಿಕೆಯನ್ನು ಎಲ್ಲರೂ ಕೊಂಡು ಪ್ರೋತ್ಸಾಹಿಸಬೇಕು. ಆಗ ಪತ್ರಿಕೆ ಬೆಳೆಯುತ್ತದೆ. ಹೂರಣ ಅಭಿವೃದ್ಧಿಯಾಗುತ್ತದೆ ಕಳೆದ ವರುಷ ಕಟೀಲಿನಲ್ಲಿ ಜರುಗಿದಶ್ರೀಧರಾಯಣ ಅಭಿನಂದನೆಯಲ್ಲಿ ಭಾಗವತರು ಹಂಚಿಕೊಂಡ ವಿಚಾರ.
ವರುಷ ಕಳೆಯುವುದರೊಳಗೆ ಅವರ ಆಶಯವು ಮೌನವಾಯಿತು. ಬೆವರಿನಿಂದ ಕಟ್ಟಿದಯಕ್ಷಪ್ರಭಾ ಅಕ್ಷರಯಾನವು ಕುಬಣೂರು ಶ್ರೀಧರ ರಾಯರ ಮರಣದಿಂದ ಬೆದರಿದೆ, ಬೆವತಿದೆ. ಬೆವರ ಬರಹಗಳ ಮಸಿ ಆರಿದೆ.
ಪ್ರಜಾವಾಣಿಯ ದಧಿಗಿಣತೋ ಅಂಕಣ / 22-9-2017
 


No comments:

Post a Comment